ಕೈ ನಡಿಗೆಗೆ ಕೇಂದ್ರದ ಕಾನೂನು ಅಡ್ಡಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 7
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಸಾಕಾರವಾಗುವುದಕ್ಕೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಜಾರಿಗೆ ತಂದಿರುವ ನೂತನ ಭೂಸ್ವಾಧೀನ ಮತ್ತು ಪುನರ್ ನಿರ್ಮಾಣ ಮಸೂದೆ ಬಂಡೆಗಲ್ಲಾಗಿ ನಿಲ್ಲುತ್ತದೆಯೇ?
ಜ. 1ರಿಂದ ರಾಷ್ಟ್ರಾದ್ಯಂತ ಜಾರಿಯಾಗಿರುವ ನೂತನ ಭೂಸ್ವಾಧೀನ ಮತ್ತು ಪುನರ್ ನಿರ್ಮಾಣ ಮಸೂದೆಯ ಮೇಲೆ ಕಣ್ಣಾಡಿಸಿದರೆ ಇಂತಹ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮೂರನೇ ಹಂತದ ಕೃಷ್ಣಾ ಕಣಿವೆ ಯೋಜನೆಗಳಿಗೆ ಸರ್ಕಾರ ಅಂದಾಜು ಏನಿಲ್ಲವೆಂದರೂ 17 ಸಾವಿರ ಕೋಟಿ ವೆಚ್ಚ ಮಾಡಬೇಕಾಗುತ್ತದೆ.
ಕೇಂದ್ರ ಸರ್ಕಾರ ನೂತನ ಮಸೂದೆ ಜಾರಿಗೆ ತರುವ ಮುನ್ನ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಅಂದಾಜು ವೆಚ್ಚ ಸರಾಸರಿ ನಾಲ್ಕೂವರೆ ಸಾವಿರ ಕೋಟಿ ಇತ್ತು. ಆದರೆ ಯುಪಿಎ ಸರ್ಕಾರ ಪಾಸು ಮಾಡಿದ ನೂತನ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ನಿರ್ಮಾಣ ಮತ್ತು ಪುನರ್ವಸತಿ ಮಸೂದೆಯಿಂದಾಗಿ ಕೃಷ್ಣಾ ಕಣಿವೆ ಯೋಜನೆಗಳನ್ನು ಪೂರ್ಣಗೊಳಿಸಲು 17 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸುವುದು ಇದೆ. ಅಣೆಕಟ್ಟು ಎತ್ತರಿಸುವುದರಿಂದ ಬಾಗಲಕೋಟೆ ನಗರ ಸೇರಿದಂತೆ ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆ ವ್ಯಾಪ್ತಿಯ ಘಟಪ್ರಭಾ ಮತ್ತು ಕೃಷ್ಣಾ ನದಿ ತೀರದ 30 ಹಳ್ಳಿಗಳ ಸ್ಥಳಾಂತರ ಮತ್ತು ಒಂದು ಲಕ್ಷ ಎಕರೆ ಕೃಷಿ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಮೂರನೇ ಹಂತದ ಕೃಷ್ಣಾ ಕೊಳ್ಳದ ಯೋಜನೆ ಸಂಬಂಧಿಸಿದಂತೆ ಬಾಗಲಕೋಟೆ ನಗರ ಮತ್ತು ಜಿಲ್ಲೆಯ ಬಾಗಲಕೋಟೆ, ಬೀಳಗಿ, ಜಮಖಂಡಿ ಮತ್ತು ಮುಧೋಳ ತಾಲೂಕುಗಳ ವ್ಯಾಪ್ತಿಯ 21 ಗ್ರಾಮಗಳು ಮುಳುಗಡೆಯಾಗಲಿದ್ದರೆ, ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮ ಯೋಜನೆ ಪರಿಣಾಮ ಸ್ಥಳಾಂತರಗೊಳ್ಳಲಿದೆ. 20 ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕೆ 8 ಸಾವಿರ ಎಕರೆ ಜಮೀನು ಭೂಸ್ವಾಧೀನವಾಗಬೇಕು. 21,601 ಗ್ರಾಮೀಣ ಕುಟುಂಬಗಳು ಮತ್ತು 10,826 ನಗರದ ಕುಟುಂಬಗಳು ಯೋಜನೆಯಿಂದ ಸ್ಥಳಾಂತರಗೊಳ್ಳಬೇಕಿದೆ.
ಹೊಸ ಮಸೂದೆ ಏನನ್ನುತ್ತದೆ?: ಬ್ರಿಟಿಷ್ ಆಡಳಿತಾವಧಿಯಿಂದ ಜಾರಿಯಲ್ಲಿದ್ದ 1894ರ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಅಧಿಕಾರವಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ನಿರ್ಮಾಣ ಮತ್ತು ಪುನರ್ವಸತಿ ಮಸೂದೆ 2013, ಬ್ರಿಟಿಷ್ ರಾಜ್ನ ಕಾಯ್ದೆಯಡಿ ಜಿಲ್ಲಾಧಿಕಾರಿಗೆ ಇದ್ದ ಅಧಿಕಾರವನ್ನು ಕಿತ್ತುಕೊಳ್ಳುವುದರ ಜೊತೆಗೆ ಭೂಸ್ವಾಧೀನಕ್ಕೆ ಮಾತ್ರ ಮಹತ್ವ ನೀಡದೇ ಪುನರ್ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎನ್ನುವ ಅಂಶಗಳನ್ನು ಕಾಯ್ದೆಯಲ್ಲಿ ಅಡಕಗೊಳಿಸಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಅದೂ ಬೃಹತ್ ಪ್ರಮಾಣದಲ್ಲಿ ನೂತನ ಭೂಸ್ವಾಧೀನ ಮಸೂದೆ ಇದೀಗ 3ನೇ ಹಂತದ ಕೃಷ್ಣಾ ಕೊಳ್ಳದ ಯೋಜನೆಯಿಂದಾಗಿ ಜಾರಿಯಾಗುತ್ತಿದೆ. ನೂತನ ಮಸೂದೆಯ ಪ್ರಕಾರ ನೀರಾವರಿ ಮತ್ತು ಮಿಶ್ರ ಬೆಳೆ ಕೃಷಿ ಜಮೀನನ್ನು ವಶಪಡಿಸಿಕೊಳ್ಳಬಾರದು.
ಒಂದು ವೇಳೆ ನೀರಾವರಿ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದಲ್ಲಿ ವಶಪಡಿಸಿಕೊಳ್ಳುವ ಜಮೀನಿನ ಪ್ರಮಾಣಕ್ಕೆ ಅನುಗುಣವಾಗಿ ಬಂಜರು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಒಂದು ಇದು ಸಾಧ್ಯವಾಗದೇ ಇದ್ದಲ್ಲಿ ಭವಿಷ್ಯದಲ್ಲಿ ಆಹಾರ ಭದ್ರತೆ ಖಾತ್ರಿ ಪಡಿಸಿಕೊಳ್ಳುವುದಕ್ಕೆ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಹಣ ಮೀಸಲು ಇಡಬೇಕು ಎಂದು ಹೇಳುತ್ತದೆ.
ನೀರಾವರಿ ಯೋಜನೆಯಿಂದ ಒಂದು ವೇಳೆ ಬಾಧಿತಗೊಳ್ಳುವ ಪ್ರತಿಯೊಂದು ಕುಟುಂಬಕ್ಕೆ ಅಚ್ಚುಕಟ್ಟು ಪ್ರದೇಶದಲ್ಲಿ ಕನಿಷ್ಠ ಒಂದು ಎಕರೆ ನೀರಾವರಿ ಜಮೀನು ನೀಡಬೇಕು. ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯ ಅದೇ ವ್ಯಾಪ್ತಿಯಲ್ಲಿ ಇರಬೇಕು ಎಂದು ಹೇಳುವುದರ ಜೊತೆಗೆ ಪ್ರತಿಯೊಂದು ಕುಟುಂಬಕ್ಕೆ ಪರಿಹಾರದ ಹೊರತಾಗಿ ರು. 50 ಸಾವಿರ ಆರ್ಥಿಕ ನೆರವು ನೀಡಬೇಕು ಎನ್ನುತ್ತದೆ.
ಒಟ್ಟಾರೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಪಾಸು ಮಾಡಿದ ನೂತನ ಭೂಸ್ವಾಧೀನ ಮತ್ತು ಪುನರ್ನಿರ್ಮಾಣ ಮಸೂದೆ, ರಾಜ್ಯದ ಮಟ್ಟಿಗೆ ಯೋಜನೆಯ ಅನುಷ್ಠಾನದ ಜೊತೆಗೆ ಕಾಯ್ದೆ ಪಾಲನೆ ದೊಡ್ಡ ಸವಾಲಾಗಿ ಪರಿಣಮಿಸಿರುವುದಂತೂ ನಿಜ.
-ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

