ಆರಕ್ಷಕರಿಗೆ ರಕ್ಷಣೆ ನೀಡುವವರಾರು?
ಕನ್ನಡಪ್ರಭ ವಾರ್ತೆ, ಕಲಘಟಗಿ, ಜ. 10
ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವುದರೊಟ್ಟಿಗೆ ಶ್ರೀಸಾಮಾನ್ಯರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡುವ ಮಹತ್ತರ ಜವಾಬ್ದಾರಿ ಹೊಂದಿರುವ ಇಲ್ಲಿನ ಆರಕ್ಷಕ ಸಿಬ್ಬಂದಿಯೇ ಹತ್ತು ಹಲವು ಸಮಸ್ಯೆಗಳಿಂದ ಬಳಲುವಂತಾಗಿದೆ..!
ಇದೇನಿದು ಆಶ್ಚರ್ಯ ಎಂದು ಹೌಹಾರಬೇಡಿ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಕಲಘಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ನೋಡಿದವರಿಗೆ ಆರಕ್ಷಕ ಸಿಬ್ಬಂದಿ ಮೇಲೆ ಮರಕು ಹುಟ್ಟದೆ ಇರಲಾರದು.
ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ಪ್ರತಿಭಟನೆ ನಡೆಸುವವರನ್ನು ನಿಯಂತ್ರಿಸುವವರು ತಮಗೆ ಬೇಕಾದ ಅವಶ್ಯಕ ಬೇಡಿಕೆಗಳ ಈಡೇರಿಕೆ ಸಂಬಂಧಿಸಿದಂತೆ ಯಾರೊಬ್ಬರ ಬಳಿಯೂ ಚಕಾರ್ ಶಬ್ದ ಎತ್ತದೆ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಮರೀಚಿಕೆ: ಹುಬ್ಬಳ್ಳಿ-ಕಾರವಾರ ಹೆದ್ದಾರಿ ಪಕ್ಕದಲ್ಲಿರುವ ಈ ಪೊಲೀಸ್ ಠಾಣೆ ನೋಡಲು ಸುಂದರವಾಗಿದ್ದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇದು ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಿದೆ. ಮಾತ್ರವಲ್ಲದೆ, ವಿವಿಧ ಕಾರಣಗಳಿಗಾಗಿ ನ್ಯಾಯ ಬೇಡಿ ಬರುವ ಕಕ್ಷಿದಾರರೂ ಇಲ್ಲಿನ ಅವ್ಯವಸ್ಥೆ ಕಂಡು ಬೆರಗಾಗುವಂತಾಗಿದೆ. ಠಾಣೆಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಠಾಣಾಧಿಕಾರಿಗಳು ಹಿರಿಯ ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತರಲು ಸಾಕಷ್ಟು ಪ್ರಯತ್ನಿಸಿದ್ದರೂ ಈ ವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ.
36 ಗ್ರಾಮಗಳು: ಕಲಘಟಗಿ ತಾಲೂಕು ಒಟ್ಟು 87 ಗ್ರಾಮಗಳನ್ನು ಹೊಂದಿದೆ. ತಾಲೂಕಿನ ಕೇಂದ್ರದ ಸ್ಥಾನದಲ್ಲಿರುವ ಈ ಠಾಣೆ ವ್ಯಾಪ್ತಿಗೆ 56 ಗ್ರಾಮಗಳು ಒಳಪಡುತ್ತವೆ. ಈ ಎಲ್ಲ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವುದರೊಟ್ಟಿಗೆ ಕಳ್ಳಕಾರರು ಹಾಗೂ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಹದ್ದಿನ ಕಣ್ಣುವಿರಿಸಬೇಕಾದ ಆರಕ್ಷಕ ಸಿಬ್ಬಂದಿ ಸಂಖ್ಯೆ ತೀರಾ ಕಮ್ಮಿಯಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ಮಾನಸಿಕ ನೆಮ್ಮದಿಗೆ ಕೊಳ್ಳೆಯಿಟ್ಟಿದೆ.
ಒಟ್ಟು ಸಿಬ್ಬಂದಿ: ಈ ಠಾಣೆಗೆ ಒಬ್ಬ ಇನ್ಸ್ಪೆಕ್ಟರ್, ಓರ್ವ ಸಬ್ ಇನ್ಸ್ಪೆಕ್ಟರ್, ನಾಲ್ಕು ಜನ ಎ.ಎಸ್.ಐ. ಎಂಟು ಜನ ಹವಾಲ್ದಾರ ಹಾಗೂ 24 ಪೇದೆಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ತಾಲೂಕಿನ ಮತ್ತೊಂದು ಗ್ರಾಮವಾಗಿರುವ ಮಿಶ್ರಿಕೋಟಿಯ ಹೊರ ಠಾಣೆ ವ್ಯಾಪ್ತಿಗೆ ಒಟ್ಟು 36 ಗ್ರಾಮಗಳು ಒಳಪಟ್ಟಿವೆ. ಈ ಠಾಣೆಗೆ ಒಬ್ಬ ಹವಾಲ್ದಾರ್, ಇಬ್ಬರು ಪೇದೆಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೇವಲ 3 ಸಿಬ್ಬಂದಿ ಇರುವ ಈ ಹೊರ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದ್ದಲ್ಲಿ ಆಯಾ ಪ್ರದೇಶಕ್ಕೆ ಸಿಬ್ಬಂದಿ ತೆರಳಲು ಹರಸಾಹಸ ಪಡುವಂತಹ ಪರಿಸ್ಥಿತಿ ಇದೆ.
ಅಲ್ಲದೇ, ಆಯಾ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಿಬ್ಬಂದಿಗೆ ಮಾಹಿತಿಯಿದ್ದರೂ ಅಲ್ಲಿಗೆ ತೆರಳಿ ದಾಳಿ ಮಾಡಲು ಆರಕ್ಷಕ ಸಿಬ್ಬಂದಿಯೇ ಹಿಂದೇಟು ಹಾಕುವಂತಹ ಪರಿಸ್ಥಿತಿ ಇಲ್ಲಿ ಕಂಡು ಬರುತ್ತಿದೆ.
ತಾಲೂಕಿನ ಕೇಂದ್ರ ಸ್ಥಳದಲ್ಲಿರುವ ಠಾಣೆ ಸೇರಿದಂತೆ ಹೊರ ಠಾಣೆಗೆ ಸಿಬ್ಬಂದಿಯನ್ನು ಹೆಚ್ಚಿಸಿ ಮೂಲ ಸೌಕರ್ಯ ಒದಗಿಸಿಕೊಡುವಂತೆ ಈ ವರೆಗೂ ನಡೆದಿರುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎರಡೂ ಠಾಣೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ತಾಲೂಕು ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಗಳಗಿ-ಹುಲಕೊಪ್ಪ ಗ್ರಾಮಕ್ಕೆ ಉಪಠಾಣೆ ನಿರ್ಮಿಸಬೇಕೆಂಬ ಬೇಡಿಕೆಯೂ ಕಾಗದದಲ್ಲೇ ಉಳಿದುಕೊಂಡಿದೆ.
ರಕ್ಷಣೆ ನೀಡುವವರ್ಯಾರು..?: ಶ್ರೀಸಾಮಾನ್ಯರಿಗೆ ರಕ್ಷಣೆ ನೀಡುವ ಆರಕ್ಷಕ ಸಿಬ್ಬಂದಿಯ ಕುಟುಂಬದವರು ವಾಸವಾಗಿರುವ ವಸತಿ ಗೃಹಗಳಲ್ಲಿ ಹಾವು-ಚೇಳುಗಳ ಕಾಟ ಹೇಳತೀರದಾಗಿದೆ. ಹಗಲು-ರಾತ್ರಿ ಎನ್ನದೇ ವಿಷಕಾರಿ ಜಂತುಗಳು ವಸತಿಗೃಹಗಳಲ್ಲಿ ಕಂಡು ಬರುತ್ತಿರುವುದರಿಂದ ರಕ್ಷಣೆ ನೀಡುವ ಆರಕ್ಷಕರ ಕುಟುಂಬದವರಿಗೆ ರಕ್ಷಿಸುವವರ್ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಅವ್ಯಾಹತ: ತಾಲೂಕಿನಾದ್ಯಂತ ಆರಕ್ಷಕ ಸಿಬ್ಬಂದಿ ಕೊರತೆ ಇರುವುದನ್ನು ಮನಗೊಂಡಿರುವ ಅಕ್ರಮ ಕುಳಗಳು, ತಮ್ಮ ಚಟುವಟಿಕೆಯನ್ನು ಯಾವುದೇ ರೀತಿಯ ಅಂಜಿಕೆ-ಅಳಕು ಇಲ್ಲದೆ ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ತಾಲೂಕಿನಲ್ಲಿ ಪೊಲೀಸ್ ವ್ಯವಸ್ಥೆ ಬಲಗೊಳಿಸುವ ಮೂಲಕ ಆರಕ್ಷಕ ಸಿಬ್ಬಂದಿಗೆ ಮೂಲ ಸೌಕರ್ಯಗಳ ಕೊರತೆಯಿಂದ ಪಾರು ಮಾಡಲು ಆದಷ್ಟು ಶೀಫ್ರದಲ್ಲೇ ಕ್ರಮಕೈಗೊಳ್ಳದಿದ್ದಲ್ಲಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿ ಪರ ಶ್ರೀಸಾಮಾನ್ಯರೇ ಬೀದಿಗಿಳಿದು ಹೋರಾಟ ಮಾಡಿದರೆ ಅಚ್ಚರಿಪಡಬೇಕಿಲ್ಲ.
ರವಿ ಕೆ. ಬಡಿಗೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

