ಧಾರವಾಡ

ವ್ಯಕ್ತಿತ್ವದಿಂದ ದೊಡ್ಡವರಾಗಿ: ಪ್ರಭುಲಿಂಗ ಶ್ರೀ

Published On :

ಅಣ್ಣಿಗೇರಿ: ಹಣ, ಗುಣ, ಆಸ್ತಿ-ಅಂತಸ್ತು ಹಾಗೂ ಅಧಿಕಾರವಿದ್ದವರು ದೊಡ್ಡವರಲ್ಲ. ಸದ್ಗುಣಗಳನ್ನು ಆಚರಣೆಯಲ್ಲಿ ಅಳವಡಿಸಿಕೊಂಡು ಸಕಲ ಜೀವಾತ್ಮರಿಗೆ ಲೇಸು ಬಯಸುವವರೇ ವ್ಯಕ್ತಿತ್ವದಿಂದ ದೊಡ್ಡವರಾಗಿರುತ್ತಾರೆ ಎಂದು ನೀಲಗುಂದ ಗದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಹೇಳಿದರು.
ಸದ್ಗುರು ರುದ್ರಮುನಿ ಶ್ರೀಗಳ 50ನೇ ಪುಣ್ಯತಿಥಿ, ರಥೋತ್ಸವ ಹಾಗೂ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಚಿಂತನಾಗೋಷ್ಠಿಯಲ್ಲಿ ಅವರು ಆಶೀರ್ವಚನ ನೀಡಿದರು.
ವಿಶ್ವಾಸ, ನಂಬಿಕೆ, ಕಾಯಕ ನಿಷ್ಠೆ, ಅಂತರಂಗ-ಬಹಿರಂಗ ಶುಚಿತ್ವದಿಂದ ದಯವೇ ಧರ್ಮದ ಮೂಲ ಎಂದು ಅರಿತು ಬದುಕಿದಾಗ ಮಾನವ ಧರ್ಮದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಮನುಷ್ಯರು ಬದುಕಬೇಕು, ಬಾಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕತೆ ಕಾಣಲು ಸಾಧ್ಯ ಎಂದೂ ಶ್ರೀಗಳು ಅಭಿಪ್ರಾಯಪಟ್ಟರು.
ಸಾನಿಧ್ಯವಹಿಸಿದ್ದ ದಾಸೋಹಮಠದ ಶಿವಕುಮಾರ ಶ್ರೀಗಳು, ಪಾರಂಪರಿಕವಾದ ಎಲ್ಲ ಧಾರ್ಮಿಕ ಸಮುದಾಯಗಳು ತಲ್ಲಣ ಆತಂಕಗಳನ್ನು ಎದುರಿಸುತ್ತಾ ಸಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಎನ್.ಎಚ್. ಕೋನರೆಡ್ಡಿ, ಗುರುನಾಥ ಶಾಸ್ತ್ರಿ, ಬಿ.ಬಿ. ಗಂಗಾಧರಮಠ, ಮಹೇಶ ದೇಸಾಯಿ, ಷಣ್ಮುಖ ಗುರಿಕಾರ, ಚಂಬಣ್ಣ ಹುಬ್ಬಳ್ಳಿ, ಬಸಪ್ಪ ಕರ್ಲವಾಡ, ದ್ಯಾಮಣ್ಣ ಕೊಗ್ಗಿ, ಮಡಿವಾಳಪ್ಪ ಬಳ್ಳೊಳ್ಳಿ, ಚಂದ್ರಕಾಂತ ವೆರ್ಣೇಕರ, ಉಪಸ್ಥಿತರಿದ್ದರು. ಶಿವಶಂಕರ ಕಲ್ಲೂರ ನಿರೂಪಿಸಿದರು. ರವಿರಾಜ ವೆರ್ಣೇಕರ ವಂದಿಸಿದರು.
--
ದಾನ, ತ್ಯಾಗ ಶ್ರೇಷ್ಠತೆಯ ಪ್ರತೀಕ: ಡಾ. ಸಂಗಮೇಶ
ಹುಬ್ಬಳ್ಳಿ: ದಾನ ಮತ್ತು ತ್ಯಾಗಗಳು ಕನ್ನಡ ನಾಡಿನ ಶ್ರೇಷ್ಠ ಸಂಸ್ಕೃತಿಯ ದ್ಯೋತಕಗಳು. ದಾನ ಮತ್ತು ತ್ಯಾಗದಿಂದ ಶಿರಸಂಗಿ ಲಿಂಗರಾಜ ಮಹಾರಾಜರು ಶ್ರೇಷ್ಠರಾಗಿದ್ದಾರೆ ಎಂದು ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಹಂಡಗಿ ಹೇಳಿದರು. ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ  ಆಯೋಜಿಸಿದ್ದ ಶಿರಸಂಗಿ ಲಿಂಗರಾಜ ಮಹಾರಾಜರ 153ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಶಿಕ್ಷಣವೊಂದೇ ಬದುಕಿನ ಗುರಿ ಎಂಬ ನಿಲುವಿನಿಂದ ಶಿರಸಂಗಿ ಲಿಂಗರಾಜರು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿ ಶ್ರೇಷ್ಠರಾಗಿದ್ದಾರೆ. ಕೆಎಲ್‌ಇ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಶಿರಸಂಗಿ ಮಹಾರಾಜರನ್ನು ಕೆಎಲ್‌ಇ ಸಂಸ್ಥೆ ಯಾವಾಗಲೂ ಸ್ಮರಿಸುತ್ತದೆ ಎಂದು ತಿಳಿಸಿದರು. ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜೆ.ಪಿ. ಜಾಬೀನ್, ನವಲಗುಂದ ಶ್ರೀಗಳ ಆಶೀರ್ವಾದದಿಂದ ಸ್ಥಾಪಿಸಲ್ಪಟ್ಟ ಪಿ.ಸಿ. ಜಾಬೀನ್ ಕಾಲೇಜು ಅಭಿವೃದ್ಧಿ ಹೊಂದಲು ದಾನಿಗಳ ಕೊಡುಗೆ ಗಣನೀಯವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.