ಧಾರವಾಡ

ಮರಳು ಸಾಗಾಣಿಕೆಗೆ ಹೊಸ ಪರ್ಮಿಟ್ ನೀತಿ ರೂಪಿಸಿ

Published On :

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಹೊಸ ಪರ್ಮಿಟ್ ನೀತಿ ರೂಪಿಸುವಂತೆ ಆಗ್ರಹಿಸಿ ನಡೆಸಲಾಗುತ್ತಿರುವ ಮುಷ್ಕರ ಮುಂದುವರಿಸಲಾಗುವುದು ಎಂದು ಧಾರವಾಡ ಜಿಲ್ಲೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಾಮಪ್ಪ ಮಲ್ಲೇನಾಡು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಹೊಸ ನೀತಿ ರೂಪಿಸುವಂತೆ ಆಗ್ರಹಿಸಿ ಸಂಘದ ಪದಾಧಿಕಾರಿಗಳು ಮೂರು ವಾರಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಈ ವರೆಗೂ ಸ್ಪಂದಿಸಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು. ಮರಳು ಸಾಗಾಣಿಕೆ ವಿರೋಧಿ ನೀತಿ ಸರ್ಕಾರ ಜಾರಿಗೆ ತಂದಿದೆ ಮಾತ್ರವಲ್ಲದೆ, ಪರ್ಮಿಟ್ ನೀಡುವಿಕೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಇದರ ನೇರ ಪರಿಣಾಮ ಲಾರಿ ಮಾಲೀಕರ ಮೇಲೆ ಬೀರುತ್ತಿದೆ ಎಂದು ಮಲ್ಲೇನಾಡು ಆಕ್ರೋಶ ವ್ಯಕ್ತಪಡಿಸಿದರು. ಆರು ತಿಂಗಳ ಅವಧಿಯಲ್ಲಿ ಸಾಗಾಣಿಕೆ ಲಾರಿಯ ಮಾಲೀಕರ ವಿರುದ್ಧ 1,500 ಪ್ರಕರಣಗಳನ್ನು ದಾಖಲಿಸಿಕೊಂಡು, 142 ಚಾಲಕರು, 40 ಮಾಲೀಕರನ್ನು ಜೈಲ್ಗೆ ಅಟ್ಟಲಾಗಿದೆಯಲ್ಲದೇ, 400 ಲಾರಿಗಳನ್ನು ಜಪ್ತಿ ಮಾಡಲಾಗಿದೆ ಎಂದೂ ಅವರು ದೂರಿದರು. ಪರ್ಮಿಟ್ ಇಲ್ಲದೆ ಮರಳು ಸಾಗಾಣಿಕೆ ಮಾಡಿ ಪ್ರಥಮ ಬಾರಿಗೆ ಸಿಕ್ಕಿ ಹಾಕಿಕೊಳ್ಳುವವರಿಗೆ ರು. 6ರಿಂದ 9 ಸಾವಿರ ದಂಡ ವಿಧಿಸಲಾಗುತ್ತಿದೆ ಎಂಬ ಸರ್ಕಾರದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಪ್ರಥಮ ಬಾರಿಗೆ ಸಿಕ್ಕಿ ಹಾಕಿಕೊಳ್ಳುವವರಿಂದ ರು. 60 ಸಾವಿರದಿಂದ ರು. 1 ಲಕ್ಷಗಳ ವರೆಗೆ ದಂಡ ಭರಿಸಿಕೊಳ್ಳಲಾಗುತ್ತಿದೆ ಎಂದು ಮಲ್ಲೇನಾಡು ಆರೋಪಿಸಿದರು. ಮರಳು ಸಾಗಾಣಿಕೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬೆಂಗಳೂರಿನಲ್ಲಿ ವಿವಿಧ ಇಲಾಖೆಯ ಸಚಿವರು ನಡೆಸಿದ್ದ ಸಭೆಯಲ್ಲಿ ಯಾವುದೇ ರೀತಿಯ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಇನ್ನೂ 10 ದಿನಗಳ ಕಾಲಾವಕಾಶ ಕೋರಿ ಸಭೆ ಮುಕ್ತಾಯಗೊಳಿಸಲಾಗಿತ್ತು ಎಂದು ಅವರು ವಿವರಿಸಿದರು. ಆದ್ದರಿಂದ ಮರಳು ಸಾಗಾಣಿಕೆ ಸಮಸ್ಯೆ ಪರಿಹಾರ ಕಂಡುಕೊಳ್ಳುವವರೆಗೂ ಧಾರವಾಡ ಜಿಲ್ಲೆಯ ಮರಳು ಸಾಗಾಣಿಕೆದಾರರು ಮುಷ್ಕರ ಮುಂದುವರಿಸಲಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದರು.  ಎಂ.ಎಸ್. ಜಿಗಳೂರ, ರಾಜು ಅವಲಕ್ಕಿ, ರವಿ ಬೇಳನಕರ, ಸುಬ್ರಮಣ್ಯ ಶಿರಕೋಳ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.