ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಘರ್ಷಣೆ
ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಕಮಲಾಪುರ ಹೊಸೂರ ಓಣಿಯಲ್ಲಿ ಎರಡು ಕೋಮುಗಳ ಮಧ್ಯೆ ಮಂಗಳವಾರ ಉಂಟಾದ ಗಲಾಟೆಯಲ್ಲಿ ಐವರು ಪೊಲೀಸರು ಮತ್ತು ಎಂಟು ಜನರಿಗೆ ಗಾಯಗಳಾಗಿವೆ.
ಗಲಾಟೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಎರಡು ಗುಂಪಿನ ನಡುವೆ ನಡೆದ ಕಲ್ಲು ತೂರಾಟದಲ್ಲಿ ಹೊಸೂರ ಓಣಿಯಲ್ಲಿನ ಅನೇಕ ಮನೆಗಳ ಹೆಂಚು ಹಾಗೂ ಕಿಟಕಿ, ಬಾಗಿಲುಗಳಿಗೆ ಧ್ವಂಸವಾಗಿವೆ. ಈ ಗಲಾಟೆಯಲ್ಲಿ ಐವರು ಪೊಲೀಸರು ಮತ್ತು ಎಂಟು ಜನರಿಗೆ ಏಟು ಬಿದ್ದಿವೆ. ಗಲಾಟೆ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಮಾತುಕತೆ ಮೂಲಕ ಗಲಾಟೆ ನಿಯಂತ್ರಿಸಲು ಪೊಲೀಸರು ಯತ್ನಿಸಿದರಾದರೂ ಈ ಸಂದರ್ಭದಲ್ಲಿ ಒಂದು ಗುಂಪಿನ ಜನ ಕಲ್ಲು ತೂರಾಟ ಮಾಡಿದ್ದರಿಂದ ಇನ್ನೊಂದು ಗುಂಪು ಆಕ್ರೋಶಗೊಂಡು ಕಲ್ಲು ತೂರಿತು. ಘಟನೆಯಲ್ಲಿ ಎರಡೂ ಗುಂಪಿನವರು ಪೊಲೀಸರ ಮೇಲೆ ಹಾಗೂ ಮನೆಗಳ ಮೇಲೆ ಕಲ್ಲು ತೂರಿದರು.
ಇಕ್ಕಟ್ಟಾಗಿರುವ ಕಮಲಾಪುರದ ಹೊಸೂರ ಓಣಿಯ ಎರಡು ಬದಿಯಲ್ಲಿ ಎರಡು ಗುಂಪುಗಳು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ನಿಂತಿದ್ದರು. ಈ ಎರಡು ಗುಂಪಿನ ಮಧ್ಯೆ ಪೊಲೀಸರು ಇದ್ದರು. ಎರಡು ಕಡೆಯಿಂದ ತೂರಿ ಬರುತ್ತಿದ್ದ ಕಲ್ಲುಗಳು ಪೊಲೀಸರು ಮತ್ತು ಮನೆಗಳ ಮೇಲೆ ಬೀಳುತ್ತಿದ್ದವು. ಇದೇ ವೇಳೆ ಒಂದು ಗುಂಪಿಗೆ ಸೇರಿದವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಆಕ್ರೋಶಗೊಂಡು ಕ್ಯಾಮೆರಾಗಳನ್ನು ಹೊರಗೆ ತೆಗೆಯದಂತೆ ಬೆದರಿಕೆವೊಡ್ಡಿದರು.
ಏಕೆ ಘರ್ಷಣೆ?: ಈದ್ ಮಿಲಾದ್ ನಿಮಿತ್ತ ಬೈಕ್ ಸವಾರರಿಬ್ಬರು ತಮ್ಮ ವಾಹನದಲ್ಲಿ ಧ್ವಜ ಹಿಡಿದುಕೊಂಡು ಹೋಗುತ್ತಿದ್ದ ವೇಳೆ ಇನ್ನೊಂದು ಕೋಮಿಗೆ ಸೇರಿದ ವ್ಯಕ್ತಿಗೆ ತಾಗಿದೆ. ಇಲ್ಲಿ ಮಕ್ಕಳು ಓಡಾಡುತ್ತಿರುತ್ತಾರೆ ನಿಧಾನವಾಗಿ ಗಾಡಿ ಓಡಿಸಿ ಎಂದು ಬೈಕ್ ಸವಾರರಿಗೆ ಬುದ್ಧಿ ಹೇಳಿದ್ದಾರೆ. ಓಣಿಯಲ್ಲಿನ ನಿವಾಸಿಗಳು ಮತ್ತು ಬೈಕ್ ಸವಾರರ ಮಧ್ಯೆ ಮಾತಿನ ಚಕಮಕಿ ಶುರುವಾಗಿದ್ದು, ವಿಕೋಪಕ್ಕೆ ತೆರಳಿ ಕೈ ಕೈ ಮಿಲಾಯಿಸಿದ್ದಾರೆ. ಈ ಗಲಾಟೆಯೇ ಗುಂಪು ಘರ್ಷಣೆಗೆಕಾರಣವಾಯಿತು.
ಘಟನಾ ಸ್ಥಳಕ್ಕೆ ಡಿಸಿಪಿ ಸುಭಾಷ ಗುಡಿಮನಿ, ಎಸಿಪಿಗಳಾದ ಎಸ್.ಎಚ್. ಕೇರಿ, ಶಂಕರ ಹೊಳೆಹೊಸುರ, ಸಿಪಿಐ ರಾಮನಗೌಡ ಹಟ್ಟಿ ಭೇಟಿ ನೀಡಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

