ಪಿಎಸೈ ಬಂಡೆ ನಿಧನ: ಸರ್ಕಾರದ ವೈಫಲ್ಯ ಕಾರಣ
ಧಾರವಾಡ: ರೌಡಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೀವ ಕಳೆದುಕೊಂಡ ಗುಲ್ಬರ್ಗದ ಸ್ಟೇಶನ್ ಬಜಾರ ಠಾಣೆ ಪಿಎಸೈ ಮಲ್ಲಿಕಾರ್ಜುನ ಬಂಡೆ ಅವರ ಪ್ರಕರಣವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ ಹೇಳಿದ್ದಾರೆ.
ಜ. 8ರಂದು ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಪ್ರಯತ್ನದಲ್ಲಿ ಮಲ್ಲಿಕಾರ್ಜುನ ಬಂಡೆ, ರೌಡಿಗಳ ಗುಂಡು ತಗುಲಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಂಡೆ ಅವರಿಗೆ ವಿದೇಶದಲ್ಲಿ ಇನ್ನೂ ಹೆಚ್ಚಿನ ಚಿಕಿತ್ಸೆ ಒದಗಿಸಲು ಸರ್ಕಾರ ಮುಂದಾಗಬೇಕಿತ್ತು. ಇದಕ್ಕಾಗಿ ತಜ್ಞ ವೈದ್ಯರ ಸಲಹೆ ಪಡೆಯುವುದರ, ಜೊತೆಗೆ ಗೃಹ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದು ಹಾಜರಿದ್ದು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿತ್ತು. ಘಟನೆಯಿಂದ ಅಘಾತಕ್ಕೊಳಗಾಗಿದ್ದ ಬಂಡೆ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ಸರ್ಕಾರ ತೋರಿದ ನಿರ್ಲಕ್ಷ್ಯ ರಾಜ್ಯದ ಜನತೆಯು ತಲೆತಗ್ಗಿಸುವಂತಾಗಿದೆ. ಸರ್ಕಾರ ನಡೆದುಕೊಂಡ ರೀತಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಜಂಘಾಬಲವನ್ನೇ ಉಡುಗಿಸಿದೆ. ಸರ್ಕಾರ ಹುತಾತ್ಮ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ರು. 1 ಕೋಟಿ ಪರಿಹಾರ ನೀಡಬೇಕು. ಜತೆಗೆ ಅವರ ಕುಟುಂಬಕ್ಕೆ ಸಕಲ ಸರ್ಕಾರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಬಂಡೆಗೆ ಶ್ರದ್ಧಾಂಜಲಿ
ರೌಡಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಬುಧವಾರ ನಿಧನರಾದ ಪಿಎಸೈ ಮಲ್ಲಿಕಾರ್ಜುನ ಬಂಡೆ ಅವರಿಗೆ ಬುಧವಾರ ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಪ್ರಾಧ್ಯಾಪಕರಾದ ಡಾ. ಡಿ. ಎಂ. ಹಿರೇಮಠ, ಪ್ರೊ. ಸಂಗಮನಾಥ ಲೋಕಾಪುರ ಮತ್ತು ಪೊಲೀಸ್ ಅಧಿಕಾರಿ ಮುರುಘೇಶ ಚನ್ನಣ್ಣವರ, ಮಲ್ಲಿಕಾರ್ಜುನ ಬಂಡೆ ಅವರ ಕರ್ತವ್ಯ ನಿಷ್ಠೆ ಮತ್ತು ಧೈರ್ಯ ಸ್ಮರಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ ಅಧ್ಯಕ್ಷತೆ ವಹಿಸಿದ್ದರು. ಎಂ.ಎಫ್. ಹಿರೇಮಠ, ಸದಾಶಿವ ದೊಡ್ಡಮನಿ, ಉಳವಪ್ಪ ಹಡಪದ, ಸಿದ್ದಲಿಂಗ ನರೇಗಲ್ಲ, ಮಲ್ಲಿಕಾರ್ಜುನ ಹಡಪದ ಇದ್ದರು. ಸಮಾಜದ ಮುಖಂಡ ಸಿದ್ದು ಕಂಬಾರ ವಂದಿಸಿದರು. ಕೊನೆಯಲ್ಲಿ ಮಲ್ಲಿಕಾರ್ಜುನ ಬಂಡೆ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

