ಧಾರವಾಡ

ಪ್ರಮುಖ ಚರ್ಚೆ ಕೈಬಿಟ್ಟ ಸಾಹಿತ್ಯ ಸಂಭ್ರಮ

Published On :

ಧಾರವಾಡ: ಜ. 17ರಿಂದ 3 ದಿನ ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿ ಪ್ರಮುಖವಾದ ಕೆಲ ವಿಷಯಗಳ ಚರ್ಚೆಗಳನ್ನು ಕೈ ಬಿಡಲಾಗಿದೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿರುವ ಅವರು, ಜನರನ್ನು ದಿನನಿತ್ಯವೂ ಕಾಡಿಸುತ್ತಿರುವ, ಪೀಡಿಸುತ್ತಿರುವ ಜ್ವಲಂತ ಪ್ರಶ್ನೆಗಳ ಬಗ್ಗೆ ನಮ್ಮ ಸಾಹಿತಿಗಳು ಚಿಂತಿಸುವುದಿಲ್ಲವಾದರೆ ಜನತೆಯ ಜೀವನದೊಂದಿಗೆ ಅವರು ಬಹು ದೂರ ಇದ್ದಾರೆ ಎಂದು ಹೇಳಬೇಕಾಗುತ್ತದೆ. ಜನರನ್ನು ಬಿಟ್ಟರೆ ಸಾಹಿತ್ಯಕ್ಕೆ ಅವರದೆನ್ನುವ ಅಸ್ತಿತ್ವ ಬೇರೆ ಯಾವುದೂ ಇಲ್ಲ. ಕನ್ನಡ ಭಾಷೆಯ ಬಗ್ಗೆ ಮಕ್ಕಳ ಶಿಕ್ಷಣ ಭಾಷಾ ಮಾಧ್ಯಮ ಯಾವುದಿರಬೇಕೆನ್ನುವುದರ ಬಗ್ಗೆ ಬಹುದೊಡ್ಡ ಗೊಂದಲ ನಿರ್ಮಾಣವಾಗಿದ್ದು, ಸಾಹಿತ್ಯ ಸಂಭ್ರಮದಲ್ಲಿ ಈ ಬಗ್ಗೆ ಚರ್ಚೆ ಇಲ್ಲ. ಆ ವಿಷಯದಲ್ಲಿ ಹೇಳುವುದು ನಮ್ಮ ಸಾಹಿತಿಗಳಿಗೆ ಏನೂ ಇಲ್ಲವೇ? ಅವರು ಕನ್ನಡದಲ್ಲಿ ಬರೆಯುತ್ತಾರೆಂದ ಮೇಲೆ, ಕನ್ನಡ ಭಾಷೆ ಮೇಲೆ ಆಘಾತ ಉಂಟಾಗುತ್ತಿರುವ ಈ ಸಮಯದಲ್ಲಿ ಅವರೇಕೆ ಬಾಯಿ ಮುಚ್ಚಿಕೊಂಡು ಕುಳಿತಿರಬೇಕು? ಈ ಸಮಸ್ಯೆ ತಮಗೆ ಸಂಬಂಧಿಸಿದ್ದೇನೂ ಅಲ್ಲ ಎಂಬಂತೆ ನಮ್ಮ ಸಾಹಿತಿಗಳು ಮೌನ ಧರಿಸಿದರೆ ಅವರು ಕನ್ನಡಕ್ಕೆ ದ್ರೋಹ ಬಗೆದಂತಾಗುತ್ತದೆ. ಮಕ್ಕಳ ಶಿಕ್ಷಣ ಅವರ ಮಾತೃಭಾಷೆಯಲ್ಲಿ ಎನ್ನುವುದು ಸತ್ತರೆ ಆ ದುಷ್ಪರಿಣಾಮಕ್ಕೆ ಭಾರತದ ರಾಜ್ಯಗಳ ಎಲ್ಲ ದೇಶಿ ಭಾಷೆಗಳು ಬಲಿಯಾಗುತ್ತವೆ ಎಂದಿದ್ದಾರೆ.
ಕೈ ಬಿಟ್ಟ ಭ್ರಷ್ಟಾಚಾರ ವಿಷಯ: ಕರ್ನಾಟಕದ ಜನರನ್ನು ಭಾಷಾ ಮಾಧ್ಯಮದ ಈ ಪ್ರಶ್ನೆ ಪೀಡಿಸುತ್ತಿರುವಂತೆ ನಿವಾರಿಸಲಾಗದ ಸಾಂಕ್ರಾಮಿಕ ಜಾಡ್ಯದಂತೆ ಆವರಿಸಿಕೊಂಡಿರುವ ಭ್ರಷ್ಟಾಚಾರದ ಬಗ್ಗೆ ಹೇಳುವುದೇನು? ನಮ್ಮ ಜನರ ಜೀವನದ ಬಗ್ಗೆ ತಾವು ಸ್ಪಂದಿಸಬೇಕಾದ ಅಗತ್ಯವಿಲ್ಲವೆಂದು ನಮ್ಮ ಸಾಹಿತಿಗಳು ಭಾವನೆ ಮಾಡಿಕೊಂಡು ಅದರ ಬಗ್ಗೆ ನಿಶ್ಚಿಂತರಾಗಿದ್ದಾರೇನು? ಎಂದು ಪಾಪು ಸಾಹಿತ್ಯ ಸಂಭ್ರಮದ ಸಂಚಾಲಕರ ಮೇಲೆ ತುಸು ಕಿಡಿ ಕಾರಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.