ಆಸ್ಪತ್ರೆ ಹತ್ತು, ಸಮಸ್ಯೆ ಹತ್ತಾರು!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 16
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಡೆತನದ ಆಸ್ಪತ್ರೆಗಳು ಬಡವರ ಪಾಲಿಗೆ ಸಂಜೀವಿನಿ ಇದ್ದ ಹಾಗೆ. ಆದರೆ ಸೂಕ್ತ ಸೌಲಭ್ಯ, ವೈದ್ಯರ ಕೊರತೆಯಿಂದಾಗಿ ಈ ಆಸ್ಪತ್ರೆಗಳೇ ರೋಗಗ್ರಸ್ತವಾಗಿವೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೇಳಿಕೊಳ್ಳಲು ಪಾಲಿಕೆಯ 10 ಆಸ್ಪತ್ರೆಗಳಿದ್ದರೂ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ.
ಬಡಬಗ್ಗರಿಗೆ ಅನುಕೂಲವಾಗಲಿ ಎನ್ನುವ ಘನ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅವಳಿ ನಗರದ ಅಲ್ಲಲ್ಲಿ ಆಸ್ಪತ್ರೆಗಳನ್ನೇನೋ ಆರಂಭಿಸಿತು. ಆದರೆ ಸೂಕ್ತ ನಿರ್ವಹಣೆ, ಅಗತ್ಯ ಸೌಲಭ್ಯ ಕೊಡುವಲ್ಲಿ ಮಾತ್ರ ಪಾಲಿಕೆ ಎಡವಿತು. ಪರಿಣಾಮ ಈ ಆಸ್ಪತ್ರೆಗಳು ರೋಗಿಗಳ ಪಾಲಿಗೆ ಇದ್ದೂ ಇಲ್ಲವಾಗಿದೆ.
ಹತ್ತು ಆಸ್ಪತ್ರೆ: ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ, ಹಳೇ ಹುಬ್ಬಳ್ಳಿ, ಧಾರವಾಡ ಹಳೇ ಬಸ್ ನಿಲ್ದಾಣದ ಬಳಿ, ಧಾರವಾಡದ ಕಾಮನಕಟ್ಟಿ, ನವನಗರ, ಹುಬ್ಬಳ್ಳಿಯ ಮೇದಾರ ಓಣಿ, ತೊರವಿಹಕ್ಕಲ, ಗಣೇಶಪೇಟೆ, ಗಾರ್ಡ್ನ ಪೇಟೆ ನಂ. 3, ಧಾರವಾಡ ಕಾಮನಕಟ್ಟಿ ಆಯುರ್ವೇದಿಕ ಆಸ್ಪತ್ರೆ ಸೇರಿದಂತೆ ಅವಳಿ ನಗರದಲ್ಲಿ ಒಟ್ಟು 10 ಪಾಲಿಕೆ ಆಸ್ಪತ್ರೆಗಳಿವೆ. ಈ ಪೈಕಿ ಹುಬ್ಬಳ್ಳಿಯ ಚಿಟಗುಪ್ಪಿ ಹಾಗೂ ಧಾರವಾಡ ಹಳೆ ಬಸ್ ನಿಲ್ದಾಣದ ಬಳಿಯ ಆಸ್ಪತ್ರೆ ಪ್ರಮುಖ ಆಸ್ಪತ್ರೆಗಳು.
19 ವೈದ್ಯರ ಕೊರತೆ: ಬಡ ಹಾಗೂ ಮಧ್ಯಮ ವರ್ಗದವರು ಸಾಮಾನ್ಯ ಕಾಯಿಲೆಗಳ ಜತೆಗೆ ಹೆಚ್ಚಾಗಿ ಹೆರಿಗೆಗಾಗಿ ಪಾಲಿಕೆ ಆಸ್ಪತ್ರೆಗಳನ್ನ್ನು ಅವಲಂಬಿಸಿದ್ದಾರೆ. ಆದರೆ ಈ ಆಸ್ಪತ್ರೆಗಳಲ್ಲಿ ಅವಶ್ಯಕ ವೈದ್ಯರು, ತಜ್ಞ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿ ಇಲ್ಲ. ವೈದ್ಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಕೊರತೆಯ ನೇರ ಪರಿಣಾಮ ಸಹಜವಾಗಿಯೇ ಆಸ್ಪತ್ರೆಗಳಿಗೆ ಬರುವ ರೋಗಿಗಳ ಮೇಲೆ ಬೀರುತ್ತಿದೆ. ಪಾಲಿಕೆಯ ಒಟ್ಟೂ 10 ಆಸ್ಪತ್ರೆಗಳಲ್ಲಿ ಪಾಲಿಕೆಯಿಂದಲೇ ನೇಮಕಗೊಂಡ ವೈದ್ಯರಿರುವುದು 4 ಜನ ಮಾತ್ರ. ಇನ್ನುಳಿದವರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯೊಂದರಲ್ಲೇ 9 ವೈದ್ಯರ ಹುದ್ದೆಗಳು ಖಾಲಿಯಿವೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಎಲ್ಲ ಆಸ್ಪತ್ರೆಗಳು ಸೇರಿದಂತೆ ಒಟ್ಟೂ 19 ವೈದ್ಯರ ಕೊರತೆಯಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ಆಸ್ಪತ್ರೆಗಳಿಗೆ 1961ರಲ್ಲಿ ಅಂದಿನ ಜನಸಂಖ್ಯೆಗನುಗುಣವಾಗಿ 22 ವೈದ್ಯರು ನಿಯೋಜನೆಗೊಂಡಿದ್ದರು. ನಂತರದ ದಿನಗಳಲ್ಲಿ ಜನಸಂಖ್ಯೆಗನುಗುಣವಾಗಿ ಇಲ್ಲಿಯ ವೈದ್ಯರ ಸಂಖ್ಯೆಯಲ್ಲಿ ಮಾತ್ರ ಯಾವುದೇ ರೀತಿಯ ಹೆಚ್ಚಳವಾಗಲಿಲ್ಲ. ಅಷ್ಟೇ ಅಲ್ಲ ಅಂದಿನಿಂದ ಇಂದಿನವರೆಗೆ ಪಾಲಿಕೆ ಆಸ್ಪತ್ರೆಗಳಲ್ಲಿನ ವೈದ್ಯರು ನಿವೃತ್ತಿ ಹಾಗೂ ವರ್ಗಾವಣೆಗೊಂಡರೂ ಅವರ ಜಾಗದಲ್ಲಿ ಬೇರೊಬ್ಬ ವೈದ್ಯರನ್ನು ನೇಮಕಗೊಳಿಸುವ ಕಾರ್ಯವೂ ಪ್ರಾಮಾಣಿಕವಾಗಿ ನಡೆಯಲಿಲ್ಲ.
ಗುತ್ತಿಗೆ ವೈದ್ಯರೇ ಗತಿ: ನಿಯೋಜನೆ, ಗುತ್ತಿಗೆ ಆಧಾರ ಹಾಗೂ ಗೌರವಧನದ ಆಧಾರದ ಮೇಲೆ ಇದೀಗ ಪಾಲಿಕೆಯ ಆಸ್ಪತ್ರೆಗಳು ನಡೆಯುತ್ತಿವೆ. ಆದಾಗ್ಯೂ ಆಸ್ಪತ್ರೆ ಪ್ರಮುಖವಾಗಿ ಚಿಕ್ಕಮಕ್ಕಳ ತಜ್ಞ, ಸ್ತ್ರೀರೋಗ ತಜ್ಞ ವೈದ್ಯರ ಕೊರತೆಯನ್ನು ಅನುಭವಿಸುತ್ತಿದೆ. ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾದ ರೋಗಿಗಳೇನಾದರೂ ಪಾಲಿಕೆ ಆಸ್ಪತ್ರೆಗೆ ಬಂದರೆ ಇಲ್ಲಿಯ ವೈದ್ಯರು ರೋಗಿಗಳನ್ನ್ನು ಕಿಮ್ಸ್ ಅಥವಾ ಎಸ್ಡಿಎಂ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಇದನ್ನು ಬಿಟ್ಟರೆ ಅನ್ಯ ದಾರಿಯೇ ಇಲ್ಲ.
ಸರ್ಕಾರ ಗಮನ ಹರಿಸಲಿ: ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯ ಮತ್ತು ತಜ್ಞ ವೈದ್ಯರ ಹುದ್ದೆ ತುಂಬುವಂತೆ ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಹಲವಾರು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಈಗಿನ ಜನಸಂಖ್ಯೆ ಆಧಾರದ ಮೇಲೆ ಮಹಾನಗರ ಪಾಲಿಕೆ ಆಸ್ಪತ್ರೆಗಳಿಗೆ ಹೆಚ್ಚಿನ ವೈದ್ಯರನ್ನ್ನು ನಿಯೋಜಿಸಲು ಮುಂದಾಗುವ ಜತೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನ್ನು ಈ ಆಸ್ಪತ್ರೆಗಳಲ್ಲಿ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ರೋಗಿಗಳ ಗೋಳಾಟ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ಆದರೆ ಬಡಬಗ್ಗರ ಕೈಗೆ ಅವು ಎಟುಕದಾಗಿವೆ. ಇದೇ ಕಾರಣದಿಂದಾಗಿ ಬಡಬಗ್ಗರು ಪಾಲಿಕೆ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿವೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಸಿಕ್ಕಿದ್ದೇ ಸೀರುಂಡೆ ಎನ್ನುವ ರೀತಿಯಲ್ಲಿ ಪಾಲಿಕೆಯ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದ್ದ ಕೆಲ ವೈದ್ಯರು ಕೈಲಾದ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಈ ಚಿಕಿತ್ಸೆಗಾಗಿ ದಿನಪೂರ್ತಿ ಕಾಯುವ ಸ್ಥಿತಿ ಇದೆ. ಚಿಟಗುಪ್ಪಿ ಆಸ್ಪತ್ರೆಯಲ್ಲಂತೂ ಮಂಗಳವಾರ ಹಾಗೂ ಶುಕ್ರವಾರ ಐದನೂರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಂತೂ ಬೆರಳೆಣಿಕೆಯಷ್ಟಿರುವ ವೈದ್ಯರು ಹೈರಾಣಾಗಿ ಬಿಡುತ್ತಾರೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

