ಧಾರವಾಡ

ನಾಳೆ ಅಮೃತ ಮಹೋತ್ಸವಕ್ಕೆ ಚಾಲನೆ

Published On :

ಹುಬ್ಬಳ್ಳಿ: ಶ್ರೀ ಗುರುಬಸವ ಮಂಟಪ ಟ್ರಸ್ಟ್ ಕಮಿಟಿಯ ಅಮೃತ ಮಹೋತ್ಸವದ ಅಂಗವಾಗಿ ಜ. 18 ಹಾಗೂ 19ರಂದು ವೀರಾಪುರ ರಸ್ತೆಯ ಸಮಿತಿ ಸಭಾಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ಮುಖ್ಯಸ್ಥ ವಿ. ಎಸ್. ಲಿಗಾಡೆ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 18ರಂದು ಸಂಜೆ 5.30ಕ್ಕೆ ಅಮೃತ ಮಹೋತ್ಸವಕ್ಕೆ ಬೆಳಗಾವಿಯ ಶರಣೆ ವಾಗ್ದೇವಿ ಚಾಲನೆ ನೀಡುವರು. ಗುರುಬಸವ ಮಂಟಪದ ಕಾರ್ಯಾಧ್ಯಕ್ಷ ಚಂದ್ರಶೇಖರ ಕರವೀರಶೆಟ್ಟರ್, ಡಾ. ಬಸವರಾಜ ಜಗಜಂಪಿ, ಸುಲೋಚನಾ ಭೂಸನೂರ, ಅನಸೂಯಾ ಸಾದರಹಳ್ಳಿ ಪಾಲ್ಗೊಳ್ಳುವರು. 19ರಂದು ಸಂಜೆ 5.30ಕ್ಕೆ ಬಸವರ್ಧ ಸಮಾವೇಶ ನಡೆಯಲಿದ್ದು, ವಿ. ಎಸ್. ಲಿಗಾಡೆ, ವಿಶ್ವಾರಾಧ್ಯ ಸತ್ಯಂಪೇಟೆ, ಸುಧೀರ ಸಾದರಹಳ್ಳಿ, ಗುರುಸಿದ್ಧಪ್ಪ ಉಮದಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಶರಣರ ಬದುಕು, ಸಂದೇಶಗಳ ಕುರಿತು ಉಪನ್ಯಾಸ, ವಚನಗಳಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ, ಬಸವತತ್ವ ಅನುಭಾವ ಕಮ್ಮಟ, ಧರ್ಮ ಸಂಸ್ಕಾರ, ಇಷ್ಟಲಿಂಗದೀಕ್ಷೆ, ದಾಸೋಹದಂತಹ ಕಾರ್ಯಕ್ರಮಗಳ ಮೂಲಕ ಕಮಿಟಿಯು ಬಸವತತ್ವ ಹಾಗೂ ವಚನ ಪ್ರಚುರ ಪಡಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದ ಲಿಗಾಡೆ, ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕತೆಯ ಬೀಜ ಬಿತ್ತುವ ಮೂಲಕ ಸ್ವಸ್ಥ್ಯ ಸಮಾಜ ನಿರ್ಮಿಸುವ ಕೈಂಕರ್ಯ ಮಾಡಲಾಗುತ್ತಿದೆ ಎಂದರು. ಸುಲೋಚನಾ ಭೂಸನೂರ, ಬಸವೇಶ ಕರವೀರಶೆಟ್ಟರ್, ಗುರುಸಿದ್ಧಪ್ಪ ಉಮದಿ, ಶಶಿಧರ ಕರವೀರಶೆಟ್ಟರ್ ಗೋಷ್ಠಿಯಲ್ಲಿದ್ದರು.
ವಿಷ ಸೇವಿಸಿ ಬಾಲಕ ಆತ್ಮಹತ್ಯೆ: ದೂರು
ಧಾರವಾಡ: ಶಾಲೆಗೆ ಹೋಗುವುದಕ್ಕೆ ನಿರಾಕರಿಸುತ್ತಿದ್ದ ಬಾಲಕನೊಬ್ಬನಿಗೆ ಪಾಲಕರು ಶಾಲೆ ತಪ್ಪಿಸಬೇಡ ಎಂದು ಒತ್ತಾಯಿಸಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ಬೋಗುರ ಗ್ರಾಮದ  ಬಾಲಕನೊಬ್ಬ ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ತಾಲೂಕಿನ ಬೋಗುರು ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗಣೇಶ ಒಡೆಯರ್ (14) ಎಂಬ ಬಾಲಕ ಕಳೆದ ಮೂರು ದಿನಗಳಿಂದ ಶಾಲೆಗೆ ಹೋಗಿರಲಿಲ್ಲ. ಈ ಕುರಿತು ಶಾಲೆ ಶಿಕ್ಷಕರು ಪಾಲಕರಿಗೆ ಮಗನನ್ನು ಸರಿಯಾಗಿ ಶಾಲೆಗೆ ಕಳುಹಿಸಿ ಎಂದು ಹೇಳಿದ್ದರು. ಶಿಕ್ಷಕರ ಸಲಹೆಯಂತೆ ಪಾಲಕರು ಇನ್ನು ಮುಂದೆ ತಪ್ಪದೇ ಶಾಲೆಗೆ ಹೋಗಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಗುರುವಾರ ಬೆಳಗ್ಗೆ 4.30ರ ಸುಮಾರಿಗೆ ಓದಲೆಂದು ಎದ್ದ ಗಣೇಶ ಕ್ರಿಮಿನಾಶ ಸೇವಿಸಿ ನೋವು ತಾಳದೇ ಅರಚಿಕೊಂಡಿದ್ದಾನೆ. ತಕ್ಷಣ ಬಾಲಕನನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಂಗಮ್ಮ ಯಲ್ಲಪ್ಪ ದೊಡವಾಡ ನಿಧನ
ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದನಿಂಗಮ್ಮ ಯಲ್ಲಪ್ಪ ದೊಡವಾಡ (78) ಗುರುವಾರ ನಿಧನರಾದರು. ದಿವಂಗತರಿಗೆ ಪುತ್ರ, ಪುತ್ರಿ, ಅಪಾರ ಬಂಧು-ಬಳಗವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.