ವಿವಿಗಳು ಸಂಶೋಧನೆಗೂ ಒತ್ತು ನೀಡಲಿ: ಡಾ. ನಟರಾಜನ್
ಹುಬ್ಬಳ್ಳಿ: ಭಾರತೀಯ ವಿಶ್ವವಿದ್ಯಾಲಯಗಳು ಶಿಕ್ಷಣದ ಜೊತೆಗೆ ಸಂಶೋಧನೆಗೂ ಒತ್ತು ನೀಡಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿರ್ದೇಶಕ ಹಾಗೂ ಮಾಜಿ ಚೇರ್‌ಮನ್ ಡಾ. ಆರ್. ನಟರಾಜನ್ ಹೇಳಿದರು.
ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಇಂಡೋ-ಅಮೆರಿಕ ಸಹಯೋಗದಲ್ಲಿ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 'ಎಂಜಿನಿಯರಿಂಗ್ ಶಿಕ್ಷಣದಲ್ಲಾದ ಬದಲಾವಣೆಗಳು' ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆರಳೆಣಿಕೆಯ ವಿಶ್ವವಿದ್ಯಾಲಯಗಳಷ್ಟೇ ಸಂಶೋಧನೆಗೆ ಪ್ರಾಮುಖ್ಯತೆ ನೀಡುತ್ತಿವೆ. ಅಂಥ ವಿಶ್ವವಿದ್ಯಾಲಯಗಳು ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟಿವೆ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿವೆ. ಬಹಳಷ್ಟು ವಿಶ್ವವಿದ್ಯಾಲಯಗಳು ಹೆಚ್ಚಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವಂಥ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿವೆ. ವಿಶ್ವವಿದ್ಯಾಲಯಗಳು ಕೇವಲ ಫಲಿತಾಂಶದ ದೃಷ್ಟಿಕೋನದಿಂದ ಮಾತ್ರ ಚಿಂತಿಸುವುದು ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತದಲ್ಲಿ 3,495 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಶಿಕ್ಷಣ ನೀಡುವ ಪದ್ಧತಿ ಏಕರೂಪದ್ದಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಕಲಿಕಾ ಪದ್ಧತಿ ಅವೈಜ್ಞಾನಿಕವಾಗಿದ್ದು, ಈ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಸಲಹೆ ನೀಡಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ತಮ್ಮ ಸಂಸ್ಥೆಯ ಜವಾಹರಲಾಲ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲಿನಿಂದಲೂ ಸಂಶೋಧನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳು ಸಹ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ, ಜಾಗತಿಕ ಮಟ್ಟದ ಶಿಕ್ಷಣ ರೂಪವನ್ನು ಇಲ್ಲಿಯ ಎಂಜಿನಿಯರಿಂಗ್ ಕಾಲೇಜುಗಳೂ ಅಳವಡಿಸಿಕೊಳ್ಳುವ ಮೂಲಕ ಸಂಶೋಧನೆಗೆ ಮುಂದಾಗಬೇಕು ಎಂದು ಹೇಳಿದರು. ಡಾ. ಕೃಷ್ಣ ವೆದುಲಾ, ಡಾ. ಜೊಸ್ ಕಾರ್ಲಸ್ ಕ್ವಾಡ್ರಾಡೊ, ಡಾ. ಹ್ಯಾನ್ಸ್ ಹೊಯರ್, ಡಾ. ಸ್ಟೆಫನ್ ಫರೆಲ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

