20ಕ್ಕೆ ಡಾ. ಭೈರಪ್ಪ ಸಾರ್ವಜನಿಕ ಸಂದರ್ಶನ
ಹುಬ್ಬಳ್ಳಿ: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ಕೆಎಲ್ಇ ಧ್ವನಿ ಬಿವಿಬಿ ಎಫ್ಎಂ 90.4, ಸರಸ್ವತಿ ಸಮ್ಮಾನಿತ ಲೇಖಕ ಡಾ. ಎಸ್.ಎಲ್. ಭೈರಪ್ಪ ಅವರ ಸಾರ್ವಜನಿಕ ಸಂದರ್ಶನ ಹುಬ್ಬಳ್ಳಿ ಬಿವಿಬಿ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಜ. 20ರಂದು ಸಂಜೆ 4.30ಕ್ಕೆ ಹಮ್ಮಿಕೊಂಡಿದೆ ಎಂದು ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಗಂಟೆಗಳ ಈ ಸಂದರ್ಶನವನ್ನು ಶತಾವಧಾನಿ ಡಾ. ಆರ್. ಗಣೇಶ ನಡೆಸಿಕೊಡಲಿದ್ದಾರೆ. ಭೈರಪ್ಪನವರ ಸಾಹಿತ್ಯ ಕೃಷಿ, ಅಧ್ಯಯನ, ಜೀವನ ಇತ್ಯಾದಿ ಸಂಗತಿಗಳ ಆಸಕ್ತಿ ಭರಿತ ಸಂದರ್ಶನ ನಡೆಯಲಿದೆ. ಪ್ರಮುಖವಾಗಿ ತರುಣರಿಗೆ ಸಾಹಿತ್ಯದ ಗೀಳು ಹಚ್ಚುವ ಅನಾವರಣ ಈ ಕಾರ್ಯಕ್ರಮವಾಗಲಿದೆ ಎಂದರು.
ಸಂದರ್ಶನದ ಬಳಿಕ ಅರ್ಧ ಗಂಟೆ ಕಾಲ ಸಾರ್ವಜನಿಕರು ಭೈರಪ್ಪನವರಿಗೆ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಈ ಸಂದರ್ಶನ ಕೆಎಲ್ಇ ಧ್ವನಿಯಲ್ಲಿ ಪ್ರಸಾರವಾಗಲಿದ್ದು, ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆಯುವ ಮೊದಲ ಆಡಿಯೋ ರಿಕಾರ್ಡಿಂಗ್ ಇದಾಗಲಿದೆ. ಕೇವಲ 650 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇಲ್ಲಿರುವುದರಿಂದ ಒಟ್ಟು 800 ಜನರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಸಭಾಂಗಣದ ಹೊರಗೆ ಎಲ್ಸಿಡಿ ವ್ಯವಸ್ಥೆ ಮಾಡಲಾಗಿದ್ದು, ಪ್ರವೇಶ ಸಿಗದವರು ಎಲ್ಸಿಡಿ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆಮಂತ್ರಣ ಪತ್ರಿಕೆ ತರಬೇಕು. ಸಾಹಿತ್ಯದ ಕುರಿತು ಗಂಭೀರ ಚಿಂತನೆ ಇಲ್ಲಿ ನಡೆಯುವುದರಿಂದ ಚಿಂತಕರು, ಆಸಕ್ತರು ಮಾತ್ರ ಇಲ್ಲಿ ಬರಲಿ ಎನ್ನುವ ಉದ್ದೇಶದಿಂದ ಪ್ರವೇಶಕ್ಕೆ ಮುಕ್ತ ಅವಕಾಶ ನಿಷೇಧಿಸಲಾಗಿದೆ ಎಂದರು.
ಕೆಎಲ್ಇ ಧ್ವನಿ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಎಫ್ಎಂ ಎಂದರೆ ಕೇವಲ ಹಾಡು, ರಂಜನೆ ಮಾತ್ರ ಆಗಿರದೇ ಎಲ್ಲ ಕ್ಷೇತ್ರಗಳ ಮಾಹಿತಿ ಭಂಡಾರವೂ ಆಗಿರಬೇಕು. ಈ ನಿಟ್ಟಿನಲ್ಲಿಯೇ ಹುಟ್ಟಿಕೊಂಡಿರುವ ಕೆಎಲ್ಇ ಎಫ್ಎಂ ಸಾಹಿತ್ಯ, ಶೈಕ್ಷಣಿಕ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದೀಗ ಭೈರಪ್ಪನವರ ಸಾರ್ವಜನಿಕ ಸಂದರ್ಶನದ ಮೂಲಕ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಾಹಿತ್ಯ ಪ್ರಕಾಶನದಲ್ಲಿ ಲಭ್ಯವಿದೆ. ಎಸ್. ಎಲ್. ಭೈರಪ್ಪ ಮತ್ತು ಶತಾವಧಾನಿ ಡಾ. ಆರ್. ಗಣೇಶ ಅವರ ಎಲ್ಲ ಕೃತಿಗಳ ಪ್ರದರ್ಶನ ಮತ್ತು ಹಸ್ತಾಕ್ಷರದೊಂದಿಗೆ ಮಾರಾಟದ ವ್ಯವಸ್ಥೆಯೂ ಕಾರ್ಯಕ್ರಮದಂದು ಮಾಡಲಾಗಿದೆ ಎಂದು ಹೆಗಡೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

