ರಾಜಕಾರಣಿಗಳ ಹಿಡಿತದಲ್ಲಿ ಮರಳು ಮಾಫಿಯಾ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 16
ರಾಜಕಾರಣಿಗಳ ಹತ್ತಿರದ ಸಂಬಂಧಿಗಳು ನಡೆಸುತ್ತಿರುವ ಮರಳು ಮಾಫಿಯಾದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಎಂದು ರಾಜ್ಯ ಲಾರಿ ಅಸೋಸಿಯೇಷನ್ ಮಾಲೀಕರ ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ಗಣಿಗಾರಿಕೆ ನೀತಿಯಲ್ಲಿ ತಿದ್ದುಪಡಿ ಎಂದು ಹೇಳಿಕೊಂಡ ಸರ್ಕಾರ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಮೇಲೆ ಆಡಳಿತಶಾಹಿಯ ಮೂಗು ತೂರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಸ್ಟಾಕ್ ಯಾರ್ಡ್ನಲ್ಲಿ ಸಮರ್ಪಕ ಪ್ರಮಾಣದಲ್ಲಿ ಮರಳು ಸಂಗ್ರಹಿಸುವಲ್ಲಿ ವಿಫಲವಾಗಿರುವ ಲೋಕೋಪಯೋಗಿ ಇಲಾಖೆ, ಮರಳು ವ್ಯವಹಾರದ ಕುರಿತು ಇಲಾಖೆ ತನ್ನ ಮೊಂಡುತನ ಮುಂದುವರಿಸಿದ್ದು, ಇದರ ಪರಿಣಾಮವಾಗಿ ಮರಳು ಸಾಗಾಣಿಕೆದಾರರಿಗೆ ಸಾಕಷ್ಟು ಪರವಾನಗಿ ದೊರೆಯುತ್ತಿಲ್ಲ ಎಂದು ಹೇಳಿದರು.
ಆದಾಗ್ಯೂ, ಸರ್ಕಾರ ಮರಳು ಮಾಫಿಯಾಕ್ಕೆ ಅಕ್ರಮವಾಗಿ ಮರಳು ಸಂಗ್ರಹಿಸಲು ಮತ್ತು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಸ್ಟಾಕ್ ಯಾರ್ಡ್ಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಸಾಗಾಣಿಕೆದಾರರು ಅನಿವಾರ್ಯವಾಗಿ ಖಾಸಗಿ ಸ್ಟಾಕ್ಯಾರ್ಡ್ಗಳಲ್ಲಿ ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿಯವರಲ್ಲಿ ಖರೀದಿಸಿದ ಮರಳು ಸಾಗಾಣಿಕೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ಸಿಕ್ಕಾಪಟ್ಟೆ ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದೀಗ ಸರ್ಕಾರ ಮರಳು ಗಣಿಗಾರಿಕೆಯನ್ನು ಖಾಸಗಿಯವರಿಗೆ ಹರಾಜಿನ ಮೂಲಕ ಮಾರಾಟ ಮಾಡುತ್ತಿದೆ. ಖಾಸಗಿಯವರಿಂದ ತೆಗೆದುಕೊಂಡಿರುವ ಮರಳನ್ನು ಸರ್ಕಾರಿ ಸ್ಟಾಕ್ಯಾರ್ಡ್ಗಳಲ್ಲಿ ಸಂಗ್ರಹಿಸಿ ಪರವಾನಗಿ ಮುಖಾಂತರ ಮರಳು ಸಾಗಾಣಿಕೆದಾರರಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಮರಳು ಗಣಿಗಾರಿಕೆ ನಡೆಸುತ್ತಿರುವವರಿಂದ ಸಾಗಾಣಿಕೆದಾರರು ಖರೀದಿಸುವುದರಿಂದ ನಿರ್ಮಾಣವಾಗಿರುವ ಮರಳು ಕೊರತೆಯನ್ನು ನೀಗಿಸಬಹುದು ಎಂದು ಹೇಳಿದರು.
ಆದರೆ ಇತ್ತೀಚೆಗೆ ಸರ್ಕಾರ ನಡೆಸಿದ ಸಭೆಯಲ್ಲಿ ಸಮರ್ಪಕ ಪ್ರಮಾಣದಲ್ಲಿ ಮರಳನ್ನು ಸ್ಟಾಕ್ಯಾರ್ಡ್ನಲ್ಲಿ ಸಂಗ್ರಹಿಸುವ ಭರವಸೆ ನೀಡಿದ್ದು ಅಲ್ಲದೇ ಪರವಾನಗಿ ಪಡೆಯುವಂತೆ ಸೂಚಿಸಿದೆ. ಸ್ಟಾಕ್ಯಾರ್ಡ್ಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ಮರಳು ಸಂಗ್ರಹಿಸುವವರೆಗೆ ಪರವಾನಗಿ ಪಡೆಯುವುದಿಲ್ಲ. ಭರವಸೆ ನೀಡಿ ಐದು ದಿನಗಳು ಕಳೆದಿದ್ದರೂ ಇನ್ನೂ ಸ್ಟಾಕ್ಯಾರ್ಡ್ಗಳಲ್ಲಿ ಮರಳು ಸಂಗ್ರಹವಾಗಿಲ್ಲ ಎಂದು ಚನ್ನಾರೆಡ್ಡಿ ಸ್ಪಷ್ಟಪಡಿಸಿದರು.
ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಚನ್ನಾರೆಡ್ಡಿ ಸೋಮವಾರದವರೆಗೆ ಕಾಯ್ದು ಅನಂತರ ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಅವರ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಲಾರಿ ಸಂಚಾರ ಸ್ಥಗಿತಕ್ಕೆ ಚಿಂತನೆ ಮಾಡಲಾಗುತ್ತಿದ್ದು, ನೆರೆಯ ಜಿಲ್ಲೆ ಲಾರಿ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮರಳು ಸಾಗಾಣಿಕೆದಾರರ ಪ್ರತಿಭಟನೆಗೆ ಬೆಂಬಲಾರ್ಥವಾಗಿ ಧಾರವಾಡ ಜಿಲ್ಲಾ ಗುತ್ತಿಗೆದಾರರ ಸಂಘ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಮತ್ತು ಪ್ಲಂಬರ್ ಮತ್ತು ಕಾರ್ಪೆಂಟರ್ ಅಸೋಸಿಯೇಷನ್ನಿಂದ ಪ್ರತಿಭಟನೆ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

