ಧಾರವಾಡ

ಸಾಹಿತ್ಯ ಪರಂಪರೆಗೆ ಭಾಷ್ಯ ಬರೆದ ಸಂಭ್ರಮ

Published On :

ಧಾರವಾಡ: ಸಾಹಿತ್ಯ ಪರಂಪರೆಯಲ್ಲಿ ಹೊಸ ಸಂಪ್ರದಾಯ ಬರೆದು, ಯುವ ಸಾಹಿತಿಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಧಾರವಾಡ ಸಾಹಿತ್ಯ ಸಂಭ್ರಮ ಎರಡನೇ ದಿನವೂ ರಸವತ್ತಾಗಿತ್ತು. ಸಾಹಿತ್ಯ ಕ್ಷೇತ್ರದ ದಿಗ್ಗಜರು, ಯುವ ಸಾಹಿತಿಗಳು, ಸಾಹಿತ್ಯಾಸಕ್ತರ ದಂಡೇ ಸಂಭ್ರಮದಲ್ಲಿ ಭಾಗಿಯಾಗಿತ್ತು. ನಾಡಿನ ಹೆಸರಾಂತ ಸಾಹಿತಿಗಳಾದ ಎಸ್. ಎಲ್. ಭೈರಪ್ಪ, ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂರ್ತಿ, ಗಿರೀಶ ಕಾಸರವಳ್ಳಿ, ಎಂ.ಎಂ. ಕಲ್ಬುರ್ಗಿ, ಚನ್ನವೀರ ಕಣವಿ, ಜಯಂತ ಕಾಯ್ಕಿಣಿ, ಟಿ.ಎಸ್. ನಾಗಾಭರಣ, ಎಚ್.ಬಿ. ವಾಲೀಕಾರ, ಹಂ.ಪ. ನಾಗರಾಜಯ್ಯ ಮತ್ತಿತರ ದಿಗ್ಗಜರು ಅಲ್ಲಿ ಕೂಡಿದ್ದರು.
ಕಿರಿಯರಿಗೆ ಹಿಗ್ಗು...: ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಸಾಕಷ್ಟು ಯುವಕರು ಧಾರವಾಡ ಸಾಹಿತ್ಯ ಸಂಭ್ರಮ ನಡೆಯುತ್ತಿರುವ ಕವಿವಿ ಸುವರ್ಣ ಮಹೋತ್ಸವ ಕಟ್ಟಡದ ಆಸುಪಾಸು ಗಿರಕಿ ಹೊಡೆಯುತ್ತಿದ್ದರು. ಕೇವಲ ಪುಸ್ತಕದಲ್ಲಿಯೇ ನೋಡಿದ್ದ ನಾಡಿನ ಹೆಸರಾಂತ ಸಾಹಿತಿಗಳನ್ನು ಕಣ್ತುಂಬಿಕೊಂಡು ಹಿರಿ ಹಿರಿ ಹಿಗ್ಗಿದರು. ಹಿರಿಯ ಸಾಹಿತಿಗಳನ್ನು ಭೇಟಿ ಮಾಡಲು ಒಂದಿಷ್ಟು ಹಿಂಜರಿಕೆಯಿಂದಲೇ ಮುಂದಡಿಯನ್ನಿಟ್ಟು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ಅವರ ಹಸ್ತಾಕ್ಷರ ಪಡೆದು ಸಂಭ್ರಮಿಸಿದರು. ಮತ್ತೆ ಕೆಲವರು ನಿಮ್ಮ ಇಂಥ ಪುಸ್ತಕ ತುಂಬಾ ಸುಂದರ. ಇಷ್ಟವಾಯಿತು ಎನ್ನುತ್ತಿದ್ದರು. ಸಾಲದ್ದಕ್ಕೆ ನೆನಪಿನ ಬುತ್ತಿಯಲ್ಲಿ ಭದ್ರವಾಗಿರಿಸಲು ಕೆಲವರು ಫೋಟೋ, ಹಸ್ತಾಕ್ಷರ ಸಹ ತೆಗೆಸಿಕೊಂಡರು.
ದಿಗ್ಗಜರ ಮಿಲನ: ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಸಾಹಿತ್ಯ ಸಂಭ್ರಮ ಕೇವಲ ಸಾಹಿತ್ಯ. ಚರ್ಚೆ, ಗೋಷ್ಠಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ರಾಜ್ಯದ ಮೂಲೆ ಮೂಲೆಯಿಂದ ಬಂದ ಸಾಹಿತಿಗಳ ಮಿಲನಕ್ಕೂ ವೇದಿಕೆಯಾಗಿತ್ತು. ಅನೇಕ ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿಯಲ್ಲಿಯೇ ವ್ಯಸ್ತರಾಗಿರುತ್ತಾರೆ. ಇಂಥಹುದರಲ್ಲಿ ಬಹುದಿನಗಳಿಂದ ಭೇಟಿಯಾಗದ ಸಾಹಿತಿ ಮಿತ್ರರು ಇಲ್ಲಿ ಸೇರಿ ಕಷ್ಟ ಸುಖ ಹಂಚಿಕೊಂಡರು. ಗಮನಾರ್ಹ ಸಂಗತಿಯೆಂದರೆ ಸಾಹಿತ್ಯ ಪರಂಪರೆಯಲ್ಲಿ ಎಡ-ಬಲ, ತತ್ವ ಸಿದ್ಧಾಂತದಿಂದ ಉತ್ತರ-ದಕ್ಷಿಣಕ್ಕೆ ಮುಖ ಮಾಡಿದ ಸಾಹಿತಿಗಳೂ ಸಾಹಿತ್ಯ ಸಂಭ್ರಮದಲ್ಲಿ ಮುಖಾಮುಖಾಯಾಗುವಂತಾಯಿತು.
ವಿಭಿನ್ನ ಗೋಷ್ಠಿಗಳು: ಎರಡನೇ ದಿನ ಗೋಷ್ಠಿಗಳು ರಸವತ್ತಾಗಿದ್ದವು. ಅರಿತ, ಅರಿಯದ ಸಾಕಷ್ಟು ವಿನೂತನ ವಿಷಯಗಳ ಮೇಲೆ ಚರ್ಚೆ ನಡೆದವು. ಶನಿವಾರ ಬೆಳ್ಳಂಬೆಳಗ್ಗೆ ನಡೆದ ಚರ್ಚೆಯಂತೂ ಮಧ್ಯಾಹ್ನದ ಊಟದ ಹೊತ್ತಿನವರೆಗೂ ಸಾಹಿತ್ಯಿಕ ವರ್ಗದಲ್ಲಿ ಚರ್ಚೆಯಾಗುತ್ತಲೇ ಇತ್ತು. ಜನಪ್ರಿಯ ಸಾಹಿತ್ಯದ ಸಾಂಸ್ಕೃತಿಕ ಆಯಾಮಗಳು ಎಂಬ ವಿಷಯದ ಮೇಲೆ ಚರ್ಚೆ ನಡೆದು, ಗಂಭೀರ ಸಾಹಿತ್ಯ ಇಂದಿನ ಸಮಾಜಕ್ಕೆ ಅಗತ್ಯ ಎನ್ನುವ ಅಭಿಪ್ರಾಯ ಬಹುಜನರಿಂದ ವ್ಯಕ್ತವಾಗುವಂತೆ ಮಾಡಿತು. ಸಾಹಿತ್ಯ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖವಾಗಿರಬೇಕು. ಸಾಹಿತ್ಯ ಸಮಾಜಮುಖಿಯಾಗಿರಬೇಕು, ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಂತಾಗಬೇಕೆಂಬ ಅಭಿಪ್ರಾಯವೇ ಬಲವಾಗಿತ್ತು. ಸಂಶೋಧನೆ- ಇತ್ತೀಚಿನ ಪ್ರವೃತ್ತಿಗಳು ಗೋಷ್ಠಿ ಸಂಶೋಧನಾ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿತು. ಉತ್ತರದ ಬೇಂದ್ರೆ ದಕ್ಷಿಣದ ಕುವೆಂಪು ಅವರ ಕವಿತೆಗಳು ಎಕಡೂ ದಿಕ್ಕನ್ನು ಒಟ್ಟಿಗೆ ಸೇರಿಸಿದವು. ಇಬ್ಬರೂ ಮಹಾನ ಚೇತನಗಳ ಕವಿತೆಗಳು ನೆರೆದರ ಮನದಲ್ಲಿ ಹೊಸ ಚಿಲುಮೆ, ಜಾಗೃತಿಯ ಬೀಜ ಬಿತ್ತಿದವು. ಚಂದ್ರಶೇಖರ ಕಂಬಾರ ಅವರೊಂದಿಗೆ ಸಾಹಿತಿಯೊಂದಿಗೆ ಈ ಸಂಜೆ ಗೋಷ್ಠಿ ಮೂಲಕ ಎರಡನೇ ದಿನದ ಸಂಭ್ರಮಕ್ಕೆ ತೆರೆಬಿತ್ತು. ಒಟ್ಟಾರೆ ರಡನೇ ದಿನ ಬಿಟ್ಟು ಇದೀಗ 3ನೇ ದಿನಕ್ಕೆ ಕಾಲಿಟ್ಟ ಧಾರವಾಡ ಸಾಹಿತ್ಯ ಸಂಭ್ರಮ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.