ಧಾರವಾಡ

ಯಶಸ್ವಿ ಉದ್ಯಮಿಯಿಂದ ಆರ್ಥಿಕ ಬದಲಾವಣೆ

Published On :

ನೂರು ಜನರಲ್ಲಿ ಒಬ್ಬರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರೂ ಸಾಕು ಆ ಪ್ರದೇಶದಲ್ಲಿನ ಆರ್ಥಿಕತೆಯಲ್ಲಿ ಸುಧಾರಣೆ ಕಾಣಲು ಸಾಧ್ಯ.
ಹೀಗೆಂದು ವಿಶ್ವಾಸ ವ್ಯಕ್ತಪಡಿಸಿದವರು ದೇಶಪಾಂಡೆ ಫೌಂಡೇಶನ್ನ ಸಂಸ್ಥಾಪಕ ಗುರುರಾಜ 'ದೇಶ್' ದೇಶಪಾಂಡೆ. ಉದ್ಯಮಶೀಲ ವ್ಯಕ್ತಿಗಳನ್ನು ರೂಪಿಸುವಲ್ಲಿ ದೇಶಪಾಂಡೆ ಫೌಂಡೇಶನ್ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಸಾಕಷ್ಟು ಯಶಸ್ವಿ ಉದ್ಯಮಿಗಳನ್ನು ಸಮಾಜಕ್ಕೆ ನೀಡುವಲ್ಲಿಯೂ ಯಶಸ್ವಿಯಾಗಿದೆ ಎಂದರು.
ಟೈ ಕನೆಕ್ಟ್ ಸಮ್ಮೇಳನಕ್ಕೆ ಸಂಬಂಧಿಸಿದಂತೆ 'ಕನ್ನಡಪ್ರಭ' ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಒಟ್ಟಾರೆ ಹೇಳಿದ್ದಿಷ್ಟು.
ಉದ್ಯಮಶೀಲ ವ್ಯಕ್ತಿಗಳನ್ನು ರೂಪಿಸಿ, ಈ ಭಾಗದಲ್ಲಿ ವಿವಿಧ ಹಂತದ ಉದ್ಯಮಗಳನ್ನು ತೆರೆಯಲು ಉತ್ತೇಜನ ನೀಡಿ ಪ್ರೋತ್ಸಾಹಿಸುವ ಮಹತ್ತರ ಉದ್ದೇಶದಿಂದಲೇ ಜ. 22ರಂದು ನಗರದಲ್ಲಿ 'ಟೈ ಕನೆಕ್ಟ್-2014' ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ತಾವುಗಳು ವಿವಿಧ ಕ್ಷೇತ್ರದಲ್ಲಿ ಹೊಂದಿರುವ ಜ್ಞಾನವನ್ನು ಹೊರಗೆಡವಲಿದ್ದಾರೆ. ಆ ಮೂಲಕ ವಿನೂತನ ಪ್ರಯೋಗ ಹಾಗೂ ಆವಿಷ್ಕಾರಗಳಿಂದ ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗಿ ಹೊರ ಹೊಮ್ಮಲಿದ್ದೇವೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಿದ್ದಾರೆ.
ಫೌಂಡೇಶನ್ನಿಂದ ಸ್ಫೂರ್ತಿ: ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಆದ್ದರಿಂದ ಯಾವುದೊಂದು ಸಮಸ್ಯೆ ಎದುರಾದಾಗ ಧೃತಿಗೆಡದೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದಲ್ಲಿ ಪರಿಹಾರ ಸಿಗದೇ ಇರಲಾರದು. ಅಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಡುವ ಪ್ರಯತ್ನ ಮುಂದೊಂದು ದಿನ ಆ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎನ್ನುವುದು ನಿಸ್ಸಂಶಯ. ಇಂತಹ ಮನೋಭಾವನೆ ಹೊಂದುವುದು ಅತ್ಯಂತ ಅವಶ್ಯಕ. ಸಮಸ್ಯೆಯನ್ನೇ ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಕೂಡ ಆಸಾಧ್ಯ. ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಬೇಕೆಂಬ ಅಚಲ ವಿಶ್ವಾಸ ಹೊಂದಿದವರಿಗೆ ಸ್ಫೂರ್ತಿ ನೀಡುವ ಕಾರ್ಯ ಫೌಂಡೇಶನ್ ಅಚ್ಚುಕಟ್ಟಾಗಿ ಮಾಡುತ್ತಿದೆ.
ಕಠಿಣ ಪರಿಶ್ರಮ: ಕಠಿಣ ಪರಿಶ್ರಮ ಇದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದಾಗಿದೆ. ಉದ್ಯಮಿ ಆಗಬೇಕೋ ಅಥವಾ ಉದ್ಯೋಗಸ್ಥನಾಗಬೇಕೋ ಎಂಬುದನ್ನು ಮೊದಲು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು. ಉದ್ಯಮಿಯಾಗಲು ಉದ್ಯಮಶೀಲತಾ ಜಾಣ್ಮೆ ಹೆಚ್ಚಿಸಿಕೊಂಡು ಎಲ್ಲರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಉದ್ಯೋಗಸ್ಥನಾಗಬೇಕೆಂಬ ಉದ್ದೇಶ ಹೊಂದಿರುವವರು ಆಯಾ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವುದು ಅತ್ಯಂತ ಅವಶ್ಯಕ. ಅಲ್ಲದೇ, ಉದ್ಯೋಗಿ ಕಂಪನಿ ನೀಡುವ ಕೆಲಸವನ್ನಷ್ಟೇ ಮಾಡಬೇಕೆಂಬ ವಿಚಾರಧಾರೆಯನ್ನು ಬದಲಿಸಿಕೊಂಡು ಆಯಾ ಕೆಲಸದಲ್ಲಿ ತನ್ನ ಬುದ್ಧಿಮತ್ತೆ ಓರೆಗಲ್ಲಿಗೆ ಹಚ್ಚಿ ಕಾರ್ಯ ನಿರ್ವಹಿಸುವುದರಿಂದ ಕಂಪನಿಯೊಟ್ಟಿಗೆ ತಾನೂ ಅಭಿವೃದ್ಧಿಯಾಗಲು ಸಾಧ್ಯ.
ಹೆದರಿಕೆ ಹೊಡೆದೊಡಿಸಿ: ಉದ್ಯಮ ಕ್ಷೇತ್ರದಲ್ಲಿ ಕಾಲಿರಿಸುವ ಯುವಕರು ಮೊಟ್ಟ ಮೊದಲು ಹೆದರಿಕೆ ಹೊಡೆದೊಡಿಸಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಈ ಕ್ಷೇತ್ರದಲ್ಲಿ ಮುಂದುವರಿದರೆ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ತಮ್ಮನ್ನು ತಾವು ಕಾಣಲು ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿರುವುದು ಅಗತ್ಯ. ಗುಣಮಟ್ಟದ ಮೂಲ ಸೌಕರ್ಯಗಳನ್ನು ಹೊಂದುವುದರಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿಲ್ಲ. ಅಚಲ ವಿಶ್ವಾಸದಿಂದ ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಯುವ ಉದ್ಯಮಿಗಳಲ್ಲಿ ಇಂಥ ಸ್ಫೂರ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಫೌಂಡೇಶನ್ ಸಾಕಷ್ಟು ರೀತಿ ಪ್ರಯತ್ನಿಸುತ್ತಿದೆ.
650ಕ್ಕೂ ಹೆಚ್ಚು: ದೇಶಪಾಂಡೆ ಫೌಂಡೇಶನ್ ವರ್ಷವಿಡಿ ದೇಶಾದ್ಯಂತ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ವರ್ಷ 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತಿದೆ. ಈ ಪೈಕಿ ಪಿಎಸ್ಪಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಿಂಗಳಿಗೆ ರು. 15 ಸಾವಿರ ಸಂಭಾವನೆ ಪಡೆಯುತ್ತಿದ್ದರೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪೂರೈಸಿದ ವಿದ್ಯಾರ್ಥಿಗಳು ರು. 6-8 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ. ಇದು ಆಯಾ ವ್ಯಕ್ತಿಗಳ ಬದುಕಿನ ನಿರ್ವಹಣೆಗೆ ಆಸರೆ ಒಂದೆಡೆಯಾದರೆ ಆಯಾ ಭಾಗದಲ್ಲಿ ಆರ್ಥಿಕತೆ ಸುಧಾರಣೆಯಲ್ಲೂ ಇದು ಸಾಕಷ್ಟು ಪ್ರಭಾವ ಬೀರಲಿದೆ.
ಅತ್ಯುತ್ತಮ ಅವಕಾಶ: ದ್ವಿತೀಯ ದರ್ಜೆಯ ನಗರಗಳಲ್ಲಿ ವಿವಿಧ ಉದ್ಯಮಶೀಲ ವ್ಯಕ್ತಿಗಳು, ಹೂಡಿಕೆದಾರರಿಂದ ಸ್ಥಾಪಿಸಲ್ಪಟ್ಟ ಉದ್ಯಮಗಳ ಯಶೋಗಾಥೆ, ಸಾಹಸ ಯಾತ್ರೆ ತಿಳಿದುಕೊಳ್ಳುವ ದೆಸೆಯಿಂದ ಈ ಭಾಗದ ಯುವ, ಉತ್ಸಾಹಿ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಶೀಲ ವ್ಯಕ್ತಿಗಳಿಗೆ ಟೈ-ಕೆನೆಕ್ಟ್-2014 ಅವಕಾಶ ಒದಗಿಸಲಿದೆ. ಈ ಭಾಗದ ಉದ್ಯಮಶೀಲ ವ್ಯಕ್ತಿಗಳೂ ಇಂಥ ಮೇರು ವ್ಯಕ್ತಿತ್ವದ ಉದ್ಯಮಶೀಲ ವ್ಯಕ್ತಿಗಳ ಅನುಭವದ ಮಾತುಗಳನ್ನಾಲಿಸಿ ತಮ್ಮ ಉದ್ಯಮಗಳನ್ನು ಕೂಡ ಯಶಸ್ವಿಯಾಗಿ ವಿಸ್ತರಿಸುವುದಕ್ಕೆ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟುವ ಮೂಲಕ ಈ ಪ್ರಾಂತ್ಯದಲ್ಲಿ ಔದ್ಯೋಗಿಕರಣಕ್ಕೆ ನಾಂದಿ ಹಾಡುವ ಮಹತ್ತರ ಉದ್ದೇಶ ಈ ಸಮ್ಮೇಳನದಿಂದ ಫಲಿಸಲಿದೆ ಎಂಬ ವಿಶ್ವಾಸವನ್ನು ಗುರುರಾಜ ದೇಶಪಾಂಡೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.