ನಾಳೆ ವಿಕಾಸ ವಾಹಿನಿ ರಥ ಯಾತ್ರೆಗೆ ಚಾಲನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 23
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸಾಧನೆಯನ್ನು ಹೊತ್ತ 'ವಿಕಾಸ ವಾಹಿನಿ' ಭಾರತ ಗೆಲ್ಲಿಸಿ ರಥ ಯಾತ್ರೆ ಹಾಗೂ 'ಪ್ರಗತಿಯ ಪರ್ವ' ಸಾಕ್ಷ್ಯಚಿತ್ರ ಸಿಡಿ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಮೂರು ಸಾವಿರ ಮಠದ ಮೈದಾನದಲ್ಲಿ ಜ. 25ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರು. ಚಿತ್ರ ನಟ ಗಣೇಶ ಸಿಡಿ ಬಿಡುಗಡೆ ಮಾಡುವರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮತ್ತಿತರರು ಪಾಲ್ಗೊಳ್ಳುವರು. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
32 ದಿನ ಪ್ರವಾಸ: ಎದುರಾಗಲಿರುವ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಟ್ಟಕೊಂಡು ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ರಥ ಸಂಚರಿಸಲಿದೆ. ಜ. 26ರಿಂದ ಮಾ. 1ರ ವರೆಗೆ ರಥ ಸಂಚರಿಸಲಿದೆ. ಧಾರವಾಡ ಲೋಕಸಭೆ ಕ್ಷೇತ್ರದ 120 ಕಡೆಗಳಲ್ಲಿ ಮೋದಿ ಹಾಗೂ ಜೋಶಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ ಎಂದು ನಾಗರಾಜ ತಿಳಿಸಿದರು.
ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿ ಪ್ರಧಾನಿಯಾದರೆ ಮಾತ್ರ ದೇಶದ ಚಿತ್ರಣ ಬದಲಾಗುತ್ತದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಮೋದಿಯವರನ್ನು ಪ್ರಧಾನಿಯಾಗಸಬೇಕು ಎಂದು ನಾಗರಾಜ ಹೇಳಿದರು.
ಕರಪತ್ರ ಅಭಿಯಾನ: ಇದೇ ವೇಳೆ ಮಾತನಾಡಿದ ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಮೊದಲ ಹಂತವಾಗಿ ಕರಪತ್ರ ಅಭಿಯಾನ ಹಮ್ಮಿಕೊಂಡಿದೆ. 'ಬಿಜೆಪಿ ತನ್ನಿ ದೇಶ ಉಳಿಸಿ' ಎಂಬ ಕರಪತ್ರದ ಮೂಲಕ ಬಿಜೆಪಿ ಸಾಧನೆಯನ್ನು ಜನರಿಗೆ ತಿಳಿಸಿಕೊಡಲಾಗುತ್ತಿದೆ. 'ಭಾರತ ಗೆಲ್ಲಿಸಿ' ಕರಪತ್ರ ಹಂಚುವ ಮೂಲಕ ನರೇಂದ್ರ ಮೋದಿಯವರ ಸಾಧನೆ ಬಿತ್ತರಿಸಲಾಗುತ್ತಿದೆ. 'ಜನಜಾಗರಣ ಅಭಿಯಾನ' ಕರಪತ್ರ ಹಂಚುವ ಮೂಲಕ ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ ಎಂದು ಕರೆ ನೀಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್ನಲ್ಲಿ ಕರಪತ್ರ ಹಂಚಲಾಗುತ್ತಿದೆ. ಮಹಾನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 1.5 ಲಕ್ಷ ಕರಪತ್ರ ಹಂಚಲಾಗುತ್ತಿದೆ ಎಂದರು.
ವೋಟಿನ ಜತೆ ನೋಟು: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ 'ವೋಟು ಜತೆಗೊಂದು ನೋಟು' ಅಭಿಯಾನ ಕೈಗೊಳ್ಳಲಾಗಿದೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರುವ ಜತೆಗೆ ಪಕ್ಷಕ್ಕೆ ನಿಧಿ ಸಂಗ್ರಹಿಸುವ ಅಭಿಯಾನ ಇದಾಗಿದೆ. ಜನ ಬಿಜೆಪಿಗೆ ಮತ ನೀಡುವುದಾಗಿ ಅಭಯ ನೀಡುವುದರ ಜತೆಗೆ ಪಕ್ಷಕ್ಕೆ ನಿಧಿಯನ್ನೂ ನೀಡುತ್ತಿದ್ದಾರೆಂದು ಲಿಂಗರಾಜ ಪಾಟೀಲ ತಿಳಿಸಿದರು.
ವಿಭಾಗೀಯ ಸಹಪ್ರಮುಖ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

