ಪರೀಕ್ಷಾ ಕಲೆ ಕಲಿತ ವಿದ್ಯಾರ್ಥಿಗಳು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 24
ಎಸ್ಎಸ್ಎಲ್ಸಿ ಪರೀಕ್ಷೆ ಭೂತ ವಿದ್ಯಾರ್ಥಿಗಳ ಮೇಲೆ ಸವಾರಿ ಮಾಡಲಾರಂಭಿಸಿದೆ. ಪರೀಕ್ಷೆಗೆ ಹೇಗೆಲ್ಲಾ ಅಣಿಯಾಗಬೇಕು? ಯಾವ ವಿಷಯಕ್ಕೆ ಹೆಚ್ಚಿನ ಒತ್ತು ನೀಡಬೇಕು? ಎಂದು ವಿದ್ಯಾರ್ಥಿಗಳ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ 'ಪಿಕ್ನಿಕ್ ಫಜಲ್' ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಗೊಳಿಸಿತು.
ಎಸ್ಎಸ್ಎಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಸರ್ಕಾರದ ವಿನೂತನ ಯೋಜನೆಯೇ 'ಪಿಕ್ನಿಕ್ ಫಜಲ್'. ವಿದ್ಯಾರ್ಥಿಗಳು ಶುಕ್ರವಾರ ಈ ಯೋಜನೆಯ ಸದುಪಯೋಗ ಪಡೆದರು. ಸ್ವಚ್ಛ, ಸುಂದರ ವಾತಾವರಣದಲ್ಲಿ ಪಿಕ್ನಿಕ್ ಮಾಡಲು ಹೋದವರಂತಾಗಿ ಪರೀಕ್ಷೆಗೆ ಅಣಿಯಾಗುವುದು ಯೋಜನೆಯ ಪ್ರಮುಖ ಉದ್ದೇಶ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ 23 ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಇಂದಿರಾ ಗಾಜಿನ ಮನೆಯಲ್ಲಿ ಸೇರಿದ್ದರು. 25 ಪ್ರತ್ಯೇಕ ಗ್ರುಪ್ಗಳನ್ನು ಮಾಡಲಾಗಿತ್ತು, ಒಂದೊಂದು ಗ್ರುಫ್ನಲ್ಲಿ 40 ವಿದ್ಯಾರ್ಥಿಗಳಿದ್ದರು. ಇವರೆಲ್ಲರಿಗೆ ಪಾಠ ಮಾಡಲು 50ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕಿಯರಿದ್ದರು.
ಆಟದ ಜತೆ ಪಾಠ: ಇಷ್ಟು ದಿನಗಳ ಕಾಲ ಶಾಲೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಪಾಠ ನಡೆಯುತ್ತಿತ್ತು. ಆದರೆ ಶುಕ್ರವಾರ ಇಂದಿರಾ ಗಾಜಿನ ಮನೆಯ ಉದ್ಯಾನವನದಲ್ಲಿ ಪಾಠ ನಡೆದಿತ್ತು. ಎಸ್ಎಸ್ಎಲ್ಸಿ ಪರೀಕ್ಷೆಗೆ ಅಗತ್ಯ ಪ್ರಮುಖ ಪಾಠಗಳನ್ನು ಆಟದ ಮುಖೇನ ಹೇಳಿ ಕೊಡಲಾಯಿತು.
ಶಾಲೆಯಲ್ಲಿ ಗಂಭೀರ ವದನರಾಗಿ ವಿದ್ಯಾರ್ಥಿಗಳು ಪಾಠ ಆಲಿಸುತ್ತಿದ್ದರೆ, ಇಲ್ಲಿ ವಿದ್ಯಾರ್ಥಿಗಳು ನಕ್ಕು-ನಲಿಯುತ್ತಾ, ಮೋಜು-ಮಸ್ತಿ ಮಾಡುತ್ತಾ ಪಾಠ ಕಲಿತರು. ವಿದ್ಯಾರ್ಥಿಗಳಿಗೆ ತಾವು ಪಿಕ್ನಿಕ್ಗೆ ಬಂದಿದ್ದೇವೆ ಎನ್ನುವ ಗುಂಗಿತ್ತೇ ವಿನಃ ಪಾಠ, ಪಠ್ಯದ ಒತ್ತಡವಿರಲಿಲ್ಲ.
ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಅಗ್ನಿಪರೀಕ್ಷೆಯಂತೆ ಭಾಸವಾಗುತ್ತದೆ. ಆದರೆ ಈ ವಿಷಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡರೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಪರೀಕ್ಷೆ ಎನ್ನುವ ಮಾನಸಿಕ ಒತ್ತಡದಿಂದ ವಿದ್ಯಾರ್ಥಿಗಳು ಹೇಗೆ ಹೊರ ಬರಬೇಕು ಎನ್ನುವ ಕಲೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು.
ಪರೀಕ್ಷೆ ಎದುರಾಗುತ್ತಿದೆ ಎಂದ ಕೂಡಲೇ ವಿದ್ಯಾರ್ಥಿಗಳು ಗಂಟೆ ಗಟ್ಟಲೆ ಪುಸ್ತಕ ಹಿಡಿದು ಓದುತ್ತಿರುತ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ, ಪರೀಕ್ಷೆಗೆ ಅಣಿಯಾಗುವುದೇ ಒಂದು ಕಲೆ, ಆಯ್ದ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆಸಕ್ತಿ ತೋರಬೇಕು. ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂದುಕೊಂಡಿರುವ ಗಣಿತ ಬಿಡಿಸುವ ಸರಳ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಲಾಯಿತು. ಒಟ್ಟಾರೆಯಾಗಿ ದಿನ ಪೂರ್ತಿ ಆಟದ ಜತೆಗೆ ಪರೀಕ್ಷೆಯ ಪಾಠ ಕಲಿತ ವಿದ್ಯಾರ್ಥಿಗಳು ಇಂದಿರಾ ಗಾಜಿನ ಮನೆಯಿಂದ ಹೊರ ಬರುವಾಗ ಪರೀಕ್ಷೆ ಒತ್ತಡದಿಂದ ಮುಕ್ತರಾದವರಂತೆ ಕಂಡು ಬಂದರು.
ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳಿಗೆ ಹೆದರುವುದು ಸಹಜ. ಈ ಹೆದರಿಕೆ ಹೋಗಲಾಡಿಸುವ ಯೋಜನೆಯೇ ಪಿಕ್ನಿಕ್ ಫಜಲ್. ಆಟವಾಡುತ್ತಾ ಪಾಠ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲಾಗುತ್ತದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದಿಂದ ಪರೀಕ್ಷೆಯ ಒತ್ತಡದಿಂದ ಮುಕ್ತರಾಗುತ್ತಾರೆ. ಪರೀಕ್ಷೆಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಈ ಯೋಜನೆ ತುಂಬಾ ಫಲಕಾರಿಯಾಗಿದೆ.
- ಸುನಿತಾ
ಶಿಕ್ಷಕಿ, ರಾಜೀಗಾಂಧಿ ಸರ್ಕಾರಿ ಪ್ರೌಢ ಶಾಲೆ
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

