ಅಲ್ಲಲ್ಲಿ ಸಂಭ್ರಮದಿಂದ 65ನೇ ಗಣರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 27
65ನೇ ಗಣರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ ಅಲ್ಲಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು. ವಿವಿಧ ಶಾಲೆಯ ಮಕ್ಕಳಿಂದ ಅಲ್ಲಲ್ಲಿ ಆಕರ್ಷಕ ಪಥಸಂಚಲನ ಜರುಗಿತು.
ಆಕ್ಸ್ಫರ್ಡ್ ಕಾಲೇಜಿನಲ್ಲಿ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಸನ್ನಡತೆಯ ಜನಪ್ರತಿನಿಧಿಯ ಆಯ್ಕೆಯಾಗಬೇಕು ಎಂದು ನೈಋತ್ಯ ರೇಲ್ವೆ ವಲಯದ ಡೆಪ್ಯೂಟಿ ಚೀಫ್ ಮಟೀರಿಯಲ್ ಮ್ಯಾನೇಜರ್ ಚಂದನಕುಮಾರ ಹೇಳಿದರು. ಇಲ್ಲಿನ ಆಕ್ಸ್ಫರ್ಡ್ ಕಾಲೇಜಿನಲ್ಲಿ ಜರುಗಿದ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ, ಪ್ರಜಾಪ್ರಭುತ್ವದಲ್ಲಿ ಎಲ್ಲ ಧರ್ಮ, ಎಲ್ಲ ವರ್ಗದವರಿಗೆ ಸಮಾನ ಅವಕಾಶವಿದೆ. ಯುವಪೀಳಿಗೆ ಜ್ಞಾನ ಮತ್ತು ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾಚಾರ್ಯ ರಾಜೇಂದ್ರ ಶೀಗಿಹಳ್ಳಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಅರಿಫಾ ಮಕಾನದಾರ ಇದ್ದರು. ರೋನಾಕ್ಷಿ ಸ್ವಾಗತಿಸಿದರು. ಸುಹೈಲ್ ಕಾರ್ಯಕ್ರಮ ನಡೆಸಿಕೊಟ್ಟರು. ರಿಚಾ ಮಹಾಜನ್ ನಿರೂಪಿಸಿದರು. ಎಂ. ನೇಹಾ ವಂದಿಸಿದರು.
ಪಿ.ಸಿ. ಜಾಬೀನ್ ಕಾಲೇಜಿನಲ್ಲಿ: ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬೀನ್ ಕಾಲೇಜಿನಲ್ಲಿ 65ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಡಾ. ಎಂ.ಟಿ. ದೊಡಮನಿ, ಡಾ. ಎ.ಪಿ.ಜೆ ಅಬ್ದುಲ್ ಕಲಾಂರ ಕನಸು ನನಸು ಮಾಡಬೇಕಾದರೆ ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ನಡೆದು ದೇಶವನ್ನು ಮುನ್ನಡೆಸಬೇಕಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಾದ ಕಿರಣಕುಮಾರ, ದೇವರೇಶ ಉಳ್ಳಾಗಡ್ಡಿ, ಸತೀಶಗೌಡ ಪಾಟೀಲ ಗಣರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು. ಪುನೀತಕುಮಾರ ಯೋಗ ಪ್ರದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಾಮರಾವ್ ಸೈನಿಕ ಶಾಲೆಯಲ್ಲಿ: ಹುಬ್ಬಳ್ಳಿಯ ಗುರುನಾಥ ನಗರದ ಪ್ರಿಯದರ್ಶಿನಿ ಜನಸೇವಾ ಸಾಗರ ಸಂಸ್ಥೆ ವತಿಯಿಂದ ಆಯೋಜಿಸಿದ್ದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಚಟಗೇರಿಯ ಐಎನ್ಎ ರಾಮರಾವ್ ಸೈನಿಕ ಶಾಲೆ ವಿದ್ಯಾರ್ಥಿಗಳಿಂದ ಜವಾಹರಲಾಲ್ ನಗರ, ವಿಶಾಲ ನಗರ, ಕಾರವಾರ ರಸ್ತೆ, ಇಂಡಿ ಪಂಪ್, ಹಳೇ ಹುಬ್ಬಳ್ಳಿ, ಕಿಲ್ಲೆ, ಚೆನ್ನಪೇಟ, ಜಿವ್ಹೇಶ್ವರ ಶಾಲೆ, ಕಾರವಾರ ರಸ್ತೆ, ಇಎಸ್ಐ ಆಸ್ಪತ್ರೆ, ಸಿದ್ಧಾರೂಢ ಮಠದ ಮಾರ್ಗದಲ್ಲಿ ಸಂಚರಿಸಿ ಪುನಃ ಶಾಲೆಗೆ ತಲುಪಿತು. ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎ.ಜಿ. ದೇಶಪಾಂಡೆ, ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ವಿವರಿಸಿರುವ ನೀತಿ ಸಂಹಿತೆ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಿ.ಡಿ. ಮೇಚನ್ನವರ ಇದ್ದರು. ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಮಕ್ಕಳ ಕೈಯಲ್ಲಿ ಖಾದಿಯಿಂದ ಸಿದ್ಧಪಡಿಸಿದ ರಾಷ್ಟ್ರಧ್ವಜ ನೀಡಲಾಗಿತ್ತು.
ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದಲ್ಲಿ: ಅಕ್ಷಯ ಕಾಲೋನಿಯ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದಲ್ಲಿ 65ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿಷ್ಠಾನದ ನಿರ್ದೇಶಕ ಗುರುಸಿದ್ದಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗ್ಲೋಬಲ್ ಕಾಲೇಜು ಪ್ರಾಂಶುಪಾಲ ಡಾ. ಮಹೇಶ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಗಣರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಎನ್ಡಬ್ಲ್ಯೂಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್ ಅವರು 65ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದರು. ನಮ್ಮ ಹಿರಿಯರ ಸತತ ಹೋರಾಟ ಬಲಿದಾನಗಳ ಫಲವಾಗಿ ಇಂದು ನಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಇದ್ದರು.
ಎಚ್.ಎಫ್. ಕಟ್ಟಿಮನಿ ಶಾಲೆಯಲ್ಲಿ: ಕೆಎಲ್ಇ ಸಂಸ್ಥೆಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಶಾಲೆ, ಜಗದ್ಗುರು ಗುರುಸಿದ್ಧೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯ ಆಶ್ರಯದಲ್ಲಿ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜಿ. ವಾಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಟಿಟಿಐ ಕಾಲೇಜು ಪ್ರಾಂಶುಪಾಲ ಬಿ.ಬಿ. ನಾಯ್ಕ, ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಕರ್ತವ್ಯಗಳನ್ನು ಸ್ವಯಂಸ್ಫೂರ್ತಿಯಿಂದ ನಿರ್ವಹಿಸಬೇಕು ಎಂದರು. ಎಂ.ಎನ್. ಅಂಗಡಿ ಸ್ವಾಗತಿಸಿದರು. ಐ.ಎಸ್. ಪಾಟೀಲ, ಸಿ.ಎಸ್. ಹೊಸಗಾಣಿಗೇರ ಪಥಸಂಚಲನ ನಡೆಸಿಕೊಟ್ಟರು. ಕೆ.ಬಿ. ಗುಂಡಳ್ಳಿ ನಿರೂಪಿಸಿ, ಬಿ.ಎ. ದೇವರ ವಂದಿಸಿದರು.
ರಂಭಾಪುರಿ ಶ್ರೀಗಳಿಂದ: ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಶ್ರೀಗಳು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಾಜಕಾರಣಿಗಳು ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು. ರಂಭಾಪುರಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆರ್.ಎಂ. ಹಿರೇಮಠ, ಬಿ.ಎಸ್. ಪಾಟೀಲ, ಶಿವದೇವ ಚಿಕ್ಕಮಠ, ಎಫ್.ಸಿ. ಕಳ್ಳಿಮಠ, ಯೋಗುಗುರು ಪಿ.ಜೆ. ಕವಲೂರ, ಚೆನ್ನಬಸಪ್ಪ ಉಕ್ಕಲಿ, ಬಸವರಾಜ ಸುಳ್ಳದ, ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

