ನಿರ್ಬಂಧ ವಿಧಿಸಿದರೂ ತಪ್ಪದ ಟ್ರಾಫಿಕ್ ಕಿರಿಕಿರಿ
ಹುಬ್ಬಳ್ಳಿ: ಅಕ್ಕಿಹೊಂಡ ವ್ಯಾಪ್ತಿಯಲ್ಲಿ ಕೃಷಿ ಉತ್ಪನ್ನಗಳ ಸಗಟು ವ್ಯಾಪಾರಕ್ಕೆ ಹೈಕೋರ್ಟ್ ವಿಧಿಸಿದ ನಿರ್ಬಂಧಕ್ಕೆ ಬೆಲೆ ಇಲ್ಲದಂತಾಗಿದ್ದು, ಸಗಟು ಅಕ್ಕಿ ಮತ್ತು ಬೆಲ್ಲದ ವ್ಯಾಪಾರ ನಿಂತಿರುವಂತೆ ಕಂಡರೂ ಟ್ರಾಫಿಕ್ ಸಮಸ್ಯೆಗೆ ಮಾತ್ರ ಇನ್ನೂ ಪರಿಹಾರ ದೊರಕಿಲ್ಲ.
ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿನ ಸಗಟು ಅಕ್ಕಿ ವ್ಯಾಪಾರ ಮಾರುಕಟ್ಟೆಯಿಂದಾಗಿ ನಗರ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರ ಅಕ್ಕಿ, ಬೆಲ್ಲ ಮತ್ತು ತೆಂಗಿನಕಾಯಿಯಂತಹ ಸಗಟು ವ್ಯಾಪಾರವನ್ನು ಅಮರಗೋಳದ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿತ್ತು.
ಸೆ. 4ರಂದು ಹೈಕೋರ್ಟ್ ಆದೇಶ ಜಾರಿಯಾದ ನಂತರ ಕೆಲಕಾಲ ಸ್ಥಗಿತಗೊಂಡಿದ್ದ ಸಗಟು ಅಕ್ಕಿ ವ್ಯಾಪಾರ ಇಂದಿಗೂ ಅಲ್ಲಲ್ಲಿ ಚಿಲ್ಲರೆ ವ್ಯಾಪಾರದ ಹೆಸರಿನಲ್ಲಿ ನಡೆಯುತ್ತಿದೆ. ಇದಕ್ಕೆ ಸರ್ಕಾರದ ನಿಯಮವೂ ಕಾರಣವಾಗಿದೆ. ಚಿಲ್ಲರೆ ವ್ಯಾಪಾರಿ ಕನಿಷ್ಠ 100 ಕ್ವಿಂಟಲ್ ದವಸ, ಧಾನ್ಯ ಸಂಗ್ರಹಿಸಿ ಮಾರುವುದಕ್ಕೆ ಅವಕಾಶವಿದ್ದು, ಈ ನಿಯಮದ ಅವಕಾಶ ಉಪಯೋಗಿಸಿಕೊಳ್ಳುವ ವ್ಯಾಪಾರಿಗಳು ಕೇವಲ ಅಕ್ಕಿಯನ್ನು ಮಾತ್ರ ನೂರು ಕ್ವಿಂಟಲ್ವರೆಗೆ ಸಂಗ್ರಹಿಸಿ ಉಳಿದ ಯಾವುದೇ ದವಸ ಧಾನ್ಯ ಸಂಗ್ರಹಿಸದೇ ಸರ್ಕಾರಿ ನಿಯಮದ ಪಾಲಿಸಿದಂತೆಯೂ ಮತ್ತು ಸಗಟು ವ್ಯಾಪಾರ ಮುಂದುವರಿಯುವಂತೆಯೂ ನೋಡಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ಆದೇಶ ಧಿಕ್ಕರಿಸಿ ನಡೆಯುತ್ತಿರುವ ಸಗಟು ಅಕ್ಕಿ ವ್ಯಾಪಾರಕ್ಕೆ ಸ್ಥಳೀಯ ಎಪಿಎಂಸಿ ಅಧಿಕಾರಿಗಳ ಸಹಕಾರವೂ ಇದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದ್ದು, ಜಿಲ್ಲಾಧಿಕಾರಿ ಸಮೀರ ಶುಕ್ಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ಕಿಹೊಂಡಕ್ಕೆ ಒಂದೇ ಒಂದು ಲಾರಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿತ್ತು. ವರ್ಷ ಕಳೆಯುವುದರ ಒಳಗೆ ಹೈಕೋರ್ಟ್ ಆದೇಶವನ್ನು ಗಾಳಿಗೆ ವ್ಯಾಪಾರಿಗಳು ಗಾಳಿಗೆ ತೂರಿದ್ದು, ಇದಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಿದ್ದಾರೆ. ಅಕ್ಕಿ ಹೊಂಡ ಪ್ರವೇಶಿಸುವ ಲಾರಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಗಟು ವ್ಯಾಪಾರ ವಹಿವಾಟು ನಡೆಯದಂತೆ ಕ್ರಮ ತೆಗೆದುಕೊಂಡು ವ್ಯಾಪಾರಿ ಲೈಸೆನ್ಸ್ ರದ್ದುಗೊಳಿಸಬೇಕಿದ್ದ ಎಪಿಎಂಸಿ ಏನೂ ನಡೆಯುತ್ತಲೇ ಇಲ್ಲ ಏನೋ ಎನ್ನುವಂತೆ ಸುಮ್ಮನಾಗಿದೆ.
ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ ಕನ್ನಡಪ್ರಭದೊಂದಿಗೆ ಮಾತನಾಡಿ, ಅಕ್ಕಿ ಹೊಂಡದಲ್ಲಿ ಎಪಿಎಂಸಿ ಪಟ್ಟಿಯಲ್ಲಿ ಬರುವ ಉತ್ಪನ್ನಗಳ ಸಗಟು ವ್ಯಾಪಾರ ನಿಂತಿದೆ. ಆದರೆ ಸದ್ಯಕ್ಕೆ ಅಲ್ಲಿ ಚಿಲ್ಲರೆ ಅಂಗಡಿಗಳ ವ್ಯಾಪಾರ ವಹಿವಾಟು ನಡೆಯುತ್ತಿದೆ. ಎಪಿಎಂಸಿ ಕಾಯ್ದೆ ಪ್ರಕಾರ 100 ಕ್ವಿಂಟಲ್ನಷ್ಟು ದವಸ ಧಾನ್ಯಗಳನ್ನು ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಬಹುದು. ಚಹಾಪುಡಿ, ಅವಲಕ್ಕಿ ಎಪಿಎಂಸಿ ಪಟ್ಟಿಗೆ ಬಾರದ ಸಾಮಗ್ರಿಗಳ ಸಗಟು ವ್ಯಾಪಾರ ನಡೆಯುತ್ತಿದೆ. ಆದರೆ, ಅಕ್ಕಿ ಮತ್ತು ಬೆಲ್ಲದ ಸಗಟು ವ್ಯಾಪಾರ ನಡೆಯುತ್ತಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಗಮನಕ್ಕೆ ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಎಪಿಎಂಸಿ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಅಕ್ಕಿಹೊಂಡದಲ್ಲಿ ವ್ಯಾಪಾರ ಮಾಡುತ್ತಿರುವವರಲ್ಲಿ ಬಹುತೇಕ ವ್ಯಾಪಾರಸ್ಥರ ಬಳಿ ಪರವಾನಗಿ ಇಲ್ಲ. ಇಂತಹ ವ್ಯಾಪಾರಿಗಳ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ತೆಗದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿಯ ಪರಿಣಾಮದಿಂದ ಅಲ್ಲಿ ವ್ಯಾಪಾರ ವಹಿವಾಟು ಮುಂದುವರಿದಿದೆ. ಅಕ್ಕಿಹೊಂಡದ ಟ್ರಾಫಿಕ್ ಸಮಸ್ಯೆಯನ್ನು ಸಂಚಾರಿ ಪೊಲೀಸರು ಪರಿಹರಿಸಬೇಕು. ವ್ಯಾಪಾರ ವಹಿವಾಟು ನಿಲ್ಲಿಸುವುದು ನಮ್ಮ ಕರ್ತವ್ಯ ಆಗಿತ್ತು. ಈ ನಿಟ್ಟಿನಲ್ಲಿ ಎಪಿಎಂಸಿ ಪ್ರಯತ್ನ ಮಾಡಿದೆ. ಲಾರಿಗಳು ಅಕ್ಕಿಹೊಂಡ ಪ್ರವೇಶಿಸದಂತೆ ಬಿಗಿ ಕ್ರಮ ತೆಗೆದುಕೊಂಡರೆ ಸಗಟು ವ್ಯಾಪಾರಕ್ಕೆ ತಡೆ ಬೀಳಬಹುದು ಎನ್ನುತ್ತಾರೆ ಸುರೇಶ ದಾಸನೂರ.
ಎಪಿಎಂಸಿ ಕಾರ್ಯದರ್ಶಿ ಪ್ರಸಾದ, ಅಕ್ಕಿಹೊಂಡದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧಿಸೂಚನೆಗೆ ಒಳಪಡುವ ಉತ್ಪನ್ನಗಳ ಸಗಟು ಮಾರಾಟ ಶೇ. 99ರಷ್ಟು ನಿಂತಿದೆ. ಸದ್ಯಕ್ಕೆ ಅಲ್ಲಿರುವ ಕೆಲವು ವ್ಯಾಪಾರಿಗಳು ಚಿಲ್ಲರೆ ವಹಿವಾಟು ಮಾಡುತ್ತಿದ್ದಾರೆ. ಕಾನೂನಿನಲ್ಲಿರುವ ಅವಕಾಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಿಕರ ಹೆಸರಿನಲ್ಲಿ ಚಿಲ್ಲರೆ ವಹಿವಾಟು ಆರಂಭಿಸಿದ್ದಾರೆ. ಕೃಷಿ ಉತ್ಪನ್ನಗಳ ಸಗಟು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಎಪಿಎಂಸಿ ಬಿಗಿ ಕ್ರಮ ತೆಗೆದುಕೊಂಡಿದೆ. ಅಲ್ಲದೇ ತಾತ್ಕಾಲಿಕವಾಗಿ ಅಕ್ಕಿಹೊಂಡದಲ್ಲಿ ಚಿಲ್ಲರೆ ಮಾರಾಟಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಲೈಸೆನ್ಸ್ ಕೂಡ ನೀಡುತ್ತಿಲ್ಲ. ಸಂಪೂರ್ಣವಾಗಿ ಅಕ್ಕಿಹೊಂಡದಲ್ಲಿನ ಅಕ್ಕಿ ಬೆಲ್ಲದ ಸಗಟು ವ್ಯಾಪಾರ ಸ್ಥಳಾಂತರಗೊಂಡ ನಂತರ ಚಿಲ್ಲರೆ ಮಾರಾಟಕ್ಕೆ ಲೈಸೆನ್ಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
-ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

