ಸುಳಿದಾಡುವ ಆತ್ಮಕ್ಕೆ ಪುಷ್ಟಿ ನೀಡುವ ಕೋತಿ ವರ್ತನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 17
ಒಬ್ಬ ವ್ಯಕ್ತಿ ನಿಧನ ಹೊಂದಿದ ಮೇಲೆ ಆತನ ಆತ್ಮ ಅದೇ ಪರಿಸರದಲ್ಲಿ ಸುಳಿದಾಡುತ್ತದೆ, ಮತ್ತೊಬ್ಬರ ದೇಹ ಸೇರುತ್ತದೆ, ಪುನರ್ಜನ್ಮ ಪಡೆಯುತ್ತದೆ ಎಂಬ ಊಹೆಗಳಿದ್ದರೂ ನಂಬುವುದು ಕಷ್ಟ.
ಇಂಥ ವಾದಗಳಿಗೆ ಪುಷ್ಟಿ ನೀಡುವಂತೆ ಧಾರವಾಡದಲ್ಲಿ ಈಚೆಗೆ ಮೃತಪಟ್ಟವರ ಆತ್ಮವೊಂದು ಕೋತಿ ದೇಹದಲ್ಲಿ ಸುಳಿದಾಡುತ್ತಿದೆ ಎಂಬ ವದಂತಿ ಹಬ್ಬಿದೆ. ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ಗೋಲ್ಡನ್ ಗಾರ್ಡನ್ ರೆಸ್ಟೋರೆಂಟ್ ಮಾಲೀಕ, ಬಿಜೆಪಿ ಮುಖಂಡ ವೀರೇಶ ಸಲಗಾರ (48) ಜೂ. 9ರಂದು ನಿಧನರಾಗಿದ್ದು, ಅವರ ಆತ್ಮವು ಮಂಗನ ಮೂಲಕ ರೆಸ್ಟೋರೆಂಟ್ ಬಳಿಯೇ ಸುಳಿದಾಡುತ್ತಿದೆ ಎಂದು ಸ್ವತಃ ಮನೆಯವರೇ ನಂಬಿದ್ದಾರೆ.
ವೀರೇಶ ಸಲಗಾರ ತೀರಾ ಇಷ್ಟಪಡುತ್ತಿದ್ದ ರೆಸ್ಟೋರೆಂಟ್‌ಗೆ ಕಪ್ಪು ಮಂಗ ಬಂದಿದೆ. ಅದನ್ನು ನೋಡುತ್ತಲೇ ಕುಟುಂಬದವರು ಹಾಗೂ ಕೆಲಸಗಾರರು ಒಂದು ಕ್ಷಣ ಭಯಗೊಂಡಿದ್ದರು. ಆದರೆ, ಎಲ್ಲರೂ ಅಚ್ಚರಿ ಪಡುವಂತೆ ಆ ಕೋತಿ ಕೌಂಟರ್‌ನ ಮುಂಭಾಗದಲ್ಲಿ ಬಂದು ಕುಳಿತಿತು. ದೇವರ ಫೋಟೋಗಳ ಬಳಿ ಸುತ್ತಾಡಿ ಸೀದಾ ಅಡುಗೆ ಮನೆಗೆ ಹೋಯಿತು. ಅಲ್ಲಿದ್ದ ತರಕಾರಿ ತಿಂದು ತನ್ನ ದಾರಿ ಹಿಡಿಯಿತು. ಮರುದಿನ ಬೆಳಗ್ಗೆ ಆರು ಗಂಟೆಗೇ ಹೋಟೆಲ್ ಬಳಿ ಪ್ರತ್ಯಕ್ಷವಾಗಿ, ಬಾಗಿಲು ಬಡಿದು ಸಿಬ್ಬಂದಿಯನ್ನೆಲ್ಲ ಎಬ್ಬಿಸಿತಂತೆ!
ಎಲ್ಲ ಸೇಮ್ ಟು ಸೇಮ್!: ಹೋಟೆಲ್ ಉಸ್ತುವಾರಿ ನೋಡಿಕೊಳ್ಳುವ ವೀರೇಶ್ ಅವರ ಅಳಿಯ ಜಗದೀಶ್ 3-4 ದಿನ ಕೋತಿಯನ್ನು ಗಮನಿಸಿ, ತಮ್ಮ ಮಾವನಂತೆಯೇ ಈ ಕೋತಿಯೂ ಎಲ್ಲ ಚಟುವಟಿಕೆ ಮಾಡುತ್ತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರ ಮಾವನೂ ದಿನಾ ಬೆಳಗ್ಗೆ ಹೋಟೆಲ್ ಸಿಬ್ಬಂದಿಯನ್ನು ಎಬ್ಬಿಸಿ, ಕೆಲಸಕ್ಕೆ ಹಚ್ಚಿ ಆಮೇಲೆ ಮನೆಗೆ ಹೋಗುತ್ತಿದ್ದರಂತೆ.
ವೀರೇಶ್ ನಿತ್ಯಂ ಸಂಜೆ ಹೋಟೆಲ್ ಹಾಗೂ ಲಾಡ್ಜ್‌ಗಳ ಸುತ್ತ ತಿರುಗಾಡುತ್ತಿದ್ದರಂತೆ. ಕೋಪ ಬಂದಾಗ ಹಿಂಭಾಗದಲ್ಲಿರುವ ಮಾವಿನ ಮರದ ಕೆಳಗೆ ಹೋಗಿ ನಿಲ್ಲುತ್ತಿದ್ದರಂತೆ. ಕೋತಿಯೂ ಇದೆಲ್ಲವನ್ನೂ ಮಾಡುತ್ತಿದೆ. ಶನಿವಾರ ವೀರೇಶ್ ಹೋಟೆಲ್‌ಗೆ ಬರುತ್ತಿರಲಿಲ್ಲ. ಈ ಕೋತಿಯೂ ಬರುತ್ತಿಲ್ಲ ಎಂದು ವೀರೇಶ್ ಅವರ ಸಹೋದರ ಪರಮೇಶ್ವರ ಹೇಳುತ್ತಿದ್ದಾರೆ.
ಪೂಜೆ ತಡವಾದರೆ ಈ ಕೋತಿ ಮರದ ಮೇಲೆ ಹೋಗಿ ಕುಳಿತುಬಿಡುತ್ತೆ. ಆಮೇಲೆ, ಮನೆ ಮಂದಿಯೇ ಹೋಗಿ ಕರೆದು ತರಬೇಕು. ಹೀಗಾಗಿ, ಈ ಕೋತಿಯನ್ನು ಸಿಬ್ಬಂದಿ ಸಾಹುಕಾರ್ರೇ ಎಂದು ಕರೆದರೆ, ಸಹೋದರರು ಅಣ್ಣಾ ಎಂದೇ ಸಂಬೋಧಿಸುತ್ತಾರೆ.
ಗೆಳೆಯರು ವೀರೇಶ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಆಕ್ರಮಣಕಾರಿಯಾಗಿರುವ ಕಪ್ಪು ಮಂಗ ಇಲ್ಲಿ ಜನರೊಂದಿಗೆ ಬೆರೆಯುತ್ತಿದೆ. ಮನುಷ್ಯರಂತೆಯೇ ಆಡುತ್ತಿದೆ. ಇದೇ ಜನರಿಗೆ ವಿಚಿತ್ರವಾಗಿದ್ದು, ನೋಡಲು ಹತ್ತಾರು ಸಂಖ್ಯೆಯಲ್ಲಿ ಹೋಟೆಲ್ ಬಳಿಗೆ ಬರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

