ಕಿಮ್ಸ್: 8 ವರ್ಷದಲ್ಲಿ 4337 ಶಿಶು ಸಾವು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 24
ಕಿಮ್ಸ್ಗೆ ರೋಗಿಗಳು ಬರುವುದು ಜೀವ ಉಳಿಸಿಕೊಳ್ಳಲೋ ಅಥವಾ ಜೀವ ಕಳೆದುಕೊಳ್ಳಲೋ ಎನ್ನುವ ಪ್ರಶ್ನೆ ಎದುರಾಗಿದೆ!
ಹೌದು. ಇಂಥದೊಂದು ಪ್ರಶ್ನೆ ಉದ್ಭವಿಸಲು ಸಕಾರಣವಿದೆ. ಕಿಮ್ಸ್ನಲ್ಲಿ ಕಳೆದ ಎಂಟು ವರ್ಷದ ಅವಧಿಯಲ್ಲಿ ಬರೋಬ್ಬರಿ 4,337 ಶಿಶುಗಳು ಮರಣ ಹೊಂದಿದ್ದು, 257 ಬಾಣಂತಿಯರು ಮೃತಪಟ್ಟಿದ್ದಾರೆ. ಇಂಥ ಬೆಚ್ಚಿ ಬೀಳಿಸುವ ವರದಿ ಇದೀಗ ಬಯಲಾಗಿದೆ. ಕಿಮ್ಸ್ ಬಡವರ ಪಾಲಿನ ಸಂಜೀವಿನಿ ಎಂದೆನಿಸಿಕೊಂಡಿದೆ. ವಾಸ್ತವದಲ್ಲಿ ಕಿಲ್ಲರ್ ಕಿಮ್ಸ್ ಆಗಿ ಪರಿವರ್ತನೆಯಾಗುತ್ತಿದೆ. ತೀವ್ರ ಅನಾರೋಗ್ಯ ಪೀಡಿತರು, ಇನ್ನೇನು ಸಾವಿನಂಚಿನಲ್ಲಿರುವ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ ಹೋಗ ಲಿ ಬಿಡಿ ಎನ್ನಬಹುದಾಗಿತ್ತು. ಹೊಸ ಜೀವವೊಂದಕ್ಕೆ ಜನ್ಮ ನೀಡಲು ಹೊರಟಿದ್ದೇನೆಂದು ತಾಯಿ ತನಗಾಗುತ್ತಿರುವ ಹೆರಿಗೆ ನೋವನ್ನೂ ಖುಷಿ ಖುಷಿಯಿಂದ ಅನುಭವಿಸುತ್ತಾ ಕಿಮ್ಸ್ಗೆ ದಾಖಲಾಗುತ್ತಾಳೆ. ಆದರೆ ಹೆರಿಗೆಯ ಬಳಿಕವೂ ಅವಳು ನೋವು ಅನುಭವಿಸುವ ಸ್ಥಿತಿ ಇಲ್ಲಿದೆ. ಹೆರಿಗೆ ಸಮಯದಲ್ಲಿ ಸಾವಿರಾರು ಶಿಶು ಸಾಯುತ್ತಿರುವುದು ತಾಯಿಯ ನೋವಿಗೆ ಕಾರಣ.
ಪ್ರಕರಣ ದಾಖಲು...
ಕಿಮ್ಸ್ಗೆ ದಾಖಲಾಗುವವರು ಬಡಬಗ್ಗರು. ಬಾಣಂತಿಯರು, ಶಿಶುಗಳು ಮೃತಪಟ್ಟರೂ ಪ್ರತಿಭಟಿಸುವ ಧೈರ್ಯ ಇರಲ್ಲ. ಕಿಮ್ಸ್ ಆಡಳಿತ ವ್ಯವಸ್ಥೆ ವಿರುದ್ಧ ದನಿ ಎತ್ತಿರುವ ಘಟನೆ ನಡೆದಿವೆ. ಕಿಮ್ಸ್ ವೈದ್ಯರ ನಿರ್ಲಕ್ಷ್ಯದ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ 14 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬಾಣಂತಿಯರ, ಮಗುವಿನ ಸಾವಿಗೆ ಸಂಬಂಧಿಸಿದಂತೆ 3 ಪ್ರಕರಣಗಳು ವೈದ್ಯರ ವಿರುದ್ಧ ದಾಖಲಾಗಿವೆ. ಈ ಪ್ರಕರಣದಲ್ಲಿ ಹಾಲಿ ನಿರ್ದೇಶಕ ಡಾ. ಯು.ಎಸ್. ಹಂಗರಗಾ ವಿರುದ್ಧ ಹಾಗೂ ಮಾಜಿ ನಿರ್ದೇಶಕ, ಹಾಲಿ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹಿರೇಮಠ ವಿರುದ್ಧವೇ ಪ್ರಕರಣ ದಾಖಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಶಿಶುಗಳು, ಬಾಣಂತಿಯರು ಸಾಯುತ್ತಿದ್ದರೂ ಸಕಾರಣ ಹುಡುಕಿ, ತಡೆಗಟ್ಟಲು ಕಿಮ್ಸ್ ಆಡಳಿತ ವರ್ಗ ಮುಂದಾಗದೇ ಇರುವುದು ದುರಂತ.
4,337 ಶಿಶುಗಳು ಸಾವು...
ಕಿಮ್ಸ್ ವೈದ್ಯಕೀಯ ದಾಖಲೆಗಳ ವಿಭಾಗದ ದಾಖಲೆಗಳೇ ಹೇಳುವ ಪ್ರಕಾರ, 2007ರಿಂದ 2014 ಜೂನ್ ವರೆಗೆ ಬರೋಬ್ಬರಿ 4,337 ಶಿಶುಗಳು ಹೆರಿಗೆ ಸಮಯದಲ್ಲಿ ಮರಣ ಹೊಂದಿವೆ. 2007ರಲ್ಲಿ 462 ಶಿಶುಗಳು ಮರಣ ಹೊಂದಿವೆ, 2008ರಲ್ಲಿ 579, 2009ರಲ್ಲಿ ಅತಿ ಹೆಚ್ಚು 728 ಶಿಶುಗಳು ಮೃತಪಟ್ಟರೆ, 2010ರಲ್ಲಿ 576, 2011ರಲ್ಲಿ 524, 2012ರಲ್ಲಿ 510, 2013ರಲ್ಲಿ 663 ಶಿಶುಗಳು ಮೃತಪಟ್ಟಿವೆ. 2014ರ ಜೂನ್ವರೆಗೆ 295 ಶಿಶುಗಳು ಮೃತಪಟ್ಟಿವೆ. ಇನ್ನು ಹೆರಿಗೆ ಸಮಯದಲ್ಲಿ 2010ರಿಂದ 2014 ಜುಲೈ ವರೆಗೆ 257 ಬಾಣಂತಿಯರು ಮೃತಪಟ್ಟಿದ್ದಾರೆ. 2010ರಲ್ಲಿ 48 ಬಾಣಂತಿಯರು ಮೃತಪಟ್ಟರೆ, 2011ರಲ್ಲಿ 49, 2012ರಲ್ಲಿ ಅತಿ ಹೆಚ್ಚು ಅಂದರೆ 72 ಬಾಣಂತಿಯರು ಮೃತಪಟ್ಟಿದ್ದಾರೆ. 2013ರಲ್ಲಿ 58 ಹಾಗೂ 2014ರ ಜುಲೈ ವರೆಗೆ 40 ಬಾಣಂತಿಯರು ಮೃತ ಪಟ್ಟಿರುವುದು ಬೆಚ್ಚಿಬೀಳಿಸುವ ಸಂಗತಿ.
ಇದು ಕಾರಣ
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಈ ಪ್ರಮಾಣದಲ್ಲಿ ಶಿಶು, ಬಾಣಂತಿಯರು ಸಾವನ್ನಪ್ಪುತ್ತಿರುವುದಕ್ಕೆ ಹತ್ತು ಹಲವು ಕಾರಣಗಳಿವೆ. ಮುಖ್ಯವಾಗಿ ವೈದ್ಯರ ನಿರ್ಲಕ್ಷ್ಯ ಕಾರಣ. ಸಕಾಲಕ್ಕೆ ಬಾಣಂತಿಯರಿಗೆ ಆರೈಕೆ ಮಾಡುವುದಿಲ್ಲ, ಇನ್ನೇನು ಹೆರಿಗೆಯಾಗುತ್ತಿದೆ ಎನ್ನುವಾಗ ಬಾಣಂತಿಯರ ಬಿಪಿ, ರಕ್ತ ತಪಾಸಣೆ ಇತ್ಯಾದಿ ವೈದ್ಯಕೀಯ ಪರೀಕ್ಷೆಗೆ ಮುಂದಾಗುತ್ತಾರೆ. ಆದರೆ ಕಾಲ ಮಿಂಚಿ ಹೋಗಿದ್ದರಿಂದ ಬಾಣಂತಿಯರು, ಶಿಶು ಸಾವಿನ ಮನೆ ಸೇರುತ್ತಿದ್ದಾರೆ.
ವೈದ್ಯರು ಕೊಡುವ ಕಾರಣ
ಶಿಶು, ಬಾಣಂತಿಯರ ಸಾವಿಗೆ ವೈದ್ಯರು 'ವೈಜ್ಞಾನಿಕ ಕಾರಣ' ಎಂದು ಉತ್ತರ ನೀಡುತ್ತಾರೆ. ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ. ಯು.ಎಸ್. ಹಂಗರಗಾ ಅವರನ್ನು ಕೇಳಿದರೂ ಅವರಿಂದಲೂ ಇದೇ ಉತ್ತರ. ಎಲ್ಲ ಸಾವಿನ ಅಂಚಿನಲ್ಲಿರುವವರು ಮಾತ್ರ ಕಿಮ್ಸ್ಗೆ ಬರುತ್ತಾರೆಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಂಗರಗಾ ಅವರ ಈ ಹೇಳಿಕೆ, ಬಾಣಂತಿಯರು ಸಾಯಲೆಂದು ಕಿಮ್ಸ್ ಆಸ್ಪತ್ರೆಗೆ ಬರುವಂತಿದೆ ಎನ್ನುವಂತಾಗಿದೆ.
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

