ಧಾರವಾಡ

ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ

Published On :

ಧಾರವಾಡ: ಇತ್ತೀಚೆಗೆ ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಎಂದು ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಶಾಲೆ ಆಡಳಿತ ಮಂಡಳಿ, ಮುಖ್ಯಸ್ಥರಿಗೆ ಹೇಳಿದರು.
ಶಾಲಾ ಬಾಲಕಿಯರ ಸುರಕ್ಷತೆ ಉಪಕ್ರಮಗಳ ಕುರಿತು ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯ ಯಾವ ಶಾಲೆಗಳಲ್ಲಾದರೂ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಆಯಾ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರೇ ಹೊಣೆಗಾರರು. ಶಾಲೆಯ ಮಾನ್ಯತೆ ರದ್ದು ಸಹ ಮಾಡಬಹುದು. ಈ ಹಿನ್ನೆಲೆಯಲ್ಲಿ ಶಾಲೆಗಳ ಆಡಳಿತ ಮಂಡಳಿಗಳು ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ರತಿ ತಿಂಗಳು ಆಯಾ ಶಾಲೆಗಳ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಶಾಲೆಗೆ ಬಂದು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾರೆ ಎಂದರು.
ಶಾಲೆಗೆ ಶಿಕ್ಷಕರು, ಸಿಬ್ಬಂದಿ ನೇಮಕಾತಿ ವಿಷಯದಲ್ಲಿ ಆಡಳಿತ ಮಂಡಳಿಯು ಸಿಬ್ಬಂದಿಯ ಚಾರಿತ್ರ್ಯವನ್ನೂ ಗಮನಿಸಬೇಕು. ಪ್ರತಿ ಶಾಲೆಯಲ್ಲೂ ದೂರು ಪೆಟ್ಟಿಗೆ ಇಡಬೇಕು. ಶಾಲೆಗಳ ವಸತಿ ನಿಲಯಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಮುಖ್ಯವಾಗಿ ಶಿಕ್ಷಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವಂತಿಲ್ಲ. ಒಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳ ಮೇಲೆ ಯಾವುದೇ ರೀತಿ ದೌರ್ಜನ್ಯ ನಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಮಾತನಾಡಿ, ಶಾಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಆಗಸ್ಟ್ 15ರೊಳಗೆ ಶಾಲಾ ಮಟ್ಟದಲ್ಲಿ ಬಾಲಕಿಯರ ಸುರಕ್ಷತಾ ಸಮಿತಿ, ಮಕ್ಕಳ ಸುರಕ್ಷತೆ ಸಮಿತಿಗಳನ್ನು ರಚಿಸಬೇಕು. ಈ ಕಾರ್ಯಾಗಾರಕ್ಕೆ ಹಾಜರಾಗದ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಡಿಡಿಪಿಐಗೆ ಸೂಚಿಸಿದರು.
ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್ ಮಾತನಾಡಿ, ಮಕ್ಕಳ ಶಾಲಾವಧಿಯಲ್ಲಿ ಹಾಗೂ ಮಕ್ಕಳು ಮನೆ ತಲುಪುವ ವರೆಗೆ ಮಕ್ಕಳ ಸುರಕ್ಷತೆ ಶಾಲೆಯದ್ದು. ಶಾಲಾ ಮಕ್ಕಳಿಗೆ ಗುರುತಿನ ಚೀಟಿ, ದೂರವಾಣಿ ವಿಳಾಸ ಮಹಿತಿಯನ್ನು ಮಕ್ಕಳ ಹತ್ತಿರ ಇರಬೇಕು. ಶಾಲೆ ವಿಳಾಸ ಹಾಗೂ ವಿವರವಾದ ಶಾಲಾ ಶಿಕ್ಷಕರ, ಸಿಬ್ಬಂದಿ ಆಡಳಿತ ಮಂಡಳಿ ಮಾಹಿತಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ಲಭ್ಯವಿರುವಂತೆ ಪೂರೈಸಬೇಕು. ಮಕ್ಕಳ ಸಹಾಯವಾಣಿ-1098 ಮಕ್ಕಳು ನೋಡುವಂತೆ ಶಾಲೆ ಪ್ರದರ್ಶನ ಫಲಕದಲ್ಲಿ ಅಳವಡಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ, ದಿನನಿತ್ಯ ಮಕ್ಕಳ ಯೋಗಕ್ಷೇವುವನ್ನು ಸೂಕ್ಷ್ಮವಾಗಿ ಶಿಕ್ಷಕರು, ಪಾಲಕರು ತಿಳಿದುಕೊಳ್ಳಬೇಕು. ಸೂಕ್ಷ್ಮ ವಿಚಾರಗಳು ತಮ್ಮ ಹಂತದಲ್ಲಿಯೇ ನಿವಾರಣೆ ಮಾಡುವಂತಿದ್ದರೆ ನಿವಾರಿಸಬೇಕು. ಅಸಾಧ್ಯ ಎನಿಸಿದಕೆ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದರು.
ಮಕ್ಕಳ ಸಂರಕ್ಷಣೆ, ಮಹಿಳೆಯರು ಮತ್ತು ಮಕ್ಕಳ ಮಾರಾಟ ವಿರೋಧಿ ಹಕ್ಕು ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಬಿ. ಉಷಾ, ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಉಪನ್ಯಾಸ ನೀಡಿದರು. ಮಕ್ಕಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಸರಿಯಾಗಿ ಸಮರ್ಥವಾಗಿ ಆತ್ಮ ಸಲಹಾ ಸಮಾಲೋಚನೆ ಸಮಿತಿಯನ್ನು ಶಾಲಾ ಮಟ್ಟದಲ್ಲಿ ರಚಿಸಬೇಕೆಂದು ಡಾ. ಸಂಜೀವ ಕುಲಕರ್ಣಿ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.