ಧಾರವಾಡ

ನಾಲ್ಕೂ ಪರಿಷತ್ ಸ್ಥಾನಗಳು ಬಿಜೆಪಿ ಪಾಲು: ಜೋಶಿ

Published On :

ಹುಬ್ಬಳ್ಳಿ: ರಾಜ್ಯದ ನಾಲ್ಕೂ ವಿಧಾನ ಪರಿಷತ್ ಸ್ಥಾನಗಳು ಬಿಜೆಪಿಯ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಭಾನುವಾರ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಭರ್ಜರಿ ಫಲಿತಾಂಶದ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆ ಎದುರಾಗಿರುವುದರಿಂದ ಕಾರ್ಯಕರ್ತರೂ ಅದೇ ಹುಮ್ಮಸ್ಸಿನಲ್ಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗಟ್ಟಿದೆ. ರಾಜ್ಯದ ಜನತೆ ಸುರಕ್ಷಿತವಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಪರಸ್ಪರ ಕತ್ತಿ ಮಸೆಯಲಾಗುತ್ತಿದೆ. ಸ್ವತಃ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನದ ಮಾತುಗಳನ್ನಾಡುತ್ತಿರುವುದು ಆಡಳಿತ ಕುಸಿದಿದೆ ಎಂಬುದರ ನಿದರ್ಶನ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ದಲಿತ ವಿರೋಧಿ ಸರ್ಕಾರ ಎಂದು ಕರೆದರೆ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ಮುಸ್ಲಿಂ ವಿರೋಧಿ ಸರ್ಕಾರ ಎಂದು ಜರಿದಿದ್ದಾರೆ. ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಿದ್ದು, ಇದು ವಿಕೋಪಕ್ಕೆ ಹೋಗಿ ಸರ್ಕಾರ ಅಧಿಕಾರದಿಂದ ಇಳಿಯುವ ದಿನಗಳು ದೂರವಿಲ್ಲ ಎಂದರು.
ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಕಾಂಗ್ರೆಸ್ ಮುಖಂಡರಿಗೆ ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರನ ಮನೆ ಬಾಗಿಲಿಗೆ ಹೋಗಲು ಮುಖವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಉತ್ಸಾಹ ತೋರುತ್ತಿಲ್ಲ. ಕೈಲಾಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದರು. ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಭೇಟಿಯಾಗಿ ಮತಯಾಚಿಸಬೇಕು. ಬಿಜೆಪಿಯ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ವಿದ್ಯಾವಂತ ಮತದಾರರು ಎಂದೆಂದಿಗೂ ಬಿಜೆಪಿಯ ಜತೆಗಿದ್ದಾರೆ. ಹಾಗೆಂದು ಮೈಮರೆಯುವುದು ಬೇಡ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ, ಎಲ್ಲೆಡೆ ಮೋದಿ ಅಲೆ ಇದೆ. ಹಾಗೆಂದ ಮಾತ್ರಕ್ಕೆ ಕಾಯಕರ್ತರು ಅತಿಯಾದ ವಿಶ್ವಾಸದಿಂದ ಬೀಗದೆ ಕೆಲಸ ಮಾಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮಾತನಾಡಿ, ಬಿಜೆಪಿ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಕಾರಣವಾಗಲಿದೆ. ನಾನು ಗೆಲವ ಖಚಿತ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದರು. ಮಾ. ನಾಗರಾಜ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಅರವಿಂದ ಬೆಲ್ಲದ, ಎಸ್.ಐ. ಚಿಕ್ಕನಗೌಡ್ರ, ವೀರಭದ್ರಪ್ಪ ಹಾಲಹರವಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.