20 ಸಾವಿರ ಕಾರ್ಮಿಕರಿಗೆ ಕೌಶಲ್ಯ ತರಬೇತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 11
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಒಳಪಡುವ 203 ಕಾಲೇಜುಗಳಲ್ಲಿ 20 ಸಾವಿರ ಕಾರ್ಮಿಕರಿದ್ದಾರೆ. ಇವರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಲು ವಿಟಿಯು ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಉನ್ನತ ಶಿಕ್ಷಣ ಇಲಾಖೆ, ವಿಟಿಯು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟಿಯು ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿ, ಪ್ಲಂಬಿಂಗ್, ಎಲೆಕ್ಟ್ರಿಶಿಯನ್, ಗೌಂಡಿ ಮತ್ತಿತರ ಕಾರ್ಮಿಕರಿಗೆ ಮೂರು ತಿಂಗಳ ಕಾಲ ನಿತ್ಯ ಎರಡು ತಾಸು ಆಯಾ ಕಾಲೇಜುಗಳಲ್ಲೇ ತರಬೇತಿ ನೀಡಲಾಗುವುದು. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ರು. 1000 ಶಿಷ್ಯವೇತನ ನೀಡಲಾಗುವುದು. ತರಬೇತಿ ಪಡೆದ ಕಾರ್ಮಿಕರಿಂದ ಉತ್ಪಾದನೆ ಹೆಚ್ಚಲಿದೆ, ಗುಣಮಟ್ಟ ವೃದ್ಧಿಯಾಗಲಿದೆ. ಆತ್ಮರಕ್ಷಣೆಗೂ ಅನುಕೂಲ. ತರಬೇತಿ ಯೋಜನೆಗೆ ಒಟ್ಟಾರೆ ರು. 40 ಕೋಟಿ ವೆಚ್ಚವಾಗಲಿದೆ. ಸಭೆಯಲ್ಲಿ ಪೂರ್ವಾಪರ ನಿರ್ಧರಿಸಿ ಯೋಜನೆ ಜಾರಿಗೆ ತರಲಾಗುವುದು ಎಂದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 800 ಕಾರ್ಮಿಕರು ಕೆಲಸದ ವೇಳೆಯಲ್ಲಿ ದುರಂತಕ್ಕೆ ಈಡಾಗಿದ್ದಾರೆ. ತರಬೇತಿ ಯೋಜನೆಯಿಂದ ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳ ಅರಿವಿದ್ದರೆ ಸಾವಿನ ಪ್ರಮಾಣ ತಗ್ಗಲಿದೆ ಎಂದು ಸಚಿವರು, ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ರು. 2 ಲಕ್ಷ, ಗಾಯಗೊಂಡವರಿಗೂ ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದರು.
ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ಸುಸಜ್ಜಿತ ವ್ಯವಸ್ಥೆಯ ಲಾಭ ಕಾರ್ಮಿಕರಿಗೆ ಸಿಗದಾಗಿದೆ ಎಂಬ ದೂರು ಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಆಸ್ಪತ್ರೆಯಲ್ಲಿರುವ ಲೋಪ ಸರಿಪಡಿಸಲು ಆದೇಶಿಸಲಾಗುವುದು ಎಂದು ಹೇಳಿದರು.
ವಿಟಿಯು ಕುಲಸಚಿವ ಕೆ.ಇ. ಪ್ರಕಾಶ, ಡೀನ್ ಡಿ.ಎಚ್. ರಾವ್, ಜಿ.ಎಸ್. ಅಮಲೀನ್ ಗೋಷ್ಠಿಯಲ್ಲಿದ್ದರು.
ಕಟ್ಟಡ ನಿರ್ಮಾಣ ಅಕಾಡೆಮಿ
ರಾಜ್ಯದಲ್ಲಿ 5.70 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಅದನ್ನು 12 ಲಕ್ಷಕ್ಕೇರಿಸುವ ಗುರಿ ಇದೆ. ಕಾರ್ಮಿಕರ ಹಿತದೃಷ್ಟಿಯಿಂದ ಕಟ್ಟಡ ನಿರ್ಮಾಣ ಅಕಾಡೆಮಿ ರಚಿಸಲಾಗುತ್ತಿದೆ. ಅಕಾಡೆಮಿಗೆ ರು. 250 ಕೋಟಿ ಅನುದಾನ ನೀಡಲು ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ದೊಡ್ಡಬಳ್ಳಾಪುರದಲ್ಲಿ 20 ಎಕರೆ ಜಾಗ ಖರೀದಿಸಲಾಗಿದೆ. ಎರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಅಕಾಡೆಮಿಯ ಮುಖೇನ ಕಾರ್ಮಿಕರಿಗೆ ವಸತಿ ಸಮುಚ್ಚಯ, ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ, ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕರ ಕಲ್ಯಾಣ ಭವನ ನಿರ್ಮಾಣ ಮಾಡಲಾಗುವುದು ಎಂದು ಪರಮೇಶ್ವರ ನಾಯಕ ತಿಳಿಸಿದರು.
ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ 800 ಕಾರ್ಮಿಕರು ಕೆಲಸದ ವೇಳೆಯಲ್ಲಿ ದುರಂತಕ್ಕೆ ಈಡಾಗಿದ್ದಾರೆ. ತರಬೇತಿ ಯೋಜನೆಯಿಂದ ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳ ಅರಿವಿದ್ದರೆ ಸಾವಿನ ಪ್ರಮಾಣ ತಗ್ಗಲಿದೆ.
- ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

