ಧಾರವಾಡ

ಅಧಿಕಾರಿ-ಗುತ್ತಿಗೆದಾರರ ವಿರುದ್ಧ ಕ್ರಮ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 11
ಅವಳಿ ನಗರವನ್ನು ಸ್ವಚ್ಛ ಮಹಾನಗರವನ್ನಾಗಿಸಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಗುಂಡೂರಾವ್, ಈಗಿರುವ ವ್ಯವಸ್ಥೆಯಲ್ಲಿಯೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೆಲಸ ಮಾಡಬೇಕು. ಹಳೇ ಟೆಂಡರ್ಗಳನ್ನು ಕೈಬಿಟ್ಟು ಹೊಸತಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಅವಳಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಯಾವುದೇ ರೀತಿಯ ನಿರ್ಲಕ್ಷತನವಾಗಲಿ ಅಥವಾ ಒಪ್ಪಂದಗಳಿಗಾಗಿ ಆಸ್ಪದವಿಲ್ಲ. ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರದ ಮಟ್ಟದಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು.
ತೆರಿಗೆ ಭರಿಸದ ಜಾಹೀರಾತು ಫಲಕಗಳು (ಹೋಲ್ಡಿಂಗ್ಸ್) ಸಾಕಷ್ಟಿದ್ದು, ಅಧಿಕೃತವಾಗಿ ಪಾಲಿಕೆಯಿಂದ ಲೈಸೆನ್ಸ್ ಪಡೆದು ಜಾಹೀರಾತು ಫಲಕಗಳನ್ನು ಅಳವಡಿಸಿರುವ ಸಂಸ್ಥೆಗಳ ಮಾಲೀಕರು 10 ದಿನಗಳೊಳಗೆ ನಿಗದಿತಶುಲ್ಕ ಭರಿಸಿ ಪರವಾನಗಿ ನವೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ ಫಲಕಗಳನ್ನು ತೆರವುಗೊಳಿಸಲು ಹಾಗೂ ಅನಧಿಕೃತವಾಗಿ ಅಳವಡಿಸಿರುವ ಎಲ್ಲ ಜಾಹೀರಾತು ಫಲಕಗಳನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸಬೇಕು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅನಧಿಕೃತ ಫಲಕಗಳನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
ತೆರಿಗೆ ಬರುತ್ತಿರುವ ಹಾಗೂ ಬಾರದಿರುವ ಮಹಾನಗರ ಪಾಲಿಕೆ ಆಸ್ತಿಯ ಸರ್ವೇ ಕಾರ್ಯವನ್ನು ಖಾಸಗಿ ಏಜೆನ್ಸಿಯಿಂದ ಮಾಡಿಸಲು ಚಿಂತಿಸಲಾಗುತ್ತಿದೆ. ಅವಳಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಪುನರ್ಬಳಕೆ ಕುರಿತಂತೆ ಮೂರು ಖಾಸಗಿ ಕಂಪನಿಗಳು ತಮ್ಮ ಕಾರ್ಯವೈಖರಿ ಪ್ರದರ್ಶಿಸಿವೆ. ಸೊಲ್ಲಾಪುರ, ನವಿಮುಂಬೈ, ಪೂನಾ ಮತ್ತಿತರೆಡೆ ಈಗಾಗಲೇ ತ್ಯಾಜ್ಯ ವಿಲೇವಾರಿ ಹಾಗೂ ಪುನರ್ಬಳಕೆಯ ತಂತ್ರಜ್ಞಾನ ಪರಿಶೀಲಿಸಲಾಗುವುದು.
ರಾಜ್ಯ ಸರ್ಕಾರದ ಸೋಲಾರ ಯೋಜನೆಡಯಿ ಹುಬ್ಬಳ್ಳಿ-ಧಾರವಾಡವನ್ನು ಸೋಲಾರ ನಗರವನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಸರ್ಕಾರಿ ಜಾಗವನ್ನು ಪರಿಶೀಲಿಸಲಾಗುತ್ತಿದ್ದು, ಸುಮಾರು ರು. 4.50 ಕೋಟಿ ವೆಚ್ಚದಲ್ಲಿ ವಿವಿಧ ಉಪಕರಣ ಅಳವಡಿಸಲಾಗುವುದು. ಬೀದಿ ದೀಪ, ಟ್ರಾಫಿಕ್ ಸಿಗ್ನಲ್ ದೀಪ ಮತ್ತಿತರ ಸೌಲಭ್ಯಗಳನ್ನು ಇದರಿಂದ ಪಡೆಯಬಹುದು.
ಉದ್ದೇಶಿತ ಎಚ್ಡಿಬಿಆರ್ಟಿಎಸ್ ಬಸ್ ನಿಲ್ದಾಣದ ಬಳಿ ಪಾರ್ಕಿಂಕ್ ವ್ಯವಸ್ಥೆ ಇರದ ಕಾರಣ, ಯೋಜನೆ ಜಾರಿಯಲ್ಲಿ ಸಣ್ಣಪುಟ್ಟ ಬದಲಾವಣೆ ತರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರಂತರ ನೀರು ಸರಬರಾಜು ವಿಸ್ತರಣೆ ಯೋಜನೆ ಕಾಮಗಾರಿ ಪ್ರಕ್ರಿಯೆ ನಡೆಯುತ್ತಿದೆ. ರು. 24 ಕೋಟಿ ಎಸ್ಎಫ್ಸಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. 2012-13ರ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ರು. 16 ಕೋಟಿ ಬಿಡುಗಡೆ ಆಗಬೇಕಿದೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ನಾಗರಾಜ ಛಬ್ಬಿ, ಶ್ರೀನಿವಾಸ ಮಾನೆ, ಮೇಯರ್ ಶಿವು ಹಿರೇಮಠ, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್, ಪಾಲಿಕೆ ಆಯುಕ್ತ ರಮಣದೀಪ್ ಚೌಧರಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.