ಧಾರವಾಡ

ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಧಾರವಾಡ: ಇಲ್ಲಿಯ ಜನ್ನತನಗರದಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಜನ್ನತ ನಗರ ಕೊಳಗೇರಿ ನಿವಾಸಿಗಳ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನಾಗರಿಕರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಾರ್ಡ್ ನಂ. 20 ರಲ್ಲಿನ ಜನ್ನತ ನಗರದಲ್ಲಿ ಜನತೆಗೆ ಸಮರ್ಪಕ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಬೀದಿ ದೀಪಗಳು ಸಹ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ರಾತ್ರಿ ಸಮಯದಲ್ಲಿ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರ ಗಬ್ಬೆದ್ದು ಹೋಗಿದ್ದು, ಸರಿಯಾಗಿ ಪಾಲಿಕೆ ಕಸವಿಲೇವಾರಿ ಮಾಡದಿರುವುದರಿಂದ ಎಲ್ಲೆಂದರಲ್ಲಿ ಕಸ ಹರಡಿದೆ ಹಾಗೂ ಗಟಾರುಗಳು ಸಂಪೂರ್ಣವಾಗಿ ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ  ಸಂಘದ ಅಧ್ಯಕ್ಷ ಜೀವನ ಹುತ್ಕರಿ, ಪ್ರೇಮಾಕುಮಾರಿ. ಕೆ, ಕುಮಾರ ಪಾಮಡಿ, ಜಮಾಲುದ್ದಿನ್ ಠಕರಗೋಳ, ಜೀಜಾಬಾಯಿ ವಾಘ, ರೆಹಮನಸಾಬ ಹವಾಲ್ದಾರ, ಮಂಜುನಾಥ ಮಾದರ, ಸಂತೋಷ ಮಾಲಿನ, ಜೈಪಾಲ ನೇದರಪಲ್ಲಿ ಇದ್ದರು.
ಹೊಸ ಶಿಕ್ಷಣ ಪದ್ಧತಿ ಅಗತ್ಯ: ಶರ್ಮಾ
ಹುಬ್ಬಳ್ಳಿ:  ಇಂದಿನ ಶಿಕ್ಷಣ ವ್ಯವಸ್ಥೆ ವಿಷಮ ಸ್ಥಿತಿಯಲ್ಲಿದ್ದು. ಅದನ್ನ್ನು ದೂರ ಮಾಡಿ ಹೊಸ ಪದ್ಧತಿ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಜನತಾ ವಿಶ್ವವಿದ್ಯಾಲಯ ಸ್ಥಾಪನೆಯ ಚಿಂತನೆ ನಡೆದಿದೆ ಎಂದು ಡಾ. ಕೆ.ಎಸ್.ಶರ್ಮಾ ಹೇಳಿದರು.
ತಾಲೂಕು ಕನ್ನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವಶ್ರಮ ಚೇತನದಲ್ಲಿ ನಡೆದ ಡಾ. ಕೆ.ಎಸ್.ಶರ್ಮಾ ದತ್ತಿ ಕಾರ್ಯಕ್ರಮದಲ್ಲಿ ಭಾರತದಲ್ಲಿ ಜನತಾ ವಿಶ್ವವಿದ್ಯಾಲಯಗಳ ಸ್ಥಾಪನೆಯ ಅವಶ್ಯಕತೆ  ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಭಾರತೀಯ ಶಿಕ್ಷಣ ವ್ಯವಸ್ಥೆ ಆಳುವ ವರ್ಗದ ಪರವಾಗಿದೆ. ಸ್ವಾತಂತ್ರ್ಯ ನಂತರವೂ  ಭಾರತದಲ್ಲಿ ವಸಾಹತುಶಾಹಿ ಶಿಕ್ಷಣ ಪದ್ಧತಿ ಮುಂದುವರಿದಿದೆ. ಬಂಡವಾಳ ಶಾಹಿ-ಭೂ ಮಾಲೀಕರ ಅಡಿಯಾಳಾಗಿದೆ. ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಬದಲಿಸುವ ಕಾರ್ಯ ಆಗಬೇಕಾಗಿದೆ ಎಂದರು. ಅಲಹಾಬಾದ ಭಾರತೀಯ ಸಮಾಜ ವಿಜ್ಞಾನಗಳ ಅಕಾಡೆಮಿಯ ಡಾ. ಎನ್.ಪಿ.ಚೌಬೆ ಮಾತನಾಡಿದರು. ದತ್ತಿ ದಾನಿ ಸುಲೋಚನಾ ಸಿದ್ನಾಳ, ಮಹಾದೇವ ಸಿದ್ನಾಳ, ಪ್ರೊ ರಾಘವೇಂದ್ರರಾವ್ ಪಾಲ್ಗೊಂಡಿದ್ದರು. ಪ್ರೊ ಕೆ.ಎಸ್.ಕೌಜಲಗಿ ಸ್ವಾಗತಿಸಿದರು. ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗರಾಜ ರಾಮಾಪುರ ನಿರೂಪಿಸಿದರು. ಹೊರಕೇರಿ ವಂದಿಸಿದರು.
ಅಕ್ರಮ ಮದ್ಯ ವಶ
ಧಾರವಾಡ: ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟನೂರ ಗ್ರಾಮದ ಬಳಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಹುಬ್ಬಳ್ಳಿ ಮೂಲದ ಶಿವಾನಂದ ಪಾಟೀಲ, ಚಂದ್ರಕಾಂತ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ರು. 2,717 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪ್ಲಾಟಿನಾ ಬೈಕ್ ಕೂಡ ಪೊಲೀಸರ ವಶವಾಗಿದೆ. ಪ್ರಕರಣ ದಾಖಲಾಗಿದೆ.
ಇಂದು ಸಭೆ
ಧಾರವಾಡ: ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯ ಕುರಿತು ಧಾರವಾಡ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಶಹರದ ಬಿಜೆಪಿ ಕಾರ್ಯಾಲಯದಲ್ಲಿ ಜೂ.12 ರಂದು ಮಧ್ಯಾಹ್ನ 3ಕ್ಕೆ ಕರೆಯಲಾಗಿದೆ. ಗ್ರಾಮೀಣ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ ಆಗಮಿಸಲಿದ್ದಾರೆ.
ಬಾಳಪ್ಪಗೆ 14ರಂದು ಸಮ್ಮಾನ: ಶೇಖ್
ಧಾರವಾಡ: ನಟರಾಗಿ, ಗಾಯಕರಾಗಿ, ನಾಟಕ ಕಂಪನಿ ಮಾಲೀಕರಾಗಿ ವೃತ್ತಿ ರಂಗಭೂಮಿಯ ಅವಿಭಾಗ್ಯ ಅಂಗವಾಗಿರುವ, ಶತಮಾನದ ವೃತ್ತಿರಂಗಭೂಮಿಗೆ ಸಾಕ್ಷಿ ಪ್ರಜ್ಞೆಯಾಗಿರುವ ನಾಡೋಜ ಏಣಗಿ ಬಾಳಪ್ಪ ಅವರಿಗೆ ನಾಟಕ ಅಕಾಡೆಮಿ ವತಿಯಿಂದ ಜೂ. 14ರಂದು ಸಮ್ಮಾನ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಬಿ. ಶೇಖ್ (ಮಾಸ್ತರ), ಸಮ್ಮಾನ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ವಿದ್ಯಾವರ್ಧಕ ಸಂಘದಲ್ಲಿ ಜೂ. 14ರ ಸಂಜೆ 4ಕ್ಕೆ ನೆರವೇರಿಸಲಿದ್ದಾರೆ. ನೂರೊಂದು ಕಲಾವಿದರ ನಾಂದಿಗೀತೆ, ಸಮ್ಮಾನ, ರಂಗಗೀತೆಗಳು, ಕಾವ್ಯಕುಂಚ ಗಾಯನ, ಪುಸ್ತಕ ಬಿಡುಗಡೆ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಹೆಲನ್ ಮೈಸೂರು ನಿರ್ದೇಶನದ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಏಣಗಿ ಬಾಳಪ್ಪ ಹಾಗೂ ಏಣಗಿ ಲಕ್ಷ್ಮೀಬಾಯಿ ದಂಪತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ೤ ಎಸ್.ಜಿ. ಸಿದ್ಧರಾಮಯ್ಯ ಅವರಿಂದ ಸಮ್ಮಾನ ನಡೆಯಲಿದೆ. 'ಶತಮಾನದ ಶಕಪುರುಷ' ಪುಸ್ತಕವನ್ನು ಕೆ.ಎ. ದಯಾನಂದ ಬಿಡುಗಡೆ ಮಾಡಲಿದ್ದಾರೆ. ಹಿಂದೂಸ್ತಾನಿ ಗಾಯಕ ಡಾ೤ ಮೀರಾ ಗುಂಡಿ, ಮೇಯರ್ ಶಿವು ಹಿರೇಮಠ ಹಾಗೂ ಶಾಸಕ ವಿನಯ ಕುಲಕರ್ಣಿ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು. ಸಹಜ ಅಭಿನಯ, ಅಮೋಘ ಗಾಯನ, ಸಂಘಟನಾ ಸಾಮರ್ಥ್ಯ ಏಣಗಿ ವ್ಯಕ್ತಿತ್ವದ ತೂಕವಾದರೆ, ಅದ್ಭುತ ಸ್ಮರಣಶಕ್ತಿ ಮತ್ತೊಂದು ತೂಕ. ಶತಮಾನದ ವೃತ್ತಿರಂಗಭೂಮಿ ಚಟುವಟಿಕೆಯನ್ನು ನೆನಪಿನಿಂದಲೇ ಹೇಳುವ ಅವರು ನಡೆದಾಡುವ ರಂಗಭೂಮಿ ಎಂದೇ ಖ್ಯಾತರು. ಇಂತಹ ಮಹಾನ್ ವ್ಯಕ್ತಿಗೆ ಗೌರವ ತೋರುತ್ತಿರುವ ನಾವೇ ಧನ್ಯರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.