ಧಾರವಾಡ

ವಿದ್ಯಾಕಾಶಿ ಧಾರವಾಡದಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳದ್ದೇ ದರ್ಬಾರು

Published On :

ಧಾರವಾಡದ ಪ್ರಮುಖ ರಸ್ತೆಗಳಾದ ಕಲಾಭವನದಿಂದ ಕೆಸಿಡಿ-ಸಪ್ತಾಪುರ-ಜಯನಗರ-ಶ್ರೀನಗರ ರಸ್ತೆ ವರೆಗೆ, ಕಲಾಭವನದಿಂದ ಹಳೆ ಎಸ್ಪಿ ಕಚೇರಿ-ಉಪನಗರ ಠಾಣೆ ವರೆಗೆ ಡಬ್ಬಾ ಅಂಗಡಿಗಳು ಸಾಲು ಸಾಲಾಗಿವೆ. ಸಿಬಿಟಿಯಿಂದ ಶಿವಾಜಿ ವೃತ್ತ-ಮುರುಘಾಮಠ, ಶಿವಾಜಿ ವೃತ್ತದಿಂದ ಹೆಬ್ಬಳ್ಳಿ ರಸ್ತೆ, ಕೆಸಿ ಪಾರ್ಕ್ ಸುತ್ತ, ಕಾರಾಗೃಹ ರಸ್ತೆ ಹೀಗೆ ಎಲ್ಲೆಂದರಲ್ಲಿ ಡಬ್ಬಾ ಅಂಗಡಿಗಳಿವೆ.

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 26
ಧಾರವಾಡ ನಗರದ ಸುತ್ತಮುತ್ತ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳು ತಲೆ ಎತ್ತುತ್ತಿವೆ. ನಗರದ ಪ್ರತಿ ರಸ್ತೆಗಳ ಎರಡೂ ಬದಿ ಅನಧಿಕೃತ ಡಬ್ಬಾ ಅಂಗಡಿಗಳು ತಮ್ಮದೇ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದು, ಇದು ನಗರದ ಸೌಂದರ್ಯೀಕರಣಕ್ಕೆ ಪೆಟ್ಟು ನೀಡುವುದಲ್ಲದೇ ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಧಾರವಾಡದ ಎಲ್ಲ ಮಾರುಕಟ್ಟೆಗಳ ರಸ್ತೆಗಳ ಫುಟಪಾತ್‌ನ್ನು ವ್ಯಾಪಾರಸ್ಥರು ಅಕ್ರಮಿಸಿಕೊಂಡರೆ, ನಗರದ ಇನ್ನುಳಿದ ಸಂಪರ್ಕಗಳ ಆಚೆ-ಈಚೆ ಜಾಗವನ್ನು ಅನಧಿಕೃತ ಡಬ್ಬಾ ಅಂಗಡಿಗಳು ತಮ್ಮದಾಗಿಸಿಕೊಂಡಿವೆ. ಹೀಗಾಗಿ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾದರೆ, ಬೈಕ್ ಮತ್ತು ಕಾರು ಸವಾರರಿಗೆ ಪಾರ್ಕಿಂಗ್ ಸಮಸ್ಯೆಯಾಗಿದೆ.

ಆದಾಯವೂ ಇಲ್ಲ...
ಮಣಿವಣ್ಣನ್ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಈ ಡಬ್ಬಾ ಅಂಗಡಿಗಳಿಗೆ ಪರವಾನಗಿ ನೀಡಿ ಪ್ರತಿ ತಿಂಗಳು ಬಾಡಿಗೆ ವಸೂಲಿ ಮಾಡುತ್ತಿದ್ದರು. ಹೀಗಾಗಿ ಡಬ್ಬಾ ಅಂಗಡಿಗಳು ಪಾಲಿಕೆ ಹದ್ದುಬಸ್ತಿನಲ್ಲಿ ಇದ್ದವು. ಆದರೆ, ಇದೀಗ ನೂತನ ಅಂಗಡಿಗಳು ಪರವಾನಗಿ ಪಡೆಯದೇ ಆರಂಭವಾಗುತ್ತಿದ್ದರೆ, ಹಳೆಯ ಅಂಗಡಿಗಳು ಪರವಾನಗಿಯನ್ನು ನವೀಕರಿಸಿಕೊಳ್ಳುತ್ತಿಲ್ಲ. ಹೀಗಾಗಿ ಪಾಲಿಕೆಗೆ ಒಂದು ರುಪಾಯಿಯೂ ಡಬ್ಬಾ ಅಂಗಡಿಗಳಿಂದ ಆದಾಯ ಬರುತ್ತಿಲ್ಲ. ದುರಂತ ಎಂದರೆ ಇತ್ತೀಚೆಗೆ ಹಳೇ ಬಸ್ ನಿಲ್ದಾಣ ತೆರವಿನ ನಂತರ ಪಾಲಿಕೆಯ ಕಾಂಪೌಂಡಿಗೆ ಹಚ್ಚಿಕೊಂಡೇ ನಾಲ್ಕೈದು ಡಬ್ಬಾ ಅಂಗಡಿಗಳು ಶುರುವಾಗಿವೆ. ನಗರ ಸ್ವಚ್ಛವಾಗಿರಲು, ಟ್ರಾಫಿಕ್ ಮುಕ್ತವಾಗಿರಲು ಈ ಅನಧಿಕೃತ ಡಬ್ಬಾ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಪಾಲಿಕೆ ಆಯುಕ್ತರಾಗಲಿ ಅಥವಾ ಮೇಯರ್ ಅವರಾಗಲಿ ಖುದ್ದಾಗಿ ಡಬ್ಬಾ ಅಂಗಡಿಗಳ ಮೇಲೆ ಕ್ರಮ ಕೈಗೊಂಡರೆ ಮಾತ್ರ ವಿದ್ಯಾಕಾಶಿ ಖ್ಯಾತಿ ಧಾರವಾಡ ಮುಂಚಿನ ಹೆಸರು ಉಳಿಯುತ್ತದೆ. ಇಲ್ಲದಿದ್ದರೆ ಧಾರವಾಡ ಡಬ್ಬಾ ಅಂಗಿಡಗಳ ಸಾಮ್ರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ಜನರ ಅಭಿಪ್ರಾಯ.

ತಿಂಡಿ-ತಿನಿಸು, ಫಾಸ್ಟ್‌ಫುಡ್...
ಈ ಡಬ್ಬಾ ಅಂಗಡಿಗಳ ಪೈಕಿ ತಿಂಡಿ-ತಿನಿಸುಗಳ ಹಾಗೂ ಫಾಸ್ಟ್‌ಪುಡ್ ಸಿದ್ಧಪಡಿಸುವ ಅಂಗಡಿಗಳೇ ಹೆಚ್ಚಿನವು. ಸಂಜೆಯಾದರೆ ಸಾಕು ನಗರದ ಎಲ್ಲ ರಸ್ತೆಗಳಲ್ಲೂ ಪಾನಿಪುರಿ, ಗೋಬಿಮಂಚೂರಿ, ನೂಡಲ್ಸ್, ಎಗ್ಗರೈಸ್, ಚಿಕನ್ ರೈಸ್ ಅಂಗಡಿಗಳು ಶುರುವಾಗುತ್ತವೆ. ಯಾವುದೇ ಸುರಕ್ಷತಾ ಕ್ರಮ ಇಲ್ಲದೇ ಆರಂಭಿಸಿದ್ದು ಅಸುರಕ್ಷತೆಯ ಆಹಾರದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೈಕ್, ಕಾರು, ಲಾರಿ ರಿಪೇರಿ ಮಾಡುವ ಮೆಕ್ಯಾನಿಕ್ ಅಂಗಡಿಗಳು 2ನೇ ಸ್ಥಾನ ಪಡೆಯುತ್ತವೆ. ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಮಾಡುವುದಲ್ಲದೇ ರಸ್ತೆ ಬದಿ ಕಸ ಎಸೆದು ಪರಿಸರ ಹಾಳು ಮಾಡುವಲ್ಲಿಯೂ ಈ ಡಬ್ಬಾ ಅಂಗಡಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ನಿತ್ಯ ಹತ್ತಾರು ಹೊಸ ಡಬ್ಬಾ ಅಂಗಡಿಗಳು ಹುಟ್ಟಿಕೊಳ್ಳುತ್ತಿದ್ದು, ಅವುಗಳ ಬೆಳವಣಿಗೆಗೆ ಕಡಿವಾಣವೇ ಇಲ್ಲದಾಗಿದೆ. ಪಾಲಿಕೆ ಆರೋಗ್ಯ ವಿಭಾಗ ಈ ಅಂಗಡಿಗಳಿಗೆ ಪರವಾನಗಿ ನೀಡಬೇಕು. ಆದರೆ, ಶೇ. 90ರಷ್ಟು ಡಬ್ಬಾ ಅಂಗಡಿಗಳು ಪರವಾನಗಿ ಪಡೆಯದೇ ಆರಂಭವಾಗಿದ್ದು ಧಾರವಾಡದ ಮಟ್ಟಿಗೆ ಬೇಸರದ ಸಂಗತಿ.
-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.