ಹಂದಿ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಪೌರಕಾರ್ಮಿಕರ ಮೇಲೆ ಹಂದಿ ಮಾಲೀಕರ ಹಲ್ಲೆ
ಹುಬ್ಬಳ್ಳಿ: ನಗರದ ಕೇಶ್ವಾಪುರದ ಇಂದಿರಾ ಕಾಲನಿಯಲ್ಲಿ ಸೋಮವಾರ ಹಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೌರಕಾರ್ಮಿಕರ ಮೇಲೆ ಹಂದಿಗಳ ಮಾಲೀಕರು ಕಲ್ಲು ತೂರಿ, ಬಡಿಗೆಗಳಿಂದ ಹಲ್ಲೆ ನಡೆಸಿದ್ದರಿಂದ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.
ಮಹಾನಗರ ಪಾಲಿಕೆ ಪೌರಕಾರ್ಮಿಕರು, ತುಮಕೂರಿನಿಂದ ಕರೆಯಿಸಿದ್ದ ಹಂದಿ ಹಿಡಿಯುವ ಪರಿಣತರು ಸೇರಿದಂತೆ 60 ಕಾರ್ಮಿಕರೊಂದಿಗೆ ಸೋಮವಾರ ಬೆಳಗ್ಗೆ 6.30ರಿಂದ ನಗರದ ಹಲವು ಬಡಾವಣೆಗಳಲ್ಲಿ ಪ್ರತ್ಯೇಕ ಎರಡು ತಂಡಗಳಲ್ಲಿ ಹಂದಿಗಳನ್ನು ಹಿಡಿಯಲಾಗುತ್ತಿತ್ತು. ಮಧ್ಯಾಹ್ನ 1 ಗಂಟೆಗೆ ಎರಡೂ ತಂಡ ಒಟ್ಟಾಗಿ ಪೊಲೀಸ್ ಭದ್ರತೆ ಇಲ್ಲದೇ ಕೇಶ್ವಾಪುರ ಮಯೂರ ಬಡಾವಣೆಯ ಇಂದಿರಾ ಕಾಲನಿಯಲ್ಲಿ ಹಂದಿ ಹಿಡಿಯಲು ತೊಡಗಿದ್ದವು. ಆಗ 60-70 ಜನರ ಗುಂಪು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಇಂದಿರಾ ಕಾಲನಿಗೆ ಟ್ರ್ಯಾಕ್ಟರ್, ಗೂಡ್ಸ್ ಟೆಂಪೋಗಳಲ್ಲಿ ಬಂದ ಕಾರ್ಮಿಕರ ಮೇಲೆ ಕಲ್ಲು ತೂರಿದ ಹಂದಿಗಳ ಮಾಲೀಕರು, ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ.
ದಾಳಿಯಲ್ಲಿ ಗೂಡ್ಸ್ ಟೆಂಪೋದ ಮುಂಭಾಗದ ಗಾಜುಗಳು ಒಡೆದಿವೆ. ತುಮಕೂರಿನ ಹಂದಿ ಪರಿಣತರಾದ ವೆಂಕಟೇಶ, ಕಿಟ್ಟಿ ಚಿಕನಾಳಗೆ ಕಲ್ಲೇಟು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಪಾಲಿಕೆ ಪೌರಕಾರ್ಮಿಕರಾದ ಸಿದ್ದಪ್ಪ ಸುಳ್ಳದ (32), ರಾಜು ಗೆಜ್ಜಿಹಳ್ಳಿ (35), ಅಂಜನಪ್ಪ ದೊಡ್ಡಮನಿ (33), ದೇವಪ್ಪ ಗೆಜ್ಜಿಹಳ್ಳಿ (45), ಟ್ರ್ಯಾಕ್ಟರ್ ಚಾಲಕ ಪ್ರಹ್ಲಾದ ಕುಲಕರ್ಣಿ (29) ಮೇಲೆ ಕಲ್ಲು, ಇಟ್ಟಿಗೆ ತೂರಿ ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ಐವರಿಗೂ ಚಿಟಗುಪ್ಪಿ ಹೆರಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ಸ್ಥಳಾಂತರಿಸಲಾಗಿದೆ.
ಇಂದಿರಾ ಕಾಲನಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಡಿಸಿಪಿ ಎ.ಎಸ್. ಗೋರಿ, ಎಸಿಪಿ ಎ.ಆರ್. ಬಡಿಗೇರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗುಂಪಾಗಿ ನಿಂತಿದ್ದ ಹಂದಿಗಳ ಮಾಲೀಕರನ್ನು ಚದುರಿಸಿದರು. ಈ ವೇಳೆ ಇಂದಿರಾ ಕಾಲನಿಯಲ್ಲಿ ಕೆಲ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೂ ಮೊದಲು ಹಂದಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಬಹುದೆಂದು ಮುಂಜಾಗ್ರತೆ ಕ್ರಮವಾಗಿ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಮೂವರನ್ನು ಬಂಧಿಸಿ, ಆನಂತರ ಬಿಡುಗಡೆಗೊಳಿಸಲಾಯಿತು.
ಸೋಮವಾರ ಬೆಳಗ್ಗೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 250 ಹಂದಿಗಳನ್ನು ಹಿಡಿದಿರುವ ಪೌರಕಾರ್ಮಿಕರು, ಹಂದಿಗಳನ್ನು ನಗರ ಪ್ರದೇಶದಿಂದ ದೂರ ಸಾಗಿಸಿದರು. ಹಂದಿ ಮಾಲೀಕರ ತೀವ್ರ ವಿರೋಧದ ಮಧ್ಯೆಯೂ ಹಳೇ ಹುಬ್ಬಳ್ಳಿಯ ಈಶ್ವರ ನಗರ, ಹೆಗ್ಗೇರಿ, ನೇಕಾರ ನಗರ, ಹಳೇ ಹುಬ್ಬಳ್ಳಿ ದುರ್ಗದಬೈಲ್, ವಾಸವಿ ನಗರ, ಹೆಗ್ಗೇರಿ ಸ್ಮಶಾನದ ಪ್ರದೇಶ, ಕೇಶವ ಕುಂಜ, ಮಾರುತಿ ನಗರ, ಜಗದೀಶ ನಗರ, ಕೋಟೆಲಿಂಗೇಶ್ವರ ನಗರ ಮತ್ತಿತರೆಡೆ ಹಂದಿಗಳನ್ನು ಹಿಡಿದು ಸಾಗಿಸಿದರು.
ಮೇಯರ್ ಶಿವು ಹಿರೇಮಠ, ಉಪ ಮೇಯರ್ ಮಂಜುಳಾ ಅಕ್ಕೂರ, ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಎಸಿಪಿ ಎನ್.ಡಿ. ಬಿರ್ಜೆ, ಹಳೇ ಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಚಲವಾದಿ ಮತ್ತಿತರರು ಇದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಅವಳಿ ನಗರದಿಂದ ಹಂದಿಗಳನ್ನು ಮುಕ್ತಗೊಳಿಸಲು ಮುಂದಾದ ಮೇಯ ರ್ ಶಿವು ಹಿರೇಮಠ, ಸ್ವಯಂಪ್ರೇರಿತ ತೆರವಿಗೆ ಹಂದಿಗಳ ಮಾಲೀಕರಿಗೆ ಕಾಲಾವಕಾಶ ಕೊಟ್ಟಿದ್ದರು. ನಿಗದಿತ ಕಾಲಾವಕಾಶ ಮೀರಿದ ಬಳಿಕ ಧಾರವಾಡದಲ್ಲಿ ಕೆಲವು ದಿನಗಳ ಹಿಂದೆ ಕಾರ್ಯಾಚರಣೆ ನಡೆಸಿ, 200 ಹಂದಿಗಳನ್ನು ತೆರವುಗೊಳಿಸಲಾಗಿತ್ತು. ಸೋಮವಾರ ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.
ಕಾಲ್ಕಿತ್ತ ಮೇಯರ್
ಕೇಶ್ವಾಪುರ ಇಂದಿರಾ ಕಾಲನಿಯಲ್ಲಿ ಕಾರ್ಮಿಕರೊಂದಿಗೆ ಬಂದಿದ್ದ ಮೇಯರ್ ಶಿವು ಹಿರೇಮಠ, ಪೌರಕಾರ್ಮಿಕರ ಮೇಲೆ ಹಂದಿಗಳ ಮಾಲೀಕರು ದಾಳಿ ನಡೆಸುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತರು. ಕಲ್ಲು ತೂರಾಟ ಪ್ರಾರಂಭಗೊಳ್ಳುತ್ತಿದ್ದಂತೆಯೇ ತಮ್ಮ ಕಾರಿನಲ್ಲಿ ಹೋದ ಮೇಯರ್ ವರ್ತನೆಯಿಂದಾಗಿ ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳು ಅಸಮಾಧಾನಗೊಂಡರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು, ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಬಳಿಕ ಮತ್ತೆ ಆಯುಕ್ತ ರಮಣದೀಪ ಚೌಧರಿ ಅವರೊಂದಿಗೆ ಇಂದಿರಾ ಕಾಲನಿಗೆ ಭೇಟಿ ನೀಡಿದ ಮೇಯರ್, ತಮ್ಮ ಕಚೇರಿಗೆ ಬಂದು ಚರ್ಚಿಸುವಂತೆ ಹಂದಿಗಳ ಮಾಲೀಕರಿಗೆ ಸೂಚಿಸಿದರು.
ಹಂದಿಗಳ ಮಾಲೀಕರಿಗೆ ಏಳು ದಿನಗಳ ಗಡುವು
ಹಂದಿಗಳ ಮಾಲೀಕರೊಂದಿಗೆ ಸೋಮವಾರ ಮಧ್ಯಾಹ್ನ ತುರ್ತು ಸಭೆ ನಡೆಸಿದ ಮೇಯರ್ ಶಿವು ಹಿರೇಮಠ, ಆಯುಕ್ತ ರಮಣದೀಪ ಚೌಧರಿ, ಹಂದಿಗಳ ತೆರವಿಗೆ ಏಳು ದಿನಗಳ ಗಡುವು ನೀಡಿದ್ದಾರೆ. ಹಂದಿಗಳ ತೆರವಿಗೆ 2-3 ತಿಂಗಳು ಗಡುವು ನೀಡುವಂತೆ ಹಂದಿಗಳ ಮಾಲೀಕರ ಕೋರಿಕೆ ನಿರಾಕರಿಸಿದ ಮೇಯರ್, ಏಳು ದಿನಗಳಲ್ಲಿ ಹಂದಿಗಳನ್ನು ಸ್ವಯಂ ಪ್ರೇರಿತವಾಗಿ ಅವುಗಳ ಮಾಲೀಕರ ತೆರವುಗೊಳಿಸಬೇಕು. ಈ ತೆರವು ಪರಿಶೀಲಿಸಿದ ಆನಂತರ ಆವಶ್ಯಕತೆ ಕಂಡುಬಂದಲ್ಲಿ ಗಡುವು ವಿಸ್ತರಿಸಲಾಗುವುದು. ಏಳು ದಿನಗಳೊಳಗೆ ಹಂದಿಗಳನ್ನು ತೆರವುಗೊಳಿಸದಿದ್ದರೆ ಮಹಾನಗರ ಪಾಲಿಕೆ ಮತ್ತೆ ಕಾರ್ಯಾಚರಣೆ ಪ್ರಾರಂಭಿಸುವುದು ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಸಿಬ್ಬಂದಿ ಮೇಲೆ ಮತ್ತೆ ದಾಳಿ ನಡೆಸಿದಲ್ಲಿ ಬಂಧಿಸುವ ಎಚ್ಚರಿಕೆಯನ್ನೂ ಮೇಯರ್ ಶಿವು ಹಿರೇಮಠ ಹಂದಿಗಳ ಮಾಲೀಕರಿಗೆ ನೀಡಿದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್, ಹಂದಿ ಸಾಕುವುದನ್ನು ಬಿಟ್ಟು ಪರ್ಯಾಯ ಉದ್ಯೋಗ ಮಾಡಲು ಮುಂಬರುವ ಹಂದಿಗಳ ಮಾಲೀಕರಿಗೆ ಪಾಲಿಕೆಯಿಂದ ತರಬೇತಿ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

