ಸರ್ಕಾರ ಬೆಳೆ ಸಂಸ್ಕರಣಾ ಘಟಕ ಸ್ಥಾಪಿಸಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 2
ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ನಗರದ ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಮಾ. 4ರ ವರೆಗೆ ಆಯೋಜಿಸಿರುವ ಮೆಣಸಿನಕಾಯಿ ಮೇಳ-2014ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಫ್ತು ಮಾಡುವಂಥ ಮೆಣಸಿನಕಾಯಿಗಳನ್ನು ಇಲ್ಲಿಯ ರೈತರು ಬೆಳೆಯುತ್ತಿದ್ದರೂ ಅವರಿಗೆ ಸಮರ್ಪಕ ಬೆಲೆ ದೊರಕುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ರಫ್ತಾಗುವ ಮೆಣಸಿನಕಾಯಿಯಿಂದ ವಿದೇಶಗಳಲ್ಲಿ ಪರ್ಯಾಯ ಉತ್ಪನ್ನ ತಯಾರಿಸಲಾಗುತ್ತದೆ. ಈ ರೀತಿ ತಯಾರುಗೊಂಡ ಉತ್ಪನ್ನವನ್ನು ಭಾರತ ಮರಳಿ ಆಮದು ಮಾಡಿಕೊಳ್ಳುತ್ತಿದೆ. ಮೆಣಸಿನಕಾಯಿಯಿಂದ ಪರ್ಯಾಯ ಉತ್ಪನ್ನ ತಯಾರಿಸುವ ಕೈಗಾರಿಕೆಯನ್ನೂ ಸ್ಥಾಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಭರವಸೆಯ ವರಮಾನ ಕೊಡುವಂಥ ಕಾರ್ಯವನ್ನು ಸರ್ಕಾರಗಳು ಮಾಡಬೇಕು. ಕೃಷಿಯಲ್ಲಿ ಹೆಚ್ಚು ಬಂಡವಾಳ ತೊಡಗಿಸಬೇಕು. ಕೃಷಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ರೈತರು ಹಾಗೂ ಗ್ರಾಹಕರ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ಇಂಥ ಮೇಳಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ತಿಳಿಸಿದರು.
ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಲ್. ಮಹೇಶ್ವರ ಮಾತನಾಡಿ, ಈ ಮೇಳದಿಂದ 40 ಕ್ವಿಂಟಲ್‌ಗಿಂತ ಹೆಚ್ಚು ಮೆಣಸಿನಕಾಯಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಮೇಳದಲ್ಲಿ ಪಾಲ್ಗೊಂಡಿರುವ ರೈತರಿಗೆ ಆಧುನಿಕ ಮಾರುಕಟ್ಟೆಯ ಜ್ಞಾನ ಮತ್ತಿತರ ವಿಷಯಗಳ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಸಾದ ಅಬ್ಬಯ್ಯ, ಎಪಿಎಂಸಿ ಅಧ್ಯಕ್ಷ ದಾಸನೂರ, ಶಂಕರ ಪಾಟೀಲ, ಸಿದ್ದೇಶ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.
ಮೂರುಸಾವಿರ ಮಠದ ಹೈಸ್ಕೂಲು ಮೈದಾನದಲ್ಲಿ ಪ್ರಾರಂಭಗೊಂಡಿರುವ ಮೆಣಸಿನಕಾಯಿ ಮೇಳದಲ್ಲಿ 100 ಮಳಿಗೆಗಳನ್ನು ನಿರ್ಮಿಸಲಾಗಿದೆ. ಹರ್ಲಾಪುರ, ಸುಳ್ಳ, ಸಂಶಿ, ಬಂಡಿವಾಡ, ಕಡಪಟ್ಟಿ, ಹಿರೇಗುಂಜಾಳ, ಹಿರೇಬೂದಿಹಾಳ, ಉಮಚಗಿ, ಕುಬಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಮೇಳದಲ್ಲಿ ಪಾಲ್ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

