ಹು-ಧಾ ಪಾಲಿಕೆಯಲ್ಲಿ ಕ್ಯಾಮೆರಾ ಕಣ್ಣು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 3
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಟಾಟೋಪಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಲಂಚಕ್ಕೆ ಕೈ ಒಡ್ಡುವುದು, ಪ್ರಭಾವಕ್ಕೆ ಒಳಗಾಗುವುದು, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಇತ್ಯಾದಿ ಸಂಗತಿಗಳಿಗೆ ಕಡಿವಾಣ ಹಾಕಲು ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ.
ಹೌದು, ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ಲಂಚ ಕೇಳುತ್ತಾರೆ, ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡಲು ಸತಾಯಿಸುತ್ತಾರೆ, ಲಂಚ ಪಡೆದು ಕಾನೂನು ನಿಯಮ ಉಲ್ಲಂಘಿಸಿ ಕೆಲಸ ಮಾಡಿಕೊಡುತ್ತಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳ ಸತಾವಣೆಯಿಂದ ಸಿಟ್ಟಿಗೆದ್ದು ದಾಂದಲೆ ಮಾಡುತ್ತಾರೆ ಎನ್ನುವುದು ಸೇರಿದಂತೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವ ಮೂಲಕ ಎಲ್ಲ ವಿಭಾಗಗಳಲ್ಲಿ ಏನೇನು ನಡೆಯುತ್ತಿದೆ ಎನ್ನುವುದರ ಮೇಲೆ ನಿಗಾ ಇಡಲಾಗುತ್ತಿದೆ.
ಲೋಕಾಯುಕ್ತ ದಾಳಿ ಪರಿಣಾಮ: ಪಾಲಿಕೆಯ ಅಧಿಕಾರಿಗಳು ಕೆಲಸ ಮಾಡಿಕೊಡಲು ಕಚೇರಿಯಲ್ಲಿಯೇ ಖುಲ್ಲಂ ಖುಲ್ಲಾ ಲಂಚ ಪಡೆಯುತ್ತಾರೆ ಎನ್ನುವ ಆರೋಪಕ್ಕೆ ಇಂಬು ನೀಡುವಂತೆ, ಪಾಲಿಕೆಯ ಅಧಿಕಾರಿಗಳು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ನಗರ ಯೋಜನಾ ಶಾಖೆಯ ಎಂಜಿನಿಯರ್ ಸುಭಾಶ್ಚಂದ್ರ ಪುಟ್ಟಣ್ಣವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದಾಗ ಕೋಟ್ಯಂತರ ರುಪಾಯಿ ಅಕ್ರಮ ಆಸ್ತಿ ಗಳಿಕೆ ಬಯಲಾಗಿತ್ತು. ಇದಲ್ಲದೇ ಇನ್ನೂ ಅನೇಕ ಪಾಲಿಕೆ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಇದರಿಂದಾಗಿ ಪಾಲಿಕೆಯ ಮಾನ ಹರಾಜಾಗಿತ್ತು. ಈ ಕಾರಣಕ್ಕಾಗಿಯೇ ಪಾಲಿಕೆಯ ಎಲ್ಲ ವಿಭಾಗಗಳಲ್ಲಿ ಏನೇನು ನಡೆಯುತ್ತಿದೆ ಎನ್ನುವುದರ ಮೇಲೆ ಕಣ್ಣಿಡಲು ಕ್ಯಾಮೆರಾ ಅಳವಡಿಸಲಾಗಿದೆ.
ಎಲ್ಲೆಲ್ಲಿ ಕ್ಯಾಮೆರಾ?: ಪಾಲಿಕೆ ಕಚೇರಿಯಲ್ಲಿ ಈ ಹಿಂದೆ ಕೆಲವೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ, ಗಾರ್ಡನ್ ಬಳಿ, ಕಾಂಪೌಂಡ್ ಗೋಡೆಯ ಎರಡು ಕಡೆಗಳಲ್ಲಿ, ಬೇಂದ್ರೆ ಸಭಾ ಭವನ, ಕಂಟ್ರೋಲ್ ರೂಮ್, ಲೆಕ್ಕಪತ್ರ ವಿಭಾಗದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿತ್ತು. ಇದೀಗ ನಗರ ಯೋಜನಾ ಶಾಖೆ ಕಚೇರಿಯಲ್ಲಿ ಹಾಗೂ ನಗರ ಉಪ ನಿರ್ದೇಶಕರ ಕಚೇರಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದ್ದು, ಇಷ್ಟರಲ್ಲಿಯೇ ಇನ್ನಿತರ ವಿಭಾಗಗಳಲ್ಲಿಯೂ ಕ್ಯಾಮೆರಾ ಅಳವಡಿಸಲು ಯೋಜಿಸಲಾಗಿದೆ.
ನಗರ ಯೋಜನಾ ಶಾಖೆಯೇ ಏಕೆ?: ನಗರ ಯೋಜನಾ ಶಾಖೆಗೆ ಒತ್ತು ಕೊಟ್ಟು ತಕ್ಷಣಕ್ಕೆ ಕ್ಯಾಮೆರಾ ಅಳವಡಿಸಿರುವ ಹಿಂದೆಯೂ ಸಕಾರಣವಿದೆ. ನಗರ ಯೋಜನಾ ಶಾಖೆಯಲ್ಲಿಯೇ ಹೆಚ್ಚಿನ ಲಂಚಗುಳಿತನ ನಡೆಯುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ಬಂದಿತ್ತು. ಪುಟ್ಟಣ್ಣವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಾಗ ಇದು ರುಜುವಾತಾಯಿತು. ಈ ವಿಭಾಗದಲ್ಲಿ ಪ್ರಮುಖವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವವರು ಯೋಜನಾ ಶಾಖೆಯ ಕೌಂಟರ್ನಲ್ಲಿ ಅರ್ಜಿ ಸಲ್ಲಿಸಿ ಹೋಗಬೇಕು ಎಂಬ ನಿಯಮ ಇದೆ. ಆದರೆ ಅಧಿಕಾರಿಗಳು ನೇರವಾಗಿ ಅರ್ಜಿದಾರರನ್ನು ತಮ್ಮ ಟೇಬಲ್ ಬಳಿ ಕರೆಯಿಸಿಕೊಂಡು ವ್ಯವಹಾರ ಕುದುರಿಸುತ್ತಿದ್ದರು, ನಿಯಮ ಮೀರಿದ್ದರೂ ಹಣ ಪಡೆದುಕೊಂಡು ಅನುಮತಿ ನೀಡುತ್ತಿದ್ದರು, ಇಲ್ಲವೇ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಅನುಮತಿ ನೀಡುತ್ತಿದ್ದರು ಎನ್ನುವ ಗುರುತರ ಆರೋಪಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೊಟ್ಟ ಮೊದಲಿಗೆ ನಗರ ಯೋಜನಾ ಶಾಖೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ.
ಆಯುಕ್ತರಿಂದ ಕಂಟ್ರೋಲ್: ಪಾಲಿಕೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳಲ್ಲಿ ಚಿತ್ರೀಕರಣಗೊಂಡ ಚಿತ್ರ ಪಾಲಿಕೆ ಆಯುಕ್ತ ರಮಣದೀಪ್ ಚೌಧರಿ ಅವರ ಬಳಿಯಿರುವ ಕಂಪ್ಯೂಟರ್ನಲ್ಲಿ ಬಿತ್ತರಗೊಳ್ಳುತ್ತದೆ. ಹೀಗಾಗಿ ಯಾವ ಯಾವ ವಿಭಾಗದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ, ಏನೆಲ್ಲಾ ವ್ಯವಹಾರಗಳು ಕುದುರುತ್ತವೆ ಎಂಬುದು ಕಂಪ್ಯೂಟರ್ನಲ್ಲಿ ಕಾಣಸಿಗುತ್ತದೆ. ಹೀಗಾಗಿ ಅಧಿಕಾರಿಗಳು ಈ ಹಿಂದೆ ಖುಲ್ಲಂ ಖುಲ್ಲಾ ನಡೆಸುತ್ತಿದ್ದ ವ್ಯವಹಾರಕ್ಕೆ ಕೊಂಚ ಮಟ್ಟಿಗೆ ಬ್ರೇಕ್ ಬೀಳಲಿದೆ.
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

