ಶ್ರಮಜೀವಿಗಳಿಗೆ ಸರ್ಕಾರ ನೆರವಾಗಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 4
ಶ್ರಮ ಜೀವಿಗಳನ್ನು ನಮ್ಮ ಸಮಾಜ ಕೀಳಾಗಿ ಕಾಣುತ್ತಿರುವುದು ಬೇಸರದ ಸಂಗತಿ. ಸ್ವಾತಂತ್ರ್ಯ ಎನ್ನುವುದು ಶ್ರೀಮಂತರ ಸ್ವತ್ತಾಗಿದೆ. ಹಮಾಲಿ ಕಾರ್ಮಿಕರಿಗೆ ಇಂದಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಅಸಮಾಧಾನ ವ್ಯಕ್ತ ಪಡಿಸಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯ ಹಮಾಲಿ ಕೂಲಿ ಕಾರ್ಮಿಕರ 4ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಮಾಲಿ ಕಾರ್ಮಿಕರ ಸೇವೆ ಅತ್ಯಗತ್ಯವಾಗಿದೆ. ಸರ್ಕಾರ ಸಹ ಇವರನ್ನು ಬಳಸಿಕೊಳ್ಳುತ್ತಿದೆ. ಆದರೆ ಸೂಕ್ತ ಸ್ಥಾನ-ಮಾನ, ಸಂಬಳ ನೀಡದೇ ಸತಾಯಿಸುತ್ತದೆ ಎಂದರು.
ಜನಪ್ರತಿನಿಧಿಗಳು ಉಳ್ಳವರ ಪರ ತೋರಿಸುವ ಕಾಳಜಿ ಹಮಾಲಿ ಕಾರ್ಮಿಕರಂತವರ ಪರ ತೋರುತ್ತಿಲ್ಲ. ಸರ್ಕಾರ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡುವ ಹಮಾಲಿ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಸೀಟು ನಿಗದಿ ಮಾಡಲಿ. ಆಶ್ರಯ ಯೋಜನೆಯಡಿ ಮನೆ ಮೀಸಲಿರಿಸಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು. ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಮಹೇಶ ಪತ್ತಾರ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ ಹಮಾಲಿ ಕೂಲಿ ಕಾರರಿದ್ದು, ಅವರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಬೇಡಿಕೆಯ ಕುರಿತು ಈಗಾಗಲೇ ಮೂರು ಸಮ್ಮೇಳನಗಳನ್ನು ನಡೆಸಿದ್ದು ಇದು ನಾಲ್ಕನೇ ರಾಜ್ಯ ಸಮ್ಮೇಳನ. ಈ ಸಮ್ಮೇಳನದ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ. ಇದಾದ ಬಳಿಕವೂ ಸರ್ಕಾರ ತಟಸ್ಥ ಧೋರಣೆ ತಾಳಿದರೆ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿದರು. ಎಸ್. ಪ್ರಸನ್ನಕುಮಾರ, ಸರ್ಕಾರಕ್ಕೆ ಹಮಾಲಿ ಕಾರ್ಮಿಕರಿಂದ ರು. 30 ಸಾವಿರ ಕೋಟಿ ತೆರಿಗೆ ಬರುತ್ತಿದೆ. ಆದರೆ ಸರ್ಕಾರ ಉಳ್ಳವರಿಗೆ ನೆರವಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಕಾರ್ಮಿಕರಿಗೆ ಸವಲತ್ತು ಒದಗಿಸಿಕೊಡಬೇಕು ಎಂದರು. ಕಲ್ಲಪ್ಪ ಕಡಗಲ್, ರಾಜಣ್ಣ ಕೊರವಿ, ನಿತ್ಯಾನಂದ ಸ್ವಾಮಿ, ಬಿ. ಎಸ್.ಉಪ್ಪಿನ, ದುರುಗಪ್ಪ ಚಿಕ್ಕತುಂಬಳ, ವೀರೇಶ ಬಡಿಗೇರ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

