ಧಾರವಾಡ

15 ಗಂಟೆ ಕಾಲ ಶಸ್ತ್ರಚಿಕಿತ್ಸೆ: ಬದುಕಿದ ಬಡಪಾಯಿ

Published On :

ಹುಬ್ಬಳ್ಳಿ: ತಲೆ, ಎದೆ, ಕಾಲುಗಳಿಗೆ ಹೀಗೆ ಮೈತುಂಬ ಗಂಭೀರ ಪ್ರಮಾಣದ ಗಾಯಗಳೊಂದಿಗೆ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಬಾಲಾಜಿ ಆಸ್ಪತ್ರೆಯ ವೈದ್ಯಕೀಯ ತಂಡ ಸುಮಾರು 15ಕ್ಕೂ ಹೆಚ್ಚು ಗಂಟೆಗಳ ಕಾಲ ವಿವಿಧ ಶಸ್ತ್ರ ಚಿಕಿತ್ಸೆ ನೆರವೇರಿಸಿ ಬದುಕುಳಿಯುವಂತೆ ಮಾಡಿದ್ದು, ಮತ್ತೆ ಮೊದಲಿನಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಾಲಾಜಿ ನರರೋಗ ವಿಜ್ಞಾನ ಮತ್ತು ಅಪಘಾತ ಚಿಕಿತ್ಸಾ ಆಸ್ಪತ್ರೆಯ ಅಧ್ಯಕ್ಷ ಡಾ. ಕ್ರಾಂತಿಕಿರಣ್, ಹಳೇ ಹುಬ್ಬಳ್ಳಿ ನೇಕಾರದ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಜಾಫರ್ ಕಳೆದ ಜನವರಿ 24ರಂದು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ವೇಳೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದರು. ಕೆಳಗೆ ಬೀಳುವ ಸಂದರ್ಭದಲ್ಲಿಯೇ ತಲೆಗೆ ಮತ್ತು ಎದೆಗೆ ಗಾಯಮಾಡಿಕೊಂಡಿದ್ದ ಅವರು ಗೇಟ್‌ಗೆ ಅಳವಡಿಸಿದ್ದ ಗ್ರಿಲ್‌ಗಳ ಮೇಲೆ ಬಿದ್ದ ಪರಿಣಾಮವಾಗಿ ಅವರ ಬಲಗಾಲಿನ ರಕ್ತನಾಳಗಳು ತುಂಡರಿಸಿದ್ದವು.
ಪ್ರಜ್ಞಾಹೀನ ಸ್ಥಿತಿ ಮತ್ತು ನಿತ್ರಾಣ ಜಾಫರ್ ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಏಕಕಾಲಕ್ಕೆ ರಾತ್ರಿ ಏಳುಗಂಟೆಯಿಂದ ಬೆಳಗ್ಗೆ ಸರಿಸುಮಾರು ಹತ್ತು ಗಂಟೆಯವರೆಗೆ ಮೆದುಳಿಗೆ ಮತ್ತು ರಕ್ತನಾಳ, ಎಲುಬು ಮತ್ತು ಕೀಲು ಜೋಡಣೆ, ಮ್ಯಾಕ್ಸಿಯೋ ಫೆಷಿಯಲ್ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಮೆದುಳು ಮತ್ತು ರಕ್ತನಾಳಗಳಿಗೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಏಕಕಾಲಕ್ಕೆ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಂತರ ಎಲುಬು ಮತ್ತು ಕೀಲು ಮತ್ತು ಮ್ಯಾಕ್ಸಿಯೋ ಫೆಷಿಯಲ್ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ನಾಲ್ಕು ದಿನ ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ 15 ದಿನಗಳವರೆಗೆ ತೀವ್ರ ನಿಗಾ ಘಟಕದ ಚಿಕಿತ್ಸೆ ನೀಡಲಾಯಿತು. ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಜಾಫರ್ ಹೆಬ್ಬಳ್ಳಿ ಅವರಿಗೆ ಅತ್ಯಂತ ವಿರಳ ಚಿಕಿತ್ಸೆಯಾಗಿರುವ ಪಾರಿತ್ರೋಮಾ ಮಲ್ಟಿಪಲ್ ಸರ್ಜರಿ ಮಾಡಲಾಗಿದೆ ಎಂದು ತಿಳಿಸಿದರು. ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಡಾ. ಕ್ರಾಂತಿಕಿರಣ್ ಮತ್ತು ರಕ್ತನಾಳಗಳ ಟೆಫ್ಲಾನ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆಯನ್ನು ಡಾ. ಶಿವಪ್ಪ ಶೆಟ್ಟರ್ ಸೇರಿದಂತೆ ಡಾ. ವೀರೇಂದ್ರ ಭಸ್ಮಿ, ಡಾ. ಜಗದೀಶ ಬಾರಿಗಿಡದ, ಡಾ. ವಿಜಯ ಯಡಿವಾಳ ಸೇರಿದಂತೆ ಇನ್ನಿತರರು ನಿರ್ವಹಿಸಿದರು.
ಪಾರಿತ್ರೋಮಾ ಮಲ್ಟಿಪಲ್ ಸರ್ಜರಿಗೆ ಕನಿಷ್ಠ ಏನಿಲ್ಲವೆಂದರೂ ರು. 8-10 ಲಕ್ಷ ವೆಚ್ಚವಾಗುತ್ತಿದ್ದು, ಆದರೆ ಬಾಲಾಜಿ ಆಸ್ಪತ್ರೆಗೆ ದಾಖಲಾಗಿದ್ದ ಜಾಫರ್ ಅವರ ಹೆಬ್ಬಳ್ಳಿ ಅವರ ಆರ್ಥಿಕ ಪರಿಸ್ಥಿತಿ ಗಮನಿಸಿ ಅತ್ಯಂತ ಕಡಿಮೆ ಶುಲ್ಕ ಪಡೆಯಲಾಗಿದ್ದು, ಮುಖ್ಯವಾಗಿ ಆಸ್ಪತ್ರೆಯ ವೈದ್ಯಕೀಯ ತಂಡ ಇದನ್ನು ಸವಾಲಾಗಿ ಸ್ವೀಕರಿಸಿ ಏಕಕಾಲದಲ್ಲಿ ವಿವಿಧ ಶಸ್ತ್ರಚಿಕಿತ್ಸೆ ನೆರವೇರಿಸಿ ಯಶಸ್ವಿಯಾಗಿದೆ. ಬಾಲಾಜಿ ನರರೋಗ ವಿಜ್ಞಾನ ಮತ್ತು ಅಪಘಾತ ಚಿಕಿತ್ಸಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ನುರಿತ ವೈದ್ಯಕೀಯ ತಂಡ ಇರುವ ಕಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.