ಪಾಲಿಕೆ ಯಜಮಾನನ ಆಯ್ಕೆಗೆ ಕ್ಷಣಗಣನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 5
ಯಜಮಾನನಿಲ್ಲದ ಮನೆಯಂತಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಐದು ವರ್ಷಗಳ ಕಾಲ ವಾರಸುದಾರರನ್ನು ಆಯ್ಕೆ ಮಾಡಲು ಸುಪ್ರೀಂಕೋರ್ಟ್ ತಥಾಸ್ತು ಎಂದಿದ್ದು, ಇನ್ಮುಂದಾದರೂ 'ನಾಗರಿಕ ಸೌಲಭ್ಯ'ಕ್ಕಾಗಿ ಪರದಾಟ ತಪ್ಪಬಹುದೆ..?
ಇಂತಹದೊಂದು ವಿಶ್ವಾಸಭರಿತ ಪ್ರಶ್ನೆ ಅವಳಿನಗರದ ಸಾರ್ವಜನಿಕ ವಲಯದಲ್ಲಿ ಕೇಳಿ ಬರಲಾರಂಭಿಸಿದೆ. ಪಾಲಿಕೆಗೆ ಚುನಾವಣೆ ನಡೆದು ಸರಿಯಾಗಿ ಒಂದು ವರ್ಷದ ನಂತರ, ಯಜಮಾನ (ಮೇಯರ್-ಉಪಮೇಯರ್) ಆಯ್ಕೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಿದೆ.
ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದ್ದು, ಕುಡಿಯುವ ನೀರಿಗಾಗಿ ಜನತೆ ಪರದಾಡುವ ದೃಶ್ಯ ನಿತ್ಯವೂ ಒಂದಿಲ್ಲೊಂದು ವಾರ್ಡ್ಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದಲ್ಲದೆ, ಸ್ವಚ್ಛತೆ ಎಂಬುದು ಅವಳಿನಗರದಲ್ಲಿ ಸಂಪೂರ್ಣ ಮರೀಚಿಕೆಯಾಗಿದೆ ಎಂದರೆ ಅತಿಶೋಕ್ತಿಯಾಗಲಿಕ್ಕಿಲ್ಲ.
ಬೇಸತ್ತ ಜನತೆ: ಸಾರ್ವಜನಿಕರ ಬೇಕು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಒಂದು ವರ್ಷಗಳ ಕಾಲ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಅಧಿಕಾರಿಗಳ ಕಾರ್ಯವೈಖರಿಯಿಂದ ಶ್ರೀಸಾಮಾನ್ಯರು ಬೇಸತ್ತಿದ್ದಾರೆ. ಅವಳಿನಗರದ ಯಾವುದೊಂದು ಪ್ರದೇಶದಲ್ಲಿ ಪ್ರಾಣ ಸತ್ತು ಬಿದ್ದಿದ್ದರೂ ಅದನ್ನು ಸ್ಥಳಾಂತರಿಸಲು ಅಧಿಕಾರಿ ವರ್ಗ ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗುತ್ತಿರಲಿಲ್ಲ ಎಂದು ಬೈರಿದೇವರಕೊಪ್ಪದ ನಾಗಪ್ಪ ಹೇಮರೆಡ್ಡಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾ. 7ರಿಂದ ಪಾಲಿಕೆಯಲ್ಲಿ ಮತ್ತೆ ಜನಪ್ರತಿನಿಧಿಗಳ ಕಲರವ ಕೇಳಿಬರಲಿದ್ದು, ಶ್ರೀಸಾಮಾನ್ಯರು ಅತ್ಯಂತ ಅವಶ್ಯಕ ಕೆಲಸ ಕಾರ್ಯಗಳಿಗೆ ಅಲೆದಾಡುವುದು ತಪ್ಪಬಹುದಲ್ಲದೆ, ನಾಗರಿಕ ಸೌಲಭ್ಯಗಳು ಎಲ್ಲ ವಾರ್ಡ್ಗಳಿಗೂ ದೊರಕಬಹುದೆಂಬ ವಿಶ್ವಾಸ ಹೇಮರೆಡ್ಡಿ ವ್ಯಕ್ತಪಡಿಸಿದರು.
ಹೊಸಬರೆ ಹೆಚ್ಚು: ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದರೂ ತಮ್ಮ ವಾರ್ಡ್ನ ಜನರ ಆವಶ್ಯಕ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಬಹಳಷ್ಟು ಸದಸ್ಯರಲ್ಲಿ ಕಂಡು ಬಂದಿತು. ಹಳೆಯ ಸದಸ್ಯರಿಗೆ ಈ ಸಮಸ್ಯೆ ಅಷ್ಟಾಗಿ ಬಾಧಿಸಿರಲಿಲ್ಲ.
ಪಾಲಿಕೆ ಆಡಳಿತ ವೈಖರಿ ಅರಿತಿದ್ದ ಹಳೆಯ ಸದಸ್ಯರು, ತಮ್ಮಲ್ಲಿನ ಅನುಭವ ಹಾಗೂ ಅಧಿಕಾರಿಗಳ ಮೇಲೆ ಸಾಧಿಸಿದ್ದ ಹಿಡಿತದ ಪರಿಣಾಮ ಜ್ವಲಂತ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಂಡಿರುವ ಉದಾಹರಣೆಗಳಿಗೂ ಕಮ್ಮಿಯಿಲ್ಲ.
ಹೊಸದಾಗಿ ಪಾಲಿಕೆಗೆ ಆಯ್ಕೆಯಾದ ಸದಸ್ಯರಿಗೆ ತಮ್ಮ ವಾರ್ಡ್ನಲ್ಲಿನ ಅವಶ್ಯಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದುದರಿಂದ ಅನೇಕರು ತಿಂಗಳಾನುಗಟ್ಟಲೇ ವಾರ್ಡ್ನ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಇಣುಕಿಯೂ ನೋಡಿರಲಿಲ್ಲ!
ಜನಪ್ರತಿನಿಧಿಗಳ ಈ ಧೋರಣೆ ಆಯಾ ಪ್ರದೇಶದ ಮತದಾರರಲ್ಲಿ ಸಿಟ್ಟಿಗೇಳುವಂತೆ ಮಾಡಿತ್ತಲ್ಲದೆ, ಕೆಲವರಂತೂ ವಾರ್ಡ್ ಸದಸ್ಯರನ್ನು ಅನೇಕ ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದೂ ಹೆಸರು ಹೇಳಲು ಇಚ್ಛಿಸದ ವಾರ್ಡ್ ಸದಸ್ಯರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಸಮಾಧಾನ: ಚುನಾಯಿತ ಪ್ರತಿನಿಧಿಗಳಿಲ್ಲದ ಒಂದು ವರ್ಷದ ಅವಧಿಯಲ್ಲಿ ಅವಳಿನಗರದಲ್ಲಿ ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಹಾಗೂ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಲ್ಲಿ ಪಾಲಿಕೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಸಹಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ಗಮನಾರ್ಹ.
ಶ್ರೀಸಾಮಾನ್ಯರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ತೀವ್ರ ಅನಾದರ ತೋರುತ್ತಿದ್ದಾರೆ ಎಂದು ಜನತೆ ಬೀದಿಯಲ್ಲಿ ನಿಂತು ಬೊಬ್ಬೆ ಹಾಕಿದ ಪ್ರಸಂಗಗಳೂ ಸಾಕಷ್ಟು ನಡೆದಿದ್ದವು. ಅಂತಹ ಎಲ್ಲ ಸಂದರ್ಭಗಳನ್ನು ಆಯಾ ಇಲಾಖೆಗಳ ಮೇಲಧಿಕಾರಿಗಳೆ ನಿಭಾಯಿಸಿದ್ದರ ಪರಿಣಾಮ, ಬೇಜವಾಬ್ದಾರಿ ಪ್ರದರ್ಶಿಸಿದ ಯಾವೊಬ್ಬ ಅಧಿಕಾರಿ ವಿರುದ್ಧವೂ ಕ್ರಮಕೈಗೊಳ್ಳಲಾಗಿರಲಿಲ್ಲ!!
ನಿರೀಕ್ಷೆಗಳ ಮಹಾಪೂರ
ಮಾ. 7ರಿಂದ ಜನಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸುವ ಮೂಲಕ ಶ್ರೀಸಾಮಾನ್ಯರಿಗೆ ಸೂಕ್ತ ನಾಗರಿಕ ಸೌಲಭ್ಯಗಳನ್ನು ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದಾರೆ ಎಂಬ ಅತಿಯಾದ ನಿರೀಕ್ಷೆಗಳನ್ನು ಅವಳಿನಗರದ 67 ವಾರ್ಡ್ಗಳ ಮತದಾರರು ಹೊಂದಿದ್ದಾರೆ. ಹೊಸದಾಗಿ ಪಾಲಿಕೆಗೆ ಆಯ್ಕೆಯಾಗಿರುವ ಸದಸ್ಯರು ತಮಗೆ ದೊರಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಪಾಲಿಕೆಯಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಲು ಪ್ರಯತ್ನಿಸುವರೇ ಎಂಬುದನ್ನು ಕಾದು ನೋಡಬೇಕಿದೆ. ಪಾಲಿಕೆಯ ಆಡಳಿತ ಚುಕ್ಕಾಣಿ ಯಾವುದೇ ಪಕ್ಷದವರಾದರೂ ಹಿಡಿಯಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಶ್ರೀಸಾಮಾನ್ಯರು ನೆಮ್ಮದಿಯ ಬದುಕು ಬದುವಂತಹ ವಾತಾವರಣ ನಿರ್ಮಿಸಿಕೊಟ್ಟರೆ ಸಾಕು ಎಂಬ ಭಾವನೆ ಅವಳಿನಗರದ ಪ್ರಜ್ಞಾವಂತರದ್ದಾಗಿದೆ.
ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

