ಧಾರವಾಡ

ಗುಜರಾತ್, ಪ.ಬಂಗಾಳ, ತಮಿಳುನಾಡಿಗೆ ಜಯ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 12
ಹುಬ್ಬಳ್ಳಿಯ ಕೆಎಸ್‌ಸಿಎ ಸ್ಟೇಡಿಯಂ ಮತ್ತು ಜಿಮ್‌ಖಾನಾ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ಬುಧವಾರ ನಡೆದ ರಾಷ್ಟ್ರಮಟ್ಟದ 26ನೇ ಅಂಗವಿಕಲರ ಕ್ರಿಕೆಟ್ ಟೂರ್ನಮೆಂಟ್ ಡೆನ್ನಿಸನ್ ಟ್ರೋಫಿಯ ಲೀಗ್ ಪಂದ್ಯಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ, ತಮಿಳುನಾಡು ತಂಡಗಳು ಜಯ ಸಾಧಿಸಿವೆ.
ಪಶ್ಚಿಮ ಬಂಗಾಳ ಮತ್ತು ವಿದರ್ಭ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿದರ್ಭ ತಂಡ 9 ಓವರ್‌ಗಳಲ್ಲಿ 36 ರನ್ ಗಳಿಸಿ, ಆಲೌಟಾಯಿತು. ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ಬಂಗಾಳ ತಂಡ 4 ಓವರ್‌ಗಳಲ್ಲಿ ಗುರಿ ಮುಟ್ಟಿ, 9 ವಿಕೆಟ್‌ಗಳ ಜಯ ಸಾಧಿಸಿತು. ಪಶ್ಚಿಮ ಬಂಗಾಳದ ಗೋಬಿಂದೊ, ಬಬ್ಬನ್ ಸಿಂಗ್, ಅಬ್ದುಲ್ ಖಾಲಿಕ್ ತಲಾ ಎರಡು ವಿಕೆಟ್ ಪಡೆದರೆ ದೇವವ್ರತ ಮತ್ತು ರಫೀಕ್‌ಉಲ್ ಇಸ್ಲಾಂ ತಲಾ ಒಂದು ವಿಕೆಟ್ ಪಡೆದು ವಿದರ್ಭ ತಂಡವನ್ನು 36 ರನ್‌ಗೆ ಕಟ್ಟಿಹಾಕಿದರು.
ಅನಂತರ ನಡೆದ ತಮಿಳುನಾಡು ವಿರುದ್ಧ ನಡೆದ ಲೀಗ್ ಪಂದ್ಯವನ್ನು ಗುಜರಾತ್ ತಂಡ 12 ರನ್‌ಗಳಿಂದ ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ, ಅಸಿಪ್ ಜಲಸ್ವಾರ್ (21) ಮತ್ತು ವೇದಪ್ರಕಾಶ (10) ನೆರವಿನಿಂದ ನಿಗದಿತ 10 ಓವರ್‌ಗಳಲ್ಲಿ 8 ಎಂಟು ವಿಕೆಟ್ ಕಳೆದುಕೊಂಡು 52 ರನ್ ಮಾಡಿತು. ಗುಜರಾತ್ ದಾಳಿಕಾರರಾದ ಅಸಿಫ್ ಜಲಸ್ವಾರ್ ಮತ್ತು ಸಿ. ಸಮೀರ್ ಬಿಗುವಿಗೆ ತತ್ತರಿಸಿದ ತಮಿಳುನಾಡು, 9 ಓವರ್‌ಗಳಲ್ಲಿ 40 ರನ್‌ಗೆ ಆಲೌಟಾಗಿ, ಸೋಲೊಪ್ಪಿಕೊಂಡಿತು.
ಭೋಜನ ವಿರಾಮದ ಬಳಿಕ ಗುಜರಾತ್ ವಿರುದ್ಧ ನಡೆದ ಪಂದ್ಯವನ್ನು ಪಶ್ಚಿಮ ಬಂಗಾಳ 30 ರನ್‌ಗಳಿಂದ ಗೆದ್ದುಕೊಂಡಿತು. ಬಬ್ಬನ್ ಸಿಂಗ್ 31 ರನ್ ಚಚ್ಚಿದರು. ದೇವವ್ರತ 14 ರನ್ ಗಳಿಸಿದರು. ನಿಗದಿತ 10 ಓವರ್‌ಗಳಲ್ಲಿ ಗುಜರಾತ್ 5 ವಿಕೆಟ್ ನಷ್ಟಕ್ಕೆ 75 ರನ್ ಮಾಡಿತು. ಗುಜರಾತ್ 9 ಓವರ್‌ಗಳಲ್ಲಿ 45 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಪಶ್ಚಿಮ ಬಂಗಾಳದ ರಫಿಕ್‌ಉಲ್ ಇಸ್ಲಾಂ ಹಾಗೂ ದೇವವ್ರತ ರಾಯ್ ತಲಾ ಎರಡು ವಿಕೆಟ್ ಗಳಿಸಿ, ಗೆಲುವಿನ ಹಾದಿ ಸುಗಮಗೊಳಿಸಿದರು.
ದಿನದ ಕೊನೆಯಲ್ಲಿ ವಿದರ್ಭ ವಿರುದ್ಧ ನಡೆದ ಪಂದ್ಯವನ್ನು ತಮಿಳುನಾಡು ತಂಡ 47 ರನ್‌ಗಳಿಂದ ಗೆದ್ದುಕೊಂಡಿತು. ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ತಮಿಳುನಾಡು 10 ಓವರ್‌ಗಳಲ್ಲಿ 85 ರನ್ ಕಲೆ ಹಾಕಿತು. ವಿ. ಹರಿ (34), ಎಂ. ಸುಗನೇಶ (15) ಮತ್ತು ಕನ್ನದಾಸನ್ (13) ಉತ್ತಮ ಕೊಡುಗೆ ನೀಡಿದರು. ಬೃಹತ್ ಮೊತ್ತ ಬೆನ್ನತ್ತಿದ ವಿದರ್ಭ 8 ಓವರ್‌ಗಳಲ್ಲಿ 38 ರನ್‌ಗಳಿಗೆ ಮುದುಡಿತು. ತಮಿಳುನಾಡಿನ ಉದಯಕುಮಾರ್ ಮೂರು, ಸುರೇಶಕುಮಾರ್ ಎರಡು ವಿಕೆಟ್ ಪಡೆದು ವಿದರ್ಭದ ಓಟಕ್ಕೆ ಬ್ರೇಕ್ ಹಾಕಿದರು.

ಸರ್ಕಾರದಿಂದ ಚಿಕ್ಕಾಸು ಲಭಿಸಿಲ್ಲ: ವಾಡೇಕರ್

ಹುಬ್ಬಳ್ಳಿ:  ಅಂಗವಿಕಲರ ಕ್ರಿಕೆಟ್‌ಗೆ ಕ್ರೀಡಾ ಸಚಿವಾಲಯದಿಂದ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಫಾರಸು ಮಾಡಿ ಎಂದು 12 ವರ್ಷಗಳಿಂದ ಬಿಸಿಸಿಐ ಅನ್ನು ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಭಾರತೀಯ ಅಂಗವಿಕಲರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜೀತ ವಾಡೇಕರ್ ಹೇಳಿದರು.
ಬುಧವಾರ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಸಿಸಿಐನಿಂದ ಅಂಗವಿಕಲರ ಕ್ರಿಕೆಟ್‌ಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾ ಸಚಿವಾಲಯದ ಮಾನ್ಯತೆ ದೊರಕಿಸಿಕೊಡಲು ಶಿಫಾರಸು ಮಾಡುತ್ತಿಲ್ಲ, ಈ ಕುರಿತು ಶರದ್ ಪವಾರ್, ಜಗಮೋಹನ ಡಾಲ್ಮಿಯಾ, ಎನ್. ಶ್ರೀನಿವಾಸನ್ ಅಧ್ಯಕ್ಷರಾಗಿದ್ದಾಗ ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದೇವೆ, ಆದರೂ ಪ್ರಯೋಜನ ಕಾರಿಯಾಗಿಲ್ಲಎಂದರು.
ನಾವು ಬಿಸಿಸಿಐನಿಂದ ಕೇವಲ ಮಾನ್ಯತೆ ಪಡೆಯಲು ಶಿಫಾರಸು ಕೇಳುತ್ತಿದ್ದೇವೆ ಹೊರತು ಅನುದಾನವನ್ನ್ನು ಅಲ್ಲ.  ಬಿಸಿಸಿಐ ಏಕೆ ಶಿಫಾರಸು ಮಾಡುತ್ತಿಲ್ಲವೆಂಬುದು ತಿಳಿಯದಾಗಿದೆ. 25 ವಸಂತಗಳನ್ನ್ನು ಪೂರೈಸಿರುವ ನಮ್ಮ ಈ ಸಂಸ್ಥೆಗೆ ಸರ್ಕಾರದಿಂದ ಒಂದು ಚಿಕ್ಕಾಸಿನ ಅನುದಾನ್ನ ಲಭಿಸಿಲ್ಲ. ಕೇವಲ ಕಾರ್ಪೊರೇಟ್ ಕಂಪನಿಗಳ ಪ್ರಾಯೋಜಕತ್ವದಿಂದ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾಸಚಿವಾಲಯದ ಮಾನ್ಯತೆ ಲಭಿಸುವುದರಿಂದ ಆಟಗಾರರಿಗೆ ವಿವಿಧ ಸೌಲಭ್ಯ ಸಿಗುವದರ ಜತೆಗೆ ಉದ್ಯೋಗ ಕೋಟಾದಲ್ಲಿ ಶೇ. 6ರಷ್ಟು ಮೀಸಲಾತಿ ದೊರಕಲಿದೆ. ಮುಂದಿನ ವರ್ಷ ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡ ಇಂಗ್ಲೆಡ್ ಪ್ರವಾಸ ಕೈಗೊಳ್ಳುತ್ತಿದೆ. ಅಲ್ಲದೆ ಮುಂಬರುವ ವರ್ಷಗಳಲ್ಲಿ ಅಂಗವಿಕಲರ ಮಿನಿ ವಿಶ್ವಕಪ್ ಸಹ ನಡೆಯಲಿದೆ, ಇದರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶದ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಟೀಮ್ ಇಂಡಿಯಾ ತಂಡಕ್ಕೆ ವಿದೇಶಿ ಕೋಚ್‌ಗಳಿಗಿಂತ ಭಾರತೀಯ ಕೋಚ್‌ಗಳೇ ಉತ್ತಮ. ನಮ್ಮಲ್ಲಿಯೇ ಅಪಾರ ಪ್ರತಿಭಾವಂತ ಹಿರಿಯ ಕ್ರಿಕೆಟ್ ಪಟುಗಳಿದ್ದರೂ ವಿದೇಶಿಯರಿಗೆ ಏಕೆ ಮಣೆ ಹಾಕಬೇಕ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ತರಬೇತುದಾರ ಮಾತ್ರ ಭಾರತೀಯ ಕ್ರಿಕೆಟಿಗರ ಮನಸ್ಥಿತಿಯನ್ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಭಾರತವು ವಿದೇಶಿ ಕ್ರಿಕೆಟ್ ತಂಡಕ್ಕಿಂತ ಭಿನ್ನವಾಗಿದ್ದು. ಭಾರತೀಯ ತಂಡದಲ್ಲಿ ಹಲವಾರು ಭಾಷೆ ಧರ್ಮ ಜಾತಿಯ ಕ್ರಿಕೆಟಿಗರು ಇರುತ್ತಾರೆ, ವಿದೇಶಿ ಕೋಚ್‌ಗಳಿಗೆ ಈ ಕಾರಣದಿಂದ ಕ್ರಿಕೆಟಿಗರನ್ನು ಸಂಭಾಳಿಸುವುದೇ ಕಷ್ಟವಾಗುತ್ತದೆ ಎಂದರು.
ನಮ್ಮಲ್ಲಿ ಸೌರವ ಗಂಗೂಲಿ, ಸುನೀಲ್ ಗಾವಸ್ಕರ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ಪಳಗಿದ ವಿವಿಧ ತರಬೇತುದಾರರಡಿ ಒಂದು ತಂಡದಲ್ಲಿ  ಕ್ರಿಕೆಟ್ ಆಡಿದ ವಿಶ್ವವಿಖ್ಯಾತ ಪಟುಗಳಿದ್ದಾರೆ, ಇವರನ್ನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ, ವಿದೇಶದಲ್ಲಿ ಅವರ ಸಾಧನೆ ಉತ್ತಮವಾಗಿಲ್ಲ ಎಂಬ ಒಂದೇ ಕಾರಣದಿಂದ ಅವರನ್ನ್ನು ಏಕದಿನ ಪಂದ್ಯದ ನಾಯಕತ್ವ ಸ್ಥಾನದಿಂದ ಕೆಳಗಿಳಿಸುವುದು ತರವಲ್ಲ. ಭಾರತೀಯ ತಂಡದ ದೃಷ್ಟಿಯಿಂದ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅವರು ಅತ್ಯುತ್ತಮವಾಗಿ ತಂಡ ನಡೆಸುವದರಿಂದ ಮುಂದಿನ ವಿಶ್ವಕಪ್ ವರೆಗೆ ಅವರು ಭಾರತ ತಂಡದ ನಾಯಕರಾಗಿ ಮುಂದುವರಿಯುವುದು ಸೂಕ್ತ ಎಂದು ವಾಡೇಕರ್ ತಿಳಿಸಿದರು. ಬೌನ್ಸಿ (ಪುಟಿತದ) ಕ್ರಿಕೆಟ್ ಅಂಕಣ ಭಾರತದಲ್ಲಿ ತಯಾರಿಸಬೇಕೆಂದು ವಾದಗಳು ಕೇಳಿಬರುತ್ತಿವೆ. ಆದರೆ ಭಾರತ- ವಿದೇಶದ ಮಣ್ಣಿಗೂ ಸಾಕಷ್ಟು ವ್ಯತಾಸವಿದೆ. ಅಲ್ಲದೆ ಹವಾಗುಣದಲ್ಲೂ ವ್ಯತ್ಯಾಸವಿರುವುದರಿಂದ ಪುಟಿತ ಭಾರತದ ನೆಲದ ಮೇಲೆ ಲಭಿಸುವುದು ಅಸಾಧ್ಯ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.