ಗುಮ್ಮನಲ್ಲ ನೀತಿ ಸಂಹಿತೆ ಬೇಡ ಚಿಂತೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 13
ವಿಧಾನಸಭೆ ಚುನಾವಣೆ ಮುಗಿಸಿ ವರ್ಷದೊಳಗೆ ಲೋಕಸಭೆ ಚುನಾವಣೆ ಎದುರಾಗಿದ್ದು, ಸಾರ್ವಜನಿಕರಿಗೆ ಮತ್ತೆ ನೀತಿ ಸಂಹಿತೆ ಭಯ ಶುರುವಾಗಿದೆ. ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡಬಾರದೆಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ತೀವ್ರವಾಗಿ ಬಿಗಿ ಮಾಡಿತ್ತು. ಆದರೆ, ನೀತಿ ಸಂಹಿತೆಯ ಬಗ್ಗೆ ಸಮರ್ಪಕ ತಿಳಿವಳಿಕೆ ಇಲ್ಲದೆ ಜನರು ಪರದಾಡಿದರು. ಮಗುವಿನ ಹುಟ್ಟುಹಬ್ಬ ಆಚರಿಸಲೂ ಪರವಾನಗಿ ಬೇಕೇ? ಮದುವೆ-ಮುಂಜಿ, ಅಭಿನಂದನಾ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೂ ಅಪ್ಪಣೆ ಪಡೆಯಬೇಕೇ? ಎಂಬ ಗೊಂದಲ ಜನರಲ್ಲಿತ್ತು. ಆದರೆ, ಅಂಥ ಭಯ ಬೇಡ. ಕೆಲವು ನಿಯಮಗಳನ್ನು ಪಾಲಿಸಿದರೆ ಸಾಕು ಎನ್ನುತ್ತಾರೆ, ಧಾರವಾಡ ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಆಯೋಗದ ದಾಳಿ ಭಯದಲ್ಲಿ ಸಮಾರಂಭಗಳನ್ನು ಸಂಭ್ರಮದಿಂದ ಆಚರಿಸಲೇ ಇಲ್ಲ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮದುವೆಗಳು ಜಾಸ್ತಿ. ನೀತಿ ಸಂಹಿತೆ ಕಾರಣಕ್ಕೆ ಹಲವರು ಮದುವೆಯನ್ನೇ ಮುಂದೂಡಿದ ಉದಾಹರಣೆಗಳೂ ಇದ್ದವು. ನಮ್ಮ ಸಂಭ್ರಮ ಕಸಿಯುವ ಚುನಾವಣೆ ಏಕಾದರೂ ಬಂತೋ ಎಂದು ಪರಿತಪಿಸಿದ್ದರು. ಕೆಲವು ನಿಬಂಧನೆಗಳನ್ನು ಪಾಲಿಸಿದರೆ, ಸಾರ್ವಜನಿಕರು ಖಾಸಗಿ ಸಮಾರಂಭಗಳನ್ನು ನಡೆಸಲು ಅಡ್ಡಿ ಇಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಏನು ನಿಯಮಗಳು...?
1. ಮದುವೆ-ಮುಂಜಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಿಲ್ಲ. ಆದರೆ, ಇಂಥ ಸಮಾರಂಭಗಳ ಮೇಲೆ ರಾಜಕೀಯ ಛಾಯೆ ಇರಕೂಡದು.
2. ಸಮಾರಂಭಗಳಲ್ಲಿ ಆಮಂತ್ರಿತರಿಗೆ ಭೋಜನ ವ್ಯವಸ್ಥೆ ಮಾಡಲು ಅಡ್ಡಿ ಇಲ್ಲ. ಇದಕ್ಕೆ ಅನುಮತಿಯೂ ಬೇಕಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಸಮಾರಂಭ, ಸಾಮೂಹಿಕ ಭೋಜನ ವ್ಯವಸ್ಥೆಗೆ ಮಾತ್ರ ಅನುಮತಿ ಇಲ್ಲ. ಅಲ್ಲಿ ಸಣ್ಣ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಬಹುದು.
3. ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ಸಾಮೂಹಿಕ ವಿವಾಹಗಳಿಗೆ ಮುಖ್ಯ ಚುನಾವಣಾಧಿಕಾರಿ ಪರವಾನಗಿ ಕಡ್ಡಾಯ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಪರವಾನಗಿ ನೀಡಲಾಗುವುದು. ಇಂತಹ ಸಮಾರಂಭಗಳಿಗೆ ರಾಜಕೀಯ ನೆರಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಅನುಮತಿ ನೀಡಲಾಗುವುದು.
4. ಸಮಾರಂಭಗಳಿಗೆ ರಾಜಕಾರಣಿ ಅಥವಾ ಅಭ್ಯರ್ಥಿಗಳನ್ನು ಆಮಂತ್ರಿಸಬಹುದು. ಅವರು ಉಳಿದ ಆಮಂತ್ರಿತರಂತೆ ಈ ಸಮಾರಂಭದಲ್ಲಿ ಭಾಗವಹಿಸಿ ಭೋಜನ ಸ್ವೀಕರಿಸಬಹುದು. ವೇದಿಕೆ ಏರಿ ನವದಂಪತಿಗಳನ್ನು ಆರ್ಶೀವದಿಸಬಹುದು. ಆದರೆ, ಯಾವುದೇ ರಾಜಕೀಯ ಪ್ರಚಾರ, ಚರ್ಚೆ ಮಾಡುವಂತಿಲ್ಲ. ವೇದಿಕೆ ಮೇಲೆ ಅವರ ಭಾಷಣ ಅಥವಾ ಸನ್ಮಾನ ನೀತಿ ಸಂಹಿತೆಯ ಉಲ್ಲಂಘನೆ.
5. ಸಾರ್ವಜನಿಕರು ತಮ್ಮ ವ್ಯಾಪಾರ-ವಹಿವಾಟಿನ ಕೆಲಸಗಳಿಗಾಗಿ ಅಗತ್ಯವಿದ್ದಷ್ಟು ಹಣ ಒಯ್ಯಬಹುದು. ಆದರೆ, ಅದರೊಂದಿಗೆ ಅಗತ್ಯ ದಾಖಲೆ ಹೊಂದಿರಬೇಕು.
6. ಈ ಚುನಾವಣೆಯಲ್ಲೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ರಾಜಕೀಯ ವ್ಯಕ್ತಿಗಳ ಅಥವಾ ಅಭ್ಯರ್ಥಿಗಳ ಹಿಂದೆ ವಿಡಿಯೋಗ್ರಾಫರ್ ಹಾಗೂ ಆಯೋಗದ ಅಧಿಕಾರಿಗಳು ಇರುತ್ತಾರೆ. ಅವರು ಅಭ್ಯರ್ಥಿಗಳ ಚಲನ-ವಲನ ಚಿತ್ರೀಕರಣ ಮಾಡಲಿದ್ದಾರೆ.
7. ಧಾರ್ಮಿಕ ಸಮಾರಂಭಗಳಲ್ಲಿ ಉಪನ್ಯಾಸಗಳು ನಡೆದಾಗ ರಾಜಕಾರಣಿ ಅಥವಾ ಅಭ್ಯರ್ಥಿಗಳು ಸಭಿಕರಲ್ಲಿ ಕುಳಿತು ಉಪನ್ಯಾಸ ಕೇಳಬಹುದು. ಆದರೆ, ವೇದಿಕೆ ಏರಿ ಮಾತನಾಡುವಂತಿಲ್ಲ. ವೇದಿಕೆ ಹಂಚಿಕೊಳ್ಳುವಂತಿಲ್ಲ.
8. ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ ಸಭೆ ಏರ್ಪಡಿಸಿದಾಗ ಸಭೆಗೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು. ತಿಂಡಿ, ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡುವಂತಿಲ್ಲ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

