ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಹುಬ್ಬಳ್ಳಿ: ಹೊಟ್ಟೆ ನೋವು ತಾಳದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಹೊಸಗಬ್ಬೂರದ ಸದಾನಂದ ಬಸವರಾಜ ಮೆಣಸಿನಕಾಯಿ (28) ಎಂಬ ವ್ಯಕ್ತಿ ಹೊಟ್ಟೆ ನೋವಿನಿಂದಾಗಿ ಜೀವನ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬಸವರಾಜನನ್ನು ಕಿಮ್ಸ್ಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ ಶುಕ್ರವಾರ ಮೃತಪಟ್ಟಿದ್ದಾರೆ ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಕಚೇರಿ ಸಾಮಗ್ರಿ ಕಳ್ಳತನ
ಹುಬ್ಬಳ್ಳಿ: ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ನಲ್ಲಿರುವ ಕಮಾನಗಾರ ಬಿಲ್ಡಿಂಗ್ನಲ್ಲಿರುವ ನ್ಯಾಯವಾದಿಯೊಬ್ಬರ ಕಚೇರಿಯಲ್ಲಿನ ಕಂಪ್ಯೂಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಮಾನಗಾರ ಬಿಲ್ಡಿಂಗ್ನಲ್ಲಿರುವ ಕೆ.ಎಂ. ಪೈಕೋಟಿ ಅವರ ಕಚೇರಿಯಲ್ಲಿ ಇರಿಸಿದ್ದ ಕಂಪ್ಯೂಟರ್, ಎರಡು ಸಿಪಿಯು ಮತ್ತು ಟೈಪ್ರೈಟರ್ಗಳನ್ನು ಕಳ್ಳತನ ಮಾಡಲಾಗಿದೆ.
ಇಂದು ಸಂವಾದ
ಧಾರವಾಡ: ವಿದ್ಯಾವರ್ಧಕ ಸಂಘದಲ್ಲಿ ಮಾ. 22ರ ಬೆಳಗ್ಗೆ 10.30ಕ್ಕೆ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಡಾ. ಸೋಮಶೇಖರ ಇಮ್ರಾಪುರ ವಹಿಸಲಿದ್ದು, ಸಂವಾದದಲ್ಲಿ ಡಾ. ವಿ.ಎಲ್. ಪಾಟೀಲ, ಡಾ. ಎಚ್. ಟಿ. ಪೋತೆ, ಡಾ. ಕೆ.ಆರ್. ದುರ್ಗಾದಾಸ್, ಡಾ. ಡಿ.ಎಂ. ಹಿರೇಮಠ, ಡಾ. ಶಿವಾನಂದ ಗುಬ್ಬಣ್ಣವರ, ಡಾ. ಜೆ.ಎಂ. ನಾಗಯ್ಯ, ಡಾ. ಶಶಿಧರ ತೋಡ್ಕರ, ಪಾರ್ವತೆವ್ವ ಹೊಂಗಲ, ಡಾ. ಜಿನದತ್ತ ಹಡಗಲಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಳೆ ಕಾವ್ಯ ವಾಚನ
ಧಾರವಾಡ: ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾ. 23ರ ಬೆಳಗ್ಗೆ 10.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿರಿಗನ್ನಡ ಪುಸ್ತಕ ಮಳಿಗೆಯ ಆಶ್ರಯದಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಕಾವ್ಯ ವಾಚನ-ಮಂಥನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಕನ್ನಡ ಸಂಪದ
ಧಾರವಾಡ: ಇಲ್ಲಿಯ ಕಿಟೆಲ್ ಕಲಾ ಕಾಲೇಜಿನಲ್ಲಿ ಕನ್ನಡ ಸಂಪದ ಕಾರ್ಯಕ್ರಮ ಮಾ. 22ರ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಅತಿಥಿಗಳಾಗಿ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪ್ರೊ. ಎ.ಜಿ. ಸಬರದ, ಪ್ರಾಚಾರ್ಯ ಡಾ.ಎಂ.ಜೆ. ಪುನೀತ, ಕವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವೃಷಭೇಂದ್ರ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ನಾಳೆ ಶಾಸ್ತ್ರಿ ಪ್ರಶಸ್ತಿ ಪ್ರದಾನ
ಧಾರವಾಡ: ಇಲ್ಲಿಯ ಜಯನಗರ ಬಳಿ ಲಾಲ್ಬಹಾದ್ದೂರ ಶಾಸ್ತ್ರಿ ನ್ಯಾಶನಲ್ ವೆಲ್ಫೇರ್ ಟ್ರಸ್ಟ್ ಆವರಣದಲ್ಲಿ ಮಾ. 23ರ ಬೆಳಗ್ಗೆ 11ಕ್ಕೆ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಲಾಲ್ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಕಲ್ಯಾಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಪ್ರಶಸ್ತಿಯನ್ನು ಗದಗಿನ ಪಂ. ಪಂಚಾಕ್ಷರಿ ಗವಾಯಿಗಳ ಮತ್ತು ಡಾ. ಪುಟ್ಟರಾಜ ಗವಾಯಿಗಳ ಸಂಸ್ಥೆ ವೀರೇಶ್ವರ ಪುಣ್ಯಾಶ್ರಮಕ್ಕೆ ನೀಡಲಾಗುವುದು. ಅತಿಥಿಗಳಾಗಿ ನಿವೃತ್ತ ಆದಾಯ ತೆರಿಗೆ ಆಯುಕ್ತ ಎನ್.ಪಿ. ಭಟ್, ಕವಿವಿ ಸಿಂಡಿಕೇಟ್ ಸದಸ್ಯ ಶಂಕರ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ, ಮೇಘರಾಜ ಮುಂತಾದವರು ಆಗಮಿಸುವರು.
ಆರೋಪಿಗಳ ಸೆರೆಗೆ ಆಗ್ರಹ
ಧಾರವಾಡ: ನ್ಯಾಯವಾದಿ ಹಾಗೂ ಹೊನ್ನಾಪುರ ಗ್ರಾಪಂ ಸದಸ್ಯ ಬಿ.ಐ. ದೊಡಮನಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಬೇಕು ಎಂದು ಇಲ್ಲಿನ ಸಾಮಾಜಿಕ ಸೇವಾ ಸಂಸ್ಥೆ ಆಗ್ರಹಿಸಿದೆ. ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳೆ ಖುದ್ದಾಗಿ ವಿಶೇಷ ತಂಡ ರಚಿಸಬೇಕು ಎಂದು ಪ್ರಕಾಶ ಕಲಾಲ, ಶೇಖರ ಕಲಾಲ, ವಿನಾಯಕ ಜಾಧವ, ಉಮೇಶ ನರಗುಂದ, ತೇಜಸ್ ದೊಡಮನಿ, ಪ್ರಕಾಶ ಬೆನ್ನಿಹಳ್ಳಿ, ನಯನ ದೊಡಮನಿ, ರಾಮಣ್ಣ ಹರಿಜನ ಮತ್ತಿತರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

