ಅನೈತಿಕ ಸಂಬಂಧ: ಸಿದ್ದಲಿಂಗ ಸ್ವಾಮೀಜಿ ಹೊರದಬ್ಬಿದ ಭಕ್ತರು
-ರವಿ ಬಡಿಗೇರ
ಕನ್ನಡಪ್ರಭ ವಾರ್ತೆ, ಕಲಘಟಗಿ, ಮಾ. 23
ತಾಲೂಕಿನ ಸುಕ್ಷೇತ್ರ ಬು. ಹೂಲಿಕಟ್ಟಿ ಶೈಲೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರ ರಾಸಲೀಲೆ ಕಂಡ ಭಕ್ತರು, ವಿವಾಹಿತ ಪ್ರೇಯಸಿಯೊಂದಿಗೆ ಅವರನ್ನು ಹೊರದಬ್ಬಿದ್ದಾರೆ.
ಕಲಘಟಗಿ-ತಡಸ ರಸ್ತೆಯಲ್ಲಿ 15 ಕಿ.ಮೀ. ದೂರದಲ್ಲಿರುವ ಬು. ಹೂಲಿಕಟ್ಟಿ ಗ್ರಾಮದ ಶೈಲೇಶ್ವರ ಮಠದ ಆವರಣದಲ್ಲಿ ಸ್ವಾಮಿಗಳ ನಿವಾಸವಿದೆ. ಹಲವು ಸಮಯದಿಂದ ಸ್ವಾಮೀಜಿ ಓರ್ವ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಭಾನುವಾರ ಬೆಳಗ್ಗೆ ಅವರ ರಾಸಲೀಲೆ ಕಂಡು ಆಕ್ರೋಶಗೊಂಡ ಭಕ್ತರು, ಕೂಡಿಹಾಕಿ ಥಳಿಸಲು ಮುಂದಾದರು. ಮಠದ ಕಿಟಕಿ ಗಾಜುಗಳನ್ನು ಒಡೆದರು. ಸುದ್ದಿ ತಿಳಿದ ಗ್ರಾಮಸ್ಥರು, ಪೊಲೀಸರು ಸ್ಥಳಕ್ಕೆ ಆಗಮಿಸಿ, ಆಕ್ರೋಶಿತರನ್ನು ಸಮಾಧಾನಪಡಿಸಿದರು.
ಆಗ ಸ್ವತಃ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯೇ ಭಕ್ತರ ಸಮ್ಮುಖದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡರಲ್ಲದೆ, ಪ್ರೇಯಸಿಯೊಂದಿಗೆ ಮಠದಿಂದ ಹೊರಹೋಗುವುದಾಗಿ ಹೇಳಿದರು ಎಂದು ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆ ವರದಿಗಾರರಿಗೆ ಪ್ರತ್ಯಕ್ಷದರ್ಶಿಗಳು ಹೇಳಿದರು.
ಶ್ರೀ ವೀರತಪಸ್ವಿ ಗುರು ಜಠಾಧಾರಿ ಸ್ವಾಮೀಜಿ ಸ್ಥಾಪಿಸಿದ ಮಠದ ಗೌರವ ಈಗಿನ ಸ್ವಾಮಿಯಿಂದ ಹಾಳಾಗಿದೆ. ಸಹಸ್ರಾರು ಜನರ ಭಕ್ತಿ, ವಿಶ್ವಾಸಕ್ಕೆ ಕಳಂಕ ಉಂಟಾಗಿದೆ ಎಂದು ಮಠದ ಭಕ್ತ ಡಾ. ಜಕ್ಕನಗೌಡರ, ಜಿಪಂ ಮಾಜಿ ಸದಸ್ಯ ಸಿ.ಎಫ್. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಮುಂಡಗೋಡದ ವೇ.ಮೂ. ರುದ್ರಮುನಿ ಸ್ವಾಮಿಗಳು, ಕುಂದಗೋಳದ ಪಂಚಹಿರೇಮಠದ ಸ್ವಾಮಿಗಳು, ಸುತ್ತಲಿನ ಗಣ್ಯರೊಂದಿಗೆ ಚರ್ಚಿಸಿದ್ದು, ಕ್ಷಮೆಯಾಚಿಸಿದ ಸ್ವಾಮಿಯನ್ನು ಸ್ವಗ್ರಾಮ ಮುಂಡಗೋಡ ತಾಲೂಕಿನ ಸನವಳ್ಳಿಗೆ ಕಳುಹಿಸಲಾಗಿದೆ. ಮಾ. 24ರಂದು ಭಕ್ತರು ಮತ್ತೆ ಸಭೆ ಸೇರಿ, ಮಠದ ಕುರಿತು ಚಿಂತನೆ, ಚರ್ಚೆ ಮಾಡುವುದಾಗಿ ಹೇಳಿದರು.
ಮಠದ ಹಿನ್ನ್ನೆಲೆ
ಇಲ್ಲಿನ ಮಠ ಸ್ಥಾಪಿಸಿದವರು ಶ್ರೀ ಗುರು ಜಠಾಧಾರಿ ಸ್ವಾಮಿಗಳು. ಅವರ ಜನ್ಮ ಮತ್ತು ಪೂರ್ವಾಶ್ರಮದ ತಂದೆ - ತಾಯಿಗಳ ವಿಷಯವಾಗಿ ಯಾರಿಗೂ ತಿಳಿದಿಲ್ಲ. ಅವರು ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಬಲ್ಲವರಾಗಿದ್ದರು. ಉತ್ತರ ಭಾರತದ ಎಲ್ಲ ಕ್ಷೇತ್ರಗಳಲ್ಲಿ ಸಂಚರಿಸಿ, ತಪಸ್ಸು ಆಚರಿಸಿ, ಬು. ಹುಲಿಕಟ್ಟಿ ಗ್ರಾಮಕ್ಕೆ ಬಂದು ನೆಲೆಸಿದರು. ಇಲ್ಲಿಯ ಗುಡ್ಡ ಅಗೆಸಿ ಒಂದು ಶಿವಲಿಂಗ ತೆಗೆಸಿದರು. ಆ ಲಿಂಗಕ್ಕೆ ಶೈಲೇಶ್ವರ ಲಿಂಗವೆಂಬ ನಾಮಕರಣ ಮಾಡಿದರು. ಭಕ್ತರೊಡಗೂಡಿ ಅದನ್ನು ಪ್ರತಿಷ್ಠಾಪಿಸಿ, ಒಂದು ದೇವಾಲಯ್ನ ನಿರ್ಮಿಸಿಕೊಂಡು ಅಲ್ಲಿಯೇ ಇರತೊಡಗಿದರು. ಅವರು ಜಟಾಮುಕುಟ ಧಾರಿಗಳಾಗಿದ್ದರಿಂದ ಜನರು ಜಠಾಧಾರಿ ಸ್ವಾಮಿಗಳೆಂದೇ ಕರೆಯತೊಡಗಿದರು.
ತಮ್ಮ ಬದುಕಿನ 30 ವರ್ಷಗಳ ವರೆಗೆ ಲೋಕಕಲ್ಯಾಣ ಕಾರ್ಯ್ನ ಮಾಡಿದ್ದಾರೆ. ಇವರು ಆ ಶೈಲೇಶ್ವರ ಲಿಂಗ ಮಂದಿರದ ಪಕ್ಕದಲ್ಲಿಯೇ ಒಂದು ಮಠ ನಿರ್ಮಿಸಿಕೊಂಡಿದ್ದರಿಂದ ಆ ಮಠಕ್ಕೆ ಶೈಲೇಶ್ವರ ಮಠವೆಂದೇ ಜನರು ಕರೆಯತೊಡಗಿದರು. ಅವರು ತಮ್ಮ ಕಾಲಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿ ಜನರ ಆದರಕ್ಕೆ ಪಾತ್ರರಾದರು. 1958ರಲ್ಲಿ ಅವರು ಬು. ಹುಲಿಕಟ್ಟಿಯ ಶೈಲೇಶ್ವರ ಮಠದಲ್ಲಿಯೇ ಲಿಂಗೈಕ್ಯರಾದರು.
ಅವರು ಲಿಂಗೈಕ್ಯರಾದ ಬಳಿಕ ಈ ಮಠಕ್ಕೆ ಒಂದು ಪರಂಪರೆ ರೂಢಿಸಿಕೊಳ್ಳುವ ಉದ್ದೇಶದಿಂದ ಭಕ್ತಾದಿಗಳು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ವೀರಗೋತ್ರದ ಮಹೇಶ್ವರ ಮೂರ್ತಿಗಳಾದ ಶ್ರೀ ವೇ.ಮೂ.ಅಜ್ಜಯ್ಯಸ್ವಾಮಿ ಚ. ಹಿರೇಮಠ, ಮಹಾದೇವಮ್ಮ ದಂಪತಿ ಪುತ್ರ ಶ್ರೀ ಸಿದ್ದಲಿಂಗ ಎಂಬ ವಟುವನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದರು. 15 ಮಾರ್ಚ್ 2002ರಂದು ಅವರಿಗೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪಟ್ಟಾಧೀಕ್ಷಕರಿಂದ ಪಟ್ಟಾಧಿಕಾರವೂ ನೆರವೇರಿತು. ಆಗ ಅವರಿಗೆ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಎಂಬ ನಾಮಕರಣ ಮಾಡಿದರು.
ಭಕ್ತರು, ಜನಪ್ರತಿನಿಧಿಗಳು ಸೇರಿ ಮಠಕ್ಕೆ ಸಭಾಭವನ ನಿರ್ಮಿಸಿಕೊಟ್ಟಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 4-6 ವರ್ಷಗಳಿಂದ ಈ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯ ಅನೈತಿಕ ಕೃತ್ಯದಿಂದಾಗಿ ಮಠದ ಘನತೆ ಗೌರವ ಹಾಳಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

