ಧಾರವಾಡ

ಆಮ್ ಆದ್ಮಿ ಟಿಕೆಟ್‌ಗೆ ಒಳಒಪ್ಪಂದ: ಶೈಲೇಂದ್ರಕುಮಾರ ಆರೋಪ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 25
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಟಿಕೆಟ್ ನೀಡುವಲ್ಲಿ ಒಳ ಒಪ್ಪಂದ ನಡೆದಿದೆ. ರಾಜ್ಯದಾದ್ಯಂತ ಸಿರಿವಂತರಿಗೆ ಮಾತ್ರ ಪಕ್ಷದ ಟಿಕೆಟ್ ನೀಡಲಾಗಿದೆ ಎಂದು ಧಾರವಾಡ ಲೋಕಸಭೆ ಕ್ಷೇತ್ರದ ಆಮ್ ಆದ್ಮಿ ಬಂಡಾಯ ಅಭ್ಯರ್ಥಿ ಶೈಲೇಂದ್ರಕುಮಾರ ಪಾಟೀಲ ದೂರಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿರುವ ತಮಗೆ ಟಿಕೆಟ್ ನಿರಾಕರಿಸಲಾಗಿದೆ. 1.50 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಅಭಿಯಾನದ ಮೂಲಕ ಮಾಡಿರುವ ತಮಗೆ ಕ್ಷೇತ್ರದಾದ್ಯಂತ ಜನಬೆಂಬಲ ಇದೆ ಎಂದು ಹೇಳಿದರು. ಪಕ್ಷದ ನಿಯಮಗಳನ್ನು ಗಾಳಿಗೆ ತೂರಿ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಪಕ್ಷದ ಈ ನಡವಳಿಕೆ ಅಸಮಾಧಾನಗೊಂಡ ತಾವು ಈಗಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇವೆ. ರಾಜೀನಾಮೆಯನ್ನು ಇದುವರೆಗೂ ಅಂಗೀಕರಿಸದ ಪಕ್ಷದ ಮುಖಂಡರು, ರಾಜಿನಾಮೆ ಹಿಂಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ತಾವು ರಾಜೀನಾಮೆ ಪತ್ರವನ್ನಾಗಲಿ ಹಾಗೂ ನಾಮಪತ್ರವನ್ನಾಗಲಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು. ಆಮ್ ಆದ್ಮಿ ಪಕ್ಷ ಲೋಕಸಭೆಗೆ ಸ್ಪರ್ಧಿಸಲು ಅರ್ಜಿ ಆಹ್ವಾನಿಸಿದ್ದಾಗ ತಾವು ಪಕ್ಷದ ನಿಯಮಗಳನ್ವಯ ಅರ್ಜಿ ಸಲ್ಲಿಸಿದ್ದು, ಕೇಂದ್ರದ ಮುಖಂಡರು ತನ್ನನ್ನು ಯೋಗ್ಯ ಅಭ್ಯರ್ಥಿಯೆಂದು ತೀರ್ಮಾನಿಸಿದ್ದರು. ಆದರೆ ಆಪ್ ರಾಜ್ಯ ಸಂಚಾಲಕ ಸಿದ್ಧಾರ್ಥ ಶರ್ಮಾ ಅವರು ಹೇಮಂತಕುಮಾರ ಪಾಂಚಾಳ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ತನಗೆ ಅನ್ಯಾಯ ಮಾಡಿದರು ಎಂದು ಆಪಾದಿಸಿದರು. ರೈತ ಮುಖಂಡ ಶಿವನಗೌಡ ಪಾಟೀಲ ಈ ಸಂದರ್ಭದಲ್ಲಿ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.