ಧಾರವಾಡ

ಕಾಂಗ್ರೆಸ್ ಅಧಿಕಾರಾವಧಿಯಲ್ಲೇ ಮತೀಯ ಗಲಭೆ: ಎಂ.ಕೆ. ಚಿಸ್ತಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 26
ಐವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ದೇಶಾದ್ಯಂತ 11 ಸಾವಿರಕ್ಕೂ ಹೆಚ್ಚು ಮತೀಯ ಗಲಭೆಗಳು ಸಂಭವಿಸಿ, ಮುಸ್ಲಿಮರು ಶೋಷಣೆಗೊಳಗಾಗಿದ್ದರು ಎಂದು ಗುಜರಾತ್ ಹಜ್ ಕಮಿಟಿ ಚೇರ್‌ಮನ್ ಸೂಫಿ ಎಂ.ಕೆ. ಚಿಸ್ತಿ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ವತಿಯಿಂದ ಬುಧವಾರ ಸಂಜೆ ನಗರದ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೋದಿ ಮತ್ತು ಮುಸ್ಲಿಂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ಕಾಂಗ್ರೆಸ್ ಈವರೆಗೂ ಆಡಳಿತ ರುಚಿ ಕಂಡಿದೆ. ಕಾಂಗ್ರೆಸ್‌ನ್ನು ಮನಸಾರೆ ಒಪ್ಪಿ ತ್ಯಾಗ, ಬಲಿದಾನ ಹಾಗೂ ಮತ ನೀಡಿ ಪೋಷಿಸುತ್ತ ಬಂದಿರುವ ಮುಸ್ಲಿಮರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಲು ಯಾವೊಂದು ಕಾರ್ಯಕ್ರಮ ಕಾಂಗ್ರೆಸ್ ರೂಪಿಸಿಲ್ಲ ಎಂದೂ ಎಂ.ಕೆ. ಚಿಸ್ತಿ ಕಿಡಿಕಾರಿದರು.
ಮುಸ್ಲಿಂ ಬಾಂಧವರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಸ್ಥಾನಮಾನ, ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದ ಕಾಂಗ್ರೆಸ್ ಕೇವಲ ಮತಕ್ಕಾಗಿ ಉಪಯೋಗಿಸಿಕೊಂಡಿದೆ. ಇದನ್ನು ಪ್ರತಿಯೊಬ್ಬ ಮುಸ್ಲಿಮರು ಸೂಕ್ಷ್ಮವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂದರು.
ಗೋಧ್ರಾ ಘಟನೆಯೊಂದೇ?: 2002ರಲ್ಲಿ ಗುಜರಾತ್‌ನಲ್ಲಿ ನಡೆದಿರುವ ಹತ್ಯಾಕಾಂಡ ಘಟನೆ ಪದೇ ಪದೆ ಹೇಳುವ ಮೂಲಕ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. 2007ರಲ್ಲಿ ಮತ್ತೊಮ್ಮೆ ಗುಜರಾತ್ ರಾಜ್ಯ ಹೊತ್ತಿ ಉರಿಯುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿತ್ತು.
ಈ ಸಂದರ್ಭದಲ್ಲಿ ಸಿಎಂ ಆಗಿದ್ದ ಮೋದಿ, ವಿವಿಧ ಹಿಂದು ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿದ್ದರು. ಮೋದಿ ರಾಜಕೀಯ ಗದ್ದುಗೆ ಏರಲು ಇದನ್ನು ಉಪಯೋಗಿಸಿಕೊಂಡಿದ್ದರೆ ಹಿಂದುತ್ವದ ಆಧಾರದ ಮೇಲೆ ಗೆದ್ದು ಬರುವಲ್ಲಿ ಆಶ್ಚರ್ಯವೇ ಇರಲಿಲ್ಲ. ಆದರೆ, ಮೋದಿಯೊಬ್ಬರೆ ಇದನ್ನು ಬಲವಾಗಿ ವಿರೋಧಿಸಿದರಲ್ಲದೆ, 4-5 ದಿನಗಳಲ್ಲಿ ಪರಿಸ್ಥಿತಿಯನ್ನು ತಹಂಬದಿಗೆ ತಂದು ಶಾಂತಿ ನೆಲೆಸುವಂತೆ ಪ್ರಯತ್ನಿಸಿದ್ದರು ಎಂದು ಚಿಸ್ತಿ ನೆನಪಿಸಿಕೊಂಡರು.
ಇಡೀ ಗುಜರಾತನಲ್ಲಿ ಮುಸ್ಲಿಮರು ಶೇ. 9ರಷ್ಟಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯುವಂತೆ ಮೋದಿ ಅನುಕೂಲ ಮಾಡಿಕೊಟ್ಟಿದ್ದಾರಲ್ಲದೆ, ಶೇ. 9ರಷ್ಟು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸಿದ್ದಾರೆ. ಇಂತಹ ಪಕ್ಷ ಹಾಗೂ ನಾಯಕ ಮುಸ್ಲಿಂ ವಿರೋಧಿಯೇ ಎಂದು ಚಿಸ್ತಿ ಪ್ರಶ್ನಿಸಿದರು.
ದೇಶದ ವಿವಿಧ ಜೈಲುಗಳಲ್ಲಿ ಶೇ. 40ರಷ್ಟು ಮುಸ್ಲಿಂ ಬಾಂಧವರು ಕೊಳೆಯುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಚಿಸ್ತಿ, ಶಿಕ್ಷಣ, ನಿರುದ್ಯೋಗ, ಬಡತನ, ಹಸಿದ ಹೊಟ್ಟೆಗೆ ಊಟ, ಆರೋಗ್ಯಕ್ಕೆ ಔಷಧಿ ಗಿಟ್ಟಿಸಿಕೊಳ್ಳಲು ಕೆಲವರು ಕಳ್ಳತನದಂತಹ ಕೃತ್ಯದಲ್ಲಿ ತೊಡಗಿಸಿಕೊಂಡು ಜೈಲುವಾಸ ಅನುಭವಿಸುವಂತಾಗಿದೆ. ಮುಸ್ಲಿಂರ ಹಿತಕಾಪಾಡುವ ಏಕೈಕ ಪಕ್ಷವಾಗಿ ಇಂದು ಬಿಜೆಪಿ ಉಳಿದುಕೊಂಡಿದೆ. ನಾವೆಲ್ಲರೂ ಬಿಜೆಪಿಗೆ ಬೆಂಬಲಿಸಿದ್ದಲ್ಲಿ ನಮ್ಮ ರಾಜಕೀಯ ಶಕ್ತಿ ಏನು ಎಂಬುದು ತೋರಿಸಿಕೊಡಬೇಕು. ಆ ಮೂಲಕ ರಾಜಕೀಯ ಶಕ್ತಿ ಪ್ರದರ್ಶಿಸಬೇಕಿದೆ ಎಂದೂ ಚಿಸ್ತಿ ಅಭಿಪ್ರಾಯಪಟ್ಟರು. ಮೂರು ತಲೆಮಾರಿನಿಂದ ಮುಸ್ಲಿಂರ ಮತಗಳನ್ನು ಪಡೆದು ಅನ್ಯಾಯ ಮಾಡುತ್ತಲೇ ಬಂದಿರುವ ಕಾಂಗ್ರೆಸ್‌ಗೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಪಾಠ ಕಲಿಸಬೇಕಿದೆ ಎಂದರು.
ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ. ಎಲ್.ಎಫ್. ಮೋಹಸಿನ್, ಮೋಹನಲಾಲ ಜೈನ್, ಮುಕ್ತಿಯಾರ್ ಪಠಾಣ, ಕೆ.ಎಂ. ಇಬ್ರಾಹೀಂ, ಇಮ್ತಿಯಾಜ್ ಮುಲ್ಲಾ, ರಂಗಾ ಬದ್ದಿ ಮುಂತಾದವರು ಉಪಸ್ಥಿತರಿದ್ದರು.

ಅಯೋಧ್ಯೆ: ಕೋರ್ಟ್ ಕಟಕಟೆಯಲ್ಲಿ
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೀರೋ ಅಥವಾ ಮಸೀದಿ ನಿರ್ಮಾಣ ಮಾಡುತ್ತಿರೋ ಎಂದು ಸಂವಾದದಲ್ಲಿ ತೂರಿ ಬಂದ ಪ್ರಶ್ನೆಗೆ ಉತ್ತರಿಸಿದ ಚಿಸ್ತಿ, ಈ ವಿಷಯ ಸದ್ಯ ನ್ಯಾಯಾಲಯದಲ್ಲಿದೆ. ಮೋದಿ, ಎಲ್ಲ ಜಾತಿ, ಮತ, ಧರ್ಮದವರನ್ನು ಒಟ್ಟಿಗೆ ಸೇರಿಸಿಕೊಂಡು ಹೋಗುವ ವಿಶ್ವಾಸ ತಮಗಿದೆ ಎಂದರು.
ರಾಜಕೀಯವಾಗಿ ಮುಸ್ಲಿಂರು ಬೆಳೆದಿಲ್ಲ
ಧಾರವಾಡ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ಇರಲು ಕಾರಣವೇನು? ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಈವರೆಗೂ ಕಾಂಗ್ರೆಸ್‌ಗೆ ಮತ ನೀಡುತ್ತ ಬಂದಿದ್ದಾರೆ. ಆದ್ದರಿಂದ ನಾವು ರಾಜಕೀಯವಾಗಿ ಅಷ್ಟೊಂದು ಬೆಳೆದಿಲ್ಲ. ಅಲ್ಲದೆ, ಮುಸ್ಲಿಮರಲ್ಲಿ ಗೆಲ್ಲುವಂತಹ ಅಭ್ಯರ್ಥಿಯೂ ಮುಖ್ಯ. ಈ ನಿಟ್ಟಿನಲ್ಲಿ ನಾವು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತ ಬಿಜೆಪಿಗೆ ನೀಡುವ ಮೂಲಕ ರಾಜಕೀಯವಾಗಿ ಮುನ್ನಗ್ಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.