3 ದಶಕವಾದ್ರೂ ಮಂತ್ರಿ ಭಾಗ್ಯವಿಲ್ಲ
-ಬಸವರಾಜ ಹಿರೇಮಠ
ಧಾರವಾಡ: ಬುದ್ಧಿಜೀವಿಗಳ ನಾಡು, ಶೈಕ್ಷಣಿಕ ನಗರಿ ಧಾರವಾಡ ಲೋಕಸಭಾ ಕ್ಷೇತ್ರ ಮೂರು ದಶಕಗಳಿಂದ ಕೇಂದ್ರದಲ್ಲಿ ಸಚಿವ ಸ್ಥಾನದಿಂದ ವಂಚಿತವಾಗಿದೆ.
ಸತತವಾಗಿ ನಾಲ್ಕು ಬಾರಿ ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ಸರೋಜಿನಿ ಮಹಿಷಿ, ಧಾರವಾಡ ಲೋಕಸಭಾ ಕ್ಷೇತ್ರದ ಕೊನೆಯ ಸಚಿವೆ. 1982ರಿಂದ ಈಚೆಗೆ 32 ವರ್ಷಗಳ ಅವಧಿಯಲ್ಲಿ ಆಯ್ಕೆಯಾಗಿರುವ ಲೋಕಸಭಾ ಸದಸ್ಯರಿಗೆ ಸಚಿವ ಸ್ಥಾನ ಲಭಿಸಿಲ್ಲ.
1952ರಲ್ಲಿ ಮುಂಬೈ ಕರ್ನಾಟಕದ ಆಡಳಿತದಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಡಿ.ಪಿ. ಕರಮರಕರ ಅವರು ನೆಹರು ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದರು. 1957ರ ಚುನಾವಣೆಯಲ್ಲಿ ಕರಮರಕರ ಪುನರಾಯ್ಕೆಯಾಗಿ, ಮಂತ್ರಿ ಸ್ಥಾನವೂ ಲಭಿಸಿತ್ತು. 1962, 1967, 1971 ಹಾಗೂ 1977ರಲ್ಲಿ ಕಾಂಗ್ರೆಸ್ ಸಂಸದೆಯಾಗಿ ಆಯ್ಕೆಯಾದ ಸರೋಜಿನಿ ಮಹಿಷಿ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಆಮೇಲೆ 1982ರಿಂದ 2009ರ ವರೆಗೂ ನಡೆದ ಚುನಾವಣೆಗಳಲ್ಲಿ ಆಯ್ಕೆಯಾದ ಸದಸ್ಯರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂಬುದು ಸೋಜಿಗದ ಸಂಗತಿ.
ನಾಲ್ಕು ಬಾರಿ ಗೆದ್ದರೂ ಸಚಿವರಾಗಿಲ್ಲ: ಸರೋಜಿನಿ ಮಹಿಷಿ ಕಾಂಗ್ರೆಸ್ ಬಿಟ್ಟು ಜನತಾ ಪಕ್ಷ ಸೇರಿದ ಪರಿಣಾಮ ಕಾಂಗ್ರೆಸ್ಸಿನಿಂದ ಡಿ.ಕೆ. ನಾಯ್ಕರ್ ಸ್ಪರ್ಧಿಸಬೇಕಾಯಿತು. ಸರೋಜಿನಿ ಮಹಿಷಿಗಿಂತ ಶೇ. 10ರಷ್ಟು ಹೆಚ್ಚು ಮತ ಪಡೆದು ಗೆದ್ದೂ ಬಿಟ್ಟರು. 1982ರಿಂದ 1991ರ ವರೆಗೆ ಡಿ.ಕೆ. ನಾಯ್ಕರ ನಿರಂತರವಾಗಿ ನಾಲ್ಕು ಬಾರಿ ಆರಿಸಿ ಬಂದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್‌ನದ್ದೇ ಆಡಳಿತವಿತ್ತು. ಡಿ.ಕೆ. ನಾಯ್ಕರ ಲೋಕಸಭೆಗೆ ಹೋಗುವ ಮುಂಚೆ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಹಾಗೂ ಕಾನೂನು ಮತ್ತು ಸಂಸದೀಯ ಆಡಳಿತ ಸಚಿವರಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಅರ್ಹತೆ ಇದ್ದರೂ ನಾಯ್ಕರ್‌ಗೆ ಕೆಲವು ಹಿತಾಸಕ್ತಿಗಳ ವ್ಯವಸ್ಥಿತ ಸಂಚಿನಿಂದಾಗಿ ಸಚಿವ ಸ್ಥಾನ ಕೈ ತಪ್ಪಿತು.
ಕೇಂದ್ರದಲ್ಲಿ ಕಾಂಗ್ರೆಸ್ ಯುಗ ಮುಕ್ತಾಯವಾಗಿ ಮೂರು ಬಾರಿ ಅಂದರೆ, 1996,1998 ಹಾಗೂ 1999ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿದುಕೊಂಡಿತು. ಆಗ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸೂ ನೆಲಕಚ್ಚಿತು. ಮೂರು ಬಾರಿ ಬಿಜೆಪಿಯ ವಿಜಯ ಸಂಕೇಶ್ವರ ಗೆದ್ದು ಬಂದರು. ಆದರೆ, ಅವರಿಗೂ ಹಲವು ಕಾರಣಗಳಿಂದ ಸಚಿವ ಸ್ಥಾನ ಲಭಿಸಲಿಲ್ಲ. ಬಳಿಕ ವಿಜಯ ಸಂಕೇಶ್ವರ ತಮ್ಮದೇ ಪಕ್ಷ ಕಟ್ಟಿಕೊಂಡು ಹೋರ ಹೋದಾಗ, 2004 ಹಾಗೂ 2009ರಲ್ಲಿ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಕಾಣಿಸಿಕೊಂಡರು. ಎರಡು ಬಾರಿ ಆಯ್ಕೆಯಾಗಿದ್ದರೂ ಕೇಂದ್ರದಲ್ಲಿ ಎನ್‌ಡಿಎ ಆಡಳಿತ ಬರಲಿಲ್ಲ. ಹೀಗಾಗಿ ಜೋಶಿ ಅವರಿಗೆ ಸಚಿವ ಸ್ಥಾನ ಕನಸಿನ ಮಾತಾಯಿತು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಇಡೀ ದೇಶಾದ್ಯಂತ ಎದ್ದಿದ್ದು, ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೇರಿದರೆ ಮತ್ತು ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ ಜೋಶಿ ಗೆದ್ದರೆ 32 ವರ್ಷಗಳ ನಂತರದ ಮಂತ್ರಿ ಸ್ಥಾನ ಈ ಕ್ಷೇತ್ರಕ್ಕೆ ಒಲಿಯುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

