ಗದಗ

ಪೈಪ್‌ಲೈನ್ ಒಡೆದು ನೀರು ಪೋಲು

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 11
ಪಟ್ಟಣದ ಜನತೆ ಒಂದೆಡೆ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಅಪಾರ ಪ್ರಮಾಣದ ನೀರು ಪಟ್ಟಣದಿಂದ ರೋಣಕ್ಕೆ ತೆರಳುವ ಮಾರ್ಗದಲ್ಲಿ ಪೋಲಾಗುತ್ತಿದೆ.
ನೀರು ಹಾಳಾಗಿ ಹೋಗುತ್ತಿರುವುದನ್ನು ತಡೆಯಲು ಮುಂದಾಗದೇ ಅಧಿಕಾರಿಗಳು ಮಾತ್ರ ತಮ್ಮ ಎಂದಿನ ಜಾಣ ಕುರುಡತನ ನೀತಿ ಪ್ರದರ್ಶನ ಮಾಡುತ್ತಿದ್ದು, ಇವರ ಬೇಜವಾಬ್ದಾರಿಯಿಂದ ತೊಂದರೆ ಆಗುತ್ತಿರುವುದು ಮಾತ್ರ ಸಾರ್ವಜನಿಕರಿಗೆ.
ಪಟ್ಟಣದ ಜನತೆಗೆ ನೀರು ಒದಗಿಸುವ ಮೂಲ ಎಂದರೆ ಗುಡ್ಡದ ಪಕ್ಕದಲ್ಲಿರುವ ಕೆಂಪ ಕೆರೆ. ಈ ಕೆರೆಯನ್ನು ಮಲಪ್ರಭಾ ಜಲಾಶಯದ ಕಾಲುವೆ ಮೂಲಕ ಪ್ರತಿ 2 ಅಥವಾ 3 ತಿಂಗಳಿಗೆ ಭರ್ತಿ ಮಾಡಿದರೆ ಮಾತ್ರ ಜನತೆಗೆ ನೀರು ಸಿಗಲು ಸಾಧ್ಯ. ಇಷ್ಟೆಲ್ಲ ಸಮಸ್ಯೆ ಮಧ್ಯೆ ನಗರದಿಂದ 2 ಕಿ.ಮೀ. ದೂರವಿರುವ ಅಲ್ಲಿಭಾಯಿ ಬಡಾವಣೆಗೆ ನೀರು ಪೂರೈಕೆಯಾಗುವ ಪೈಪ್‌ಲೈನ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿದೆ. ಈ ಮಾರ್ಗವಾಗಿ ನರಗುಂದದಿಂದ-ರೋಣಕ್ಕೆ ಹೋಗುವ ವಾಹನಗಳ ಅತಿಯಾದ ಓಡಾಟದಿಂದಾಗಿ ಪೈಪ್‌ಗಳು ಒಡೆದಿವೆ. ಇದರಿಂದ ಪಟ್ಟಣಕ್ಕೆ ಪೂರೈಕೆಯಾಗುತ್ತಿದ್ದ ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿದೆ. ಇದು ನಾಗರಪಂಚಮಿ ಹಬ್ಬದ ದಿನದಲ್ಲಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಸೃಷ್ಟಿ ಮಾಡಿದೆ.
ಅಲ್ಲಿಭಾಯಿ ಬಡಾವಣೆಗೆ ತೊಂದರೆ
ಅಲ್ಲಿಭಾಯಿ ಬಡಾವಣೆಗೆ ನೀರು ಪೂರೈಕೆಯಾಗಬೇಕಾದಲ್ಲಿ ಈ ಪೈಪ್‌ಲೈನ್ ಅವಶ್ಯಕತೆ ಪ್ರಮುಖವಾಗಿದೆ. ಇಲ್ಲಿನ ನಿವಾಸಿಗಳು ಪ್ರತಿ ಬೇಸಿಗೆಯಲ್ಲಂತೂ ಕೊಡ ನೀರಿಗಾಗಿ ಪರಿತಪಿಸುತ್ತಾರೆ. ಮಳೆಗಾಲದಲ್ಲಾದರೂ ಸಮರ್ಪಕ ನೀರು ಪೂರೈಕೆ ಮಾಡುತ್ತಾರೆ ಎಂದು ನಂಬಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪೈಪ್‌ಲೈನ್ ಒಡೆದು ಹೋಗಿರುವ ಹಿನ್ನೆಲೆಯಲ್ಲಿ ನೀರು ಪೋಲಾಗಿ ಅಲ್ಲಿನ ಜನತೆಗೆ ಈಗಲೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.