ಗದಗ

ಬಿಸಿಯೂಟ ಖಾಸಗೀಕರಣಕ್ಕೆ ವಿರೋಧ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 20
ಶಾಲೆಗಳ ಬಿಸಿಯೂಟ ಯೋಜನೆಯ ನಿರ್ವಹಣೆಯನ್ನು ಕಾರ್ಪೋರೇಟರ್ ಕಂಪನಿ, ಎನ್‌ಜಿಒಗಳಿಗೆ ನೀಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪೀರು ರಾಠೋಡ ಮಾತನಾಡಿ, ಯಾವುದೇ ಮಗು ಆಹಾರದಿಂದ ವಂಚಿತವಾಗಬಾರದು. ಹಸಿವು, ಬಡತನ, ಅಪೌಷ್ಟಿಕತೆ ಹಾಗೂ ತಾರತಮ್ಯಗಳು ಬದುಕುವ ಹಕ್ಕಿ ನಿಂದ ವಂಚಿಸಬಾರದು ಎಂದು ಹೇಳಿದೆ. ಹಸಿವು, ಬಡತನ ಹಾಗೂ ಅಪೌಷ್ಠಿಕತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದನ್ನು ಗಮನಿಸಿದ ಎಸ್‌ಎಫ್‌ಐ ಶಾಲೆಗಳಲ್ಲಿಯೇ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪ್ರತಿಭಟನೆಗಳನ್ನು ನಡೆಸಿರುವುದನ್ನು ನೆನಪಿಸಿಕೊಳ್ಳಬೇಕಿದೆ. ಎಸ್‌ಎಫ್‌ಐನಂತೆ ಇನ್ನಿತರ ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಫಲವಾಗಿ ಬಿಸಿಯೂಟದ ಯೋಜನೆ ಜಾರಿಯಾಗಿದೆ.
ಈಗಾಗಲೇ ರಾಜ್ಯದಲ್ಲಿ ಅಕ್ಷಯಪಾತ್ರೆ ಫೌಂಡೇಶನ್(ಇಸ್ಕಾನ್), ಅಧಮ್ಯ ಚೇತನ ಸೇರಿದಂತೆ 93 ಸ್ವಯಂ ಸೇವಾ ಸಂಸ್ಥೆಗಳು 5790 ಶಾಲೆಗಳಲ್ಲಿ ಸರ್ಕಾರದಿಂದ ಹಣ ಪಡೆದು 10.68 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿವೆ. ಅಲ್ಲದೆ ಕರ್ನಾಟಕದ ಬಡ ಮಕ್ಕಳ ಚಿತ್ರಗಳನ್ನು ತೋರಿಸಿ ದೇಶ ವಿದೇಶಗಳಲ್ಲಿ ಸಾವಿರಾರು ಕೋಟಿ ಹಣ ವಸೂಲಿ ಮಾಡಿವೆ. ಈಚೆಗೆ ಇಸ್ಕಾನ್ ನೀಡುವ ಊಟದಲ್ಲಿ ಇಲಿ ಬಿದ್ದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಾರಗಟ್ಟಲೇ ಹಳಸಿದ ಊಟ ನೀಡಿದ ಎನ್‌ಜಿಓ ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಸರ್ಕಾರೇತರ ಕಂಪನಿಗಳಿಗೆ ನೀಡಬಾರದು ಎಂದರು. ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಹಿರೇಮಠ, ಜಿಲ್ಲಾ ಸಹಕಾರ್ಯದರ್ಶಿ ಶಿವು ಚವ್ಹಾಣ, ಜಿಲ್ಲಾ ಅಧ್ಯಕ್ಷೆ ಯೋಶೊದಾ ಬೆಟಗೇರಿ ಮಾತನಾಡಿ, ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಬಿಸಿ ತಾಜಾ ಊಟವನ್ನು ತಯಾರು ಮಾಡಿ ಕೊಡಬೇಕು. ಅಡುಗೆಮನೆ, ಶುದ್ಧ ಕುಡಿವ ನೀರು, ಗ್ಯಾಸ್ ಸ್ಟೌ, ಪಾತ್ರೆ, ತಟ್ಟೆ ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಆಹಾರ ಪದಾರ್ಥ, ತರಕಾರಿ ಹಾಳಾಗದಂತೆ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈ ಗುಣಾತ್ಮಕ ಕ್ರಮಗಳ ಮೂಲಕ ಬಿಸಿಯೂಟ ಯೋಜನೆಯನ್ನು ಬಲಪಡಿಸಬೇಕು. ಬಿಸಿಯೂಟ ನಿರ್ವಹಣೆಯ ಖಾಸಗೀಕರಣವನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಸಂತೋಷ ಮಾಳೋತ್ತರ, ಸಾಗರ ಮಾಡಳ್ಳಿ, ಮಂಜುನಾಥ ಮ್ಯಾಗೇರಿ, ಸುರೇಶ ರಾಠೋಡ, ಶಿವುಕುಮಾರ ಪೂಜಾರ, ವಿರೂಪಾಕ್ಷಿ ಕಮ್ಮಾರ, ವೆಂಕಟೇಶ ರಾಠೋಡ, ನಿಂಗರಾಜ ಗೌಡರ, ಕುಮಾರ.ಪಿ, ಕುಬೇರ, ಸುನಂದಾ ಶ್ಯಾವಿ, ನಾಗವೇಣಿ, ಮಾದಗುಂಡಿ, ಚನ್ನಮ್ಮ ಶ್ಯಾವಿ, ಮಲ್ಲಮ್ಮ ತಡಹಾಳ, ಸುಧಾ ಕೋಡಿ ಮುಂತಾದವರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.