ಹಾಜರಾತಿ ಹೆಚ್ಚಿಸಲು ಸಿಹಿಯೂಟ
-ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 23
ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶಾಸಕರ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶ್ರಾವಣ ಮಾಸ ತಿಂಗಳ ಪೂರ್ತಿ ಮಧಾಹ್ನದ ಬಿಸಿಯೂಟದೊಂದಿಗೆ ಸಿಹಿ ನೀಡಲಾಗುತ್ತಿದೆ.
ಅಕ್ಷರ ದಾಸೋಹದಡಿ ಮಧ್ಯಾಹ್ನ ನೀಡುವ ಬಿಸಿಯೂಟದ ಜತೆಗೆ ಒಂದೊಂದು ದಿನ ಬೇರೆ ಬೇರೆ ತರಹದ ಸಿಹಿ ನೀಡಲಾಗುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸುಗಳಾದ ಗೋದಿ ಹುಗ್ಗಿ, ಶೇಂಗಾ ಹೋಳಿಗೆ, ಬುಂದೆ, ಶಾವಿಗೆ ಪಾಯಸ, ಮೈಸೂರು ಪಾಕ್, ಜಿಲೇಬಿಯನ್ನು ಮಕ್ಕಳಿಗೆ ಕೊಡಲಾಗುತ್ತಿದೆ.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಶಿಕ್ಷಕರೇ ಸ್ವಯಂ ಪ್ರೇರಿತರಾಗಿ ಪ್ರಾರಂಭಿಸಿದ್ದಾರೆ. ಶ್ರಾವಣ ಮಾಸ ಪ್ರಾರಂಭಕ್ಕೂ ನಾಲ್ಕು ದಿನ ಮುಂಚಿತವಾಗಿ ಶಾಲಾ ಸುಧಾರಣಾ ಸಮಿತಿ ಗಮನಕ್ಕೆ ತಂದಾಗ ಅಧ್ಯಕ್ಷ ಶಂಭುಲಿಂಗಪ್ಪ ಅಕ್ಕಿ ಮೊದಲ ದಿನದ ಸಿಹಿಯೂಟದ ಖರ್ಚನ್ನು ವಹಿಸಿಕೊಂಡರು. ಇವರ ಜತೆಗೆ ಸದಸ್ಯರೂ ಕೈ ಜೋಡಿಸಿದ್ದಾರೆ.
ದಾನಿಗಳಿಂದ ಭರ್ತಿ
ಶಾಲೆಯಲ್ಲಿ ಇಂಥ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿರುವುದನ್ನು ಗಮನಿಸಿದ ಬೆಳ್ಳಟ್ಟಿ ಗ್ರಾಮದ ಸಾರ್ವಜನಿಕರು, ವ್ಯಾಪಾರಸ್ಥರು, ಮುಖಂಡರು ಶಾಲೆಗೆ ಭೇಟಿ ನೀಡಿ ಒಂದು ದಿನದ ಸಿಹಿಯೂಟವನ್ನು ಮಕ್ಕಳಿಗೆ ತಾವೂ ನೀಡುವುದಾಗಿ ತಿಳಿಸಿ, ಹೆಸರು ಬರೆಯಿಸಿ ಹೋಗಿದ್ದಾರೆ. ಶ್ರಾವಣ ಮಾಸದ ದಿನವೆಲ್ಲ ದಾನಿಗಳಿಂದ ಭರ್ತಿಯಾಗಿದೆ. ನಿತ್ಯವೂ ಶಾಲೆಗೆ ಆಗಮಿಸುವ, ಸಿಹಿಯೂಟ ನೀಡುವ ಜವಾಬ್ದಾರಿ ವಹಿಸಿಕೊಂಡ ಅತಿಥಿಗಳೇ ಮಕ್ಕಳಿಗೆ ಊಟಕ್ಕೆ ನೀಡುತ್ತಾರೆ. ಸಿಹಿಯೂಟ ಭೋಜನ ಮುಗಿದ ನಂತರ ಮಕ್ಕಳು ಅತಿಥಿಗಳ ಎದುರು ಶರಣರನ್ನು ನೆನೆಯುವುದು, ವಚನಕಾರರ ಬಗ್ಗೆ ಪರಿಚಯ, ವಚನ ಹೇಳುವ ಕಾರ್ಯಕ್ರಮ ನಡೆಯುತ್ತದೆ.
ಶ್ರಾವಣ ಸಂಭ್ರಮ ಕಾರ್ಯಕ್ರಮ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಜೆ.ಎಸ್. ರಾಮಶೆಟ್ಟರ, ಸಹ ಶಿಕ್ಷಕ ಎಂ.ಬಿ. ಹಾವೇರಿ 1ರಿಂದ 7ನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ 316 ಮಕ್ಕಳು ಓದುತ್ತಿದ್ದಾರೆ. ಇವರಲ್ಲಿ ಪ್ರತಿ ದಿನ 25ಕ್ಕೂ ಹೆಚ್ಚು ಮಕ್ಕಳು ಗೈರು ಹಾಜರಾಗುತ್ತಾರೆ. ಶಾಲೆಯ ಶಿಕ್ಷಕರೆಲ್ಲ ಸಭೆ ಸೇರಿ, ಸಂಪೂರ್ಣ ಹಾಜರಾತಿ ತರುವುದು ಹೇಗೆ ಎಂದು ಯೋಚನೆ ಮಾಡಿ ಈ ಕಾರ್ಯಕ್ರಮ ಹಾಕಿಕೊಂಡಿದ್ದು, ದಿನವೂ ಯಾವ ಮಕ್ಕಳೂ ಶಾಲೆ ತಪ್ಪಿಸಿಕೊಳ್ಳುತ್ತಿಲ್ಲ. ಎಲ್ಲರೂ ಬರುತ್ತಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕೆ.ಎ. ಬಳಿಗೇರ ಮಾತನಾಡಿ, ಶಿಕ್ಷಕರು ಶಾಲೆ ಹಾಜರಾತಿ ಸುಧಾರಣೆಗೆ ಹಾಕಿಕೊಂಡ ಶ್ರಾವಣ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದಿನ ಶ್ರಾವಣ ತಿಂಗಳಲ್ಲಿ ತಾಲೂಕಿನಾದ್ಯಂತ ಕಾರ್ಯಕ್ರಮ ವಿಸ್ತರಿಸಲಾಗುವುದೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

