ಬಿಎಸ್ವೈ ಪಾದಯಾತ್ರೆ ರಾಜಕೀಯ ಗಿಮಿಕ್
ಕನ್ನಡಪ್ರಭ ವಾರ್ತೆ, ಗದಗ, ಫೆ. 7
ಕಾವೇರಿ ಸಮಸ್ಯೆ ಕುರಿತು ಬಿ.ಎಸ್. ಯಡಿಯೂರಪ್ಪ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಒಂದು ರಾಜಕೀಯ ಗಿಮಿಕ್ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಇದಕ್ಕಾಗಿ ಚಿಂತನೆ ಅವಶ್ಯವಾಗಿದೆ. ಪಾದಯಾತ್ರೆ ಮಾಡುವುದು ಅವರ ವೈಯಕ್ತಿಕ ಲಾಭಕ್ಕಾಗಿ. ಜನರು 2008ರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಭರವಸೆಯಿಟ್ಟು ಮತ ನೀಡಿದ್ದು, ಅದನ್ನು ಸಾಧಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೆಜೆಪಿ ಮೂಲಕ ಹೋರಾಟ ಮಾಡುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಅವರಿಂದ ರಾಜ್ಯದ ಹಿತ ಕಾಯುವುದು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಮುಖ್ಯವಾಗಿ ರಾಜ್ಯದ ಜನತೆಗೆ ಸಮರ್ಥ ಹಾಗೂ ಬಡವರ, ರೈತರ ಬಗ್ಗೆ ಕಾಳಜಿ ಇರುವ ಹೋರಾಟ ಮನೋಭಾವನೆಯ ನಾಯಕನ ಆವಶ್ಯಕತೆ ಇದೆ. ಅದಕ್ಕೆ ಕುಮಾರಸ್ವಾಮಿಯೇ ಸೂಕ್ತ ವ್ಯಕ್ತಿ ಎಂದರು.
ಉತ್ಸಾಹದ ಕಿರಣವಾಗಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಯುವಕರನ್ನು ಸಂಘಟಿಸಲು ಪಕ್ಷ ಹೆಚ್ಚಿನ ಗಮನ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ 40ರಿಂದ 50 ಯುವಕರಿಗೆ ಟಿಕೆಟ್ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗುವುದು. ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಯುವಕರಿಗಾಗಿ ಒಂದು ನಿಗಮವನ್ನೇ ಸ್ಥಾಪಿಸಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ನಿಮ್ಮ ಬಗರ್ ಹುಕುಂ ಸಾಗುವಳಿ ಹೋರಾಟ ಶಿವಮೊಗ್ಗಕ್ಕೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆಗೆ, ರಾಜ್ಯಾದ್ಯಂತ ಈ ಕುರಿತು ಹೋರಾಟ ಮಾಡಲು ಪಕ್ಷದ ಯುವ ಘಟಕದ ವತಿಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶಿಕಾರಿಪುರದಲ್ಲಿಯೇ ಅತೀ ಹೆಚ್ಚಿನ ತೊಂದರೆ ಇರುವುದರಿಂದ ಮೊದಲು ಅಲ್ಲಿಂದ ಪ್ರಾರಂಭಿಸಲಾಗಿದೆ. ಸದ್ಯದಲ್ಲಿಯೇ ಈ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ ಕಲಬುರ್ಗಿ, ಅಂದಾನಯ್ಯ ಕುರ್ತಕೋಟಿಮಠ, ದಾವಲ ಮುಳಗುಂದ, ವೆಂಕನಗೌಡ ಗೋವಿಂದಗೌಡ್ರ, ಹನುಮಂತಗೌಡ ಕಲ್ಮನಿ, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

