ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯ: ನ್ಯಾ. ಆವಿನ
ಕನ್ನಡಪ್ರಭ ವಾರ್ತೆ, ಗದಗ, ಫೆ. 7
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ವಿದ್ಯಾರ್ಥಿಗಳು ಕಾನೂನಿನ ಕನಿಷ್ಟ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್. ಆವಿನ ಹೇಳಿದರು.
ಈಚೆಗೆ ಅವರು ಬೆಟಗೇರಿಯ ಕಣಗಿನಹಾಳ ರಸ್ತೆಯಲ್ಲಿರುವ ಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಂದು ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅವುಗಳ ಪರಿಹಾರಕ್ಕೆ ಕಾನೂನು ಅರಿವು ಹೊಂದುವುದು ಬಹಳ ಮುಖ್ಯ. ಹಾಗೂ ತಮ್ಮ ಅಕ್ಕ ಪಕ್ಕದವರಿಗೆ ಹಾಗೂ ಯಾರಿಗಾದರೂ ಉಚಿತ ಕಾನೂನು ಸಲಹೆ ಬೇಕಿದ್ದರೆ ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಯಾವುದೇ ವಾಹನ ನಡೆಸಬೇಕಾದರೂ ಕೂಡ ಚಾಲನಾ ಪ್ರಮಾಣ ಪತ್ರ, ವಾಹನಕ್ಕೆ ವಿಮೆ ಅವಶ್ಯ. ಜತೆಗೆ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಾಲನೆ ಮಾಡಿದರೆ ಅಪಘಾತಗಳಿಂದ ಮುಕ್ತಿ ಹೊಂದಲು ಸಾಧ್ಯ. ಬಾಲ್ಯಾವಸ್ಥೆಯಲ್ಲಿ ಮದುವೆಯಾದರೆ ಅದು ಅಪರಾಧ. ಜತೆಗೆ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಅಥವಾ ಅಶಕ್ತತೆಯಿಂದ ಕೂಡಿ ತಾಯಿ ಮಕ್ಕಳ ಆರೋಗ್ಯ ಹದಗೆಡುತ್ತದೆ. ಮಕ್ಕಳು ದಿನಪತ್ರಿಕೆ ಹಾಗೂ ದೂರದರ್ಶನದಲ್ಲಿ ಬರುವ ಕಾನೂನಿಗೆ ಸಂಬಂಧಪಟ್ಟ ಸುದ್ದಿ ಓದಿ, ಕೇಳಿ ತಿಳಿದುಕೊಂಡು ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣ ಬಸವೇಶ್ವರ ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಎಸ್. ಮಲ್ಲಾಪುರ, ಉಪನ್ಯಾಸಕರಾಗಿ ಆಗಮಿಸಿದ ನ್ಯಾ. ಗೀತಾ ಅಸೂಟಿ, ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ ಮಾತನಾಡಿದರು. ಈ ಸಂದರ್ಭದಲ್ಲಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್.ಪಾಟೀಲ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಮೂಲಿಮನಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ಶಿಕ್ಷಣ ಸಂಯೋಜಕ ಎ.ಬಿ. ಕಾಳೆ, ಮುಖ್ಯೋಪಾಧ್ಯಾಯ ಎಸ್.ಎಂ. ಕೊಟಗಿ, ಸಾವಿತ್ರಿ ಕಬಾಡಿ, ಭಾರತಿ ಶಲವಡಿ, ಎಸ್.ಆರ್. ಗೊಂಡಬಾಳ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಪಿ.ಎನ್. ಹೂಗಾರ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

