ವಿಮೆ ಗೊಂದಲ: ಬ್ಯಾಂಕ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 12
ಕೆವಿಜಿ ಬ್ಯಾಂಕ್ ಅಧಿಕಾರಿಗಳು 2011-12ನೇ ಸಾಲಿನ ಮುಂಗಾರಿ ಹಂಗಾಮಿನ ಕೃಷಿ ಬೆಳೆ ವಿಮೆ ಮಾಡುವ ಬದಲು ಹವಾಮಾನ ವಿಮೆ ಮಾಡಿ ರೈತರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ಚಿಕ್ಕನರಗುಂದ ಗ್ರಾಮಸ್ಥರು ಗ್ರಾಮದ ಬ್ಯಾಂಕ್ಗೆ ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಚಿಕ್ಕನರಗುಂದ ಗ್ರಾಮದ ಕೆವಿಜಿ ಬ್ಯಾಂಕ್ನಲ್ಲಿ ಹಿಂದಿನ ಸಾಲಿನ ಮುಂಗಾರು ಹಂಗಾಮಿಗೆ ಚಿಕ್ಕನರಗುಂದ, ಬೆನಕೊಪ್ಪ ಗ್ರಾಮದ 27 ರೈತರು ಈ ಬ್ಯಾಂಕ್ನಲ್ಲಿ ಸಾಲ ತೆಗೆದುಕೊಂಡಿದ್ದರು. ಸಾಲ ಕೊಡುವ ಸಂದರ್ಭದಲ್ಲಿ ರೈತರಿಗೆ ಅಧಿಕಾರಿಗಳು ನಿಮ್ಮ ಮುಂಗಾರು ಬೆಳೆ ವಿಮೆ ತುಂಬಿಕೊಂಡಿದ್ದೇವೆ ಎಂದು ಹೇಳಿದ್ದರು.
ಮುಂದೆ 2012ರ ನವೆಂಬರ್ ತಿಂಗಳಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿ ತುಂಬಿದ ಗ್ರಾಮದ ಎಲ್ಲ ರೈತರು ಮತ್ತು ಇದೇ ಬ್ಯಾಂಕ್ನಲ್ಲಿ 116 ರೈತರು ಬೆಳೆ ವಿಮೆ ಹಣ ನೀಡುವಂತೆ ಬ್ಯಾಂಕ್ ಅಧಿಕಾರಿಗೆ ಘೇರಾವ್ ಹಾಕಿದ್ದರು. ಬ್ಯಾಂಕ್ನ ಅಧಿಕಾರಿಗಳು ಈ ಹಿಂದೆ ರೈತರ ಬೆಳೆ ವಿಮೆಯನ್ನು ಡಿಸೆಂಬರ್ನಲ್ಲಿ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ ಫೆಬ್ರವರಿ ತಿಂಗಳು ಬಂದರೂ ರೈತರಿಗೆ ನೀಡಬೇಕಾದ ಹಣ ಇಲ್ಲಿಯವರೆಗೆ ನೀಡಿಲ್ಲ. ಮೇಲಾಗಿ ರೈತರಿಗೆ ಬಂದ ಬೆಳೆ ವಿಮೆ ಪರಿಹಾರವನ್ನು ಹವಾಮಾನ ವಿಮೆಗೆ ಭರಿಸಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದ್ದು, ಕೂಡಲೇ ನ್ಯಾಯ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳನ್ನು ಆಗ್ರಹಿಸಿದರು.
ಈ ಎಲ್ಲ ರೈತರಿಗೆ ರು. 8-10 ಲಕ್ಷ ಪರಿಹಾರ ಬರಬೇಕಾಗಿತ್ತು. ಆದರೆ ಬ್ಯಾಂಕ್ ಅಧಿಕಾರಿಗಳು ಮಾಡಿದ ತಪ್ಪಿನಿಂದ ರೈತರಿಗೆ ಅನ್ಯಾಯವಾಗಿದೆ. ಇದೇ ರೀತಿ ರೈತರನ್ನು ನಿರ್ಲಕ್ಷಿಸಿದಲ್ಲಿ ಮುಂಬರುವ ದಿನಗಳಲ್ಲಿ ಬ್ಯಾಂಕ್ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಕುರಿತು ಚಿಕ್ಕನರಗುಂದ ಕೆವಿಜಿ ಬ್ಯಾಂಕ್ ಶಾಖಾಧಿಕಾರಿ ಪಿ.ಆರ್. ಕಲಾಳ ಮಾತನಾಡಿ, ಈ ಎಲ್ಲ ರೈತರನ್ನು ಕೇಳಿಯೇ ಹವಾಮಾನ ವಿಮೆ ಮಾಡಿದ್ದೇವೆ. ಆದರೆ, ರೈತರು ಈಗ ಈ ರೀತಿ ಹೇಳುತ್ತಿದ್ದಾರೆ. ಹವಾಮಾನ ವಿಮೆ ಭರಣಾ ಮಾಡಿರುವ ಕಾರಣ ಇವರಿಗೆ ಬೆಳೆ ವಿಮೆ ಬಂದಿರುವುದಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪ್ರಕಾಶ ಭೂಮಣ್ಣವರ, ಪತ್ತೋಪ್ಪ ಸಾತಣ್ಣವರ, ರುದ್ರಗೌಡ ಹಾಲನಗೌಡ್ರ, ಸಿದ್ದಪ್ಪ ಯರಗಟ್ಟಿ, ಮಹಾಂತೇಶ ಮರ್ದನ, ಶಂಕರಗೌಡ ಪೊಲೀಸ್ಪಾಟೀಲ, ಶಿವವ್ವ ಕಿತ್ತೂರ, ನಾಗಪ್ಪ ಗಾಣಿಗೇರ, ಯಲ್ಲವ್ವ ಅಮರಗೋಳ, ಶಾಂತವ್ವ ಸಾತಣ್ವರ, ವಿರುಪಾಕ್ಷಪ್ಪ ಲಕ್ಕಣ್ಣವರ, ಕಳಕಪ್ಪ ಯರಗಟ್ಟಿ, ಉದಯಕುಮಾರ ಉಳ್ಳಾಗಡ್ಡಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

