ಯೋಜನೆಗೆ ಗರ: ಕುಡಿವ ನೀರಿಗೆ ಬರ
ಎ.ಜಿ. ಕಾರಟಗಿ
ಕನ್ನಡಪ್ರಭ ವಾರ್ತೆ, ಕಾರಟಗಿ, ಫೆ. 24
ಕಾರಟಗಿ ಸೇರಿದಂತೆ ಸುತ್ತಲಿನ 27 ಗ್ರಾಮಗಳು ಹಾಗೂ ನವಲಿ ಸೇರಿದಂತೆ ಸುತ್ತಲಿನ 22 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ರಾಜೀವ್ ಗಾಂಧಿ ಸಬ್ಮಿಷನ್ ಯೋಜನೆ ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದೆ.
ಇಲ್ಲಿಗೆ ಸಮೀಪದ ನಾಗನಕಲ್ ಬಳಿ ನಿರ್ಮಾಣವಾಗುತ್ತಿರುವ ರಾಜೀವ್ಗಾಂಧಿ ಸಬ್ಮಿಷನ್ ಯೋಜನೆ ಮೂರು ವರ್ಷಗಳು ಗತಿಸಿದರೂ ಪೂರ್ಣಗೊಂಡಿಲ್ಲ. ಹೀಗಾಗಿ, ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಊಹಿಸಲು ಅಸಾಧ್ಯ ಎನ್ನುವ ಆತಂಕ ಎದುರಾಗಿದೆ.
ಕಾರಟಗಿ ಹಾಗೂ ನವಲಿ ಸೇರಿದಂತೆ ಸುಮಾರು 50 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಬೇಜವಾಬ್ದಾರಿ, ವಿಳಂಬದಿಂದಾಗಿ ಸದ್ಯಕ್ಕೆ ಯೋಜನೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ರು. 23.77 ಕೋಟಿ ವೆಚ್ಚದ ಕಾರಟಗಿ ಯೋಜನೆಗೆ 2008ರ ಮೇ 19ರಂದು ಮತ್ತು ರು. 10.16 ಕೋಟಿ ವೆಚ್ಚದ ನವಲಿ ಯೋಜನೆಗೆ 2009 ಜನವರಿ 1ರಂದು ಕಾಮಗಾರಿಗೆ ಚಾಲನೆ ದೊರೆತಿದೆ. ನಿಗದಿತ ಕಾಲಮಿತಿ ಮೀರಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದನ್ನು ಗಮನಿಸಿದರೆ ಅಧಿಕಾರ ಶಾಹಿ, ಗುತ್ತಿಗೆದಾರರ ದರ್ಪದ ಬಗ್ಗೆ ಅನುಮಾನ ಮೂಡುತ್ತಿವೆ.
ಬೃಹತ್ ಕೆರೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪಿಚ್ಚಿಂಗ್ ಕಾರ್ಯ ನಡೆಯುತ್ತಿದ್ದು, ಗುಣಮಟ್ಟದಿಂದ ಕೂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ ಕೆಲ ರಾಜಕೀಯ ಷಡ್ಯಂತ್ರ ಈ ಯೋಜನೆ ಉದ್ಘಾಟನೆಗೆ ತಡೆಯೊಡ್ಡಿವೆ ಎನ್ನುವ ಸುದ್ದಿ ಈಗ ಬಲವಾಗಿದೆ. ತಮ್ಮ ಪಕ್ಷಕ್ಕೆ ಈ ಯೋಜನೆಯ ಕೀರ್ತಿ ಸಲ್ಲಬೇಕು ಎನ್ನುವ ಆಡಳಿತ ಪಕ್ಷದ ಕೆಲವರ ಹುನ್ನಾರದಿಂದ ಯೋಜನೆ ಇನ್ನೂ ಪೂರ್ಣವಾಗಿಲ್ಲ ಎನ್ನಲಾಗಿದೆ.
ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಪೈಪ್ಲೈನ್ಗಳು ಸಮರ್ಪಕವಾಗಿಲ್ಲ. ಇನ್ನುಳಿದಂತೆ ಜಾಕ್ವೆಲ್, ನೀರು ಶುದ್ಧೀಕರಣ ಘಟಕ, ಶುದ್ಧ ನೀರಿನ ಮೇಲ್ತೊಟ್ಟಿ, ವಿತರಣಾ ಕೊಳವೆ ಕಾಮಗಾರಿ ಪೂರ್ಣಗೊಂಡಿದೆ.
ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಬೇಸಿಗೆ ವೇಳೆಗೆ ಪರಿಸ್ಥಿತಿ ತೀವ್ರವಾಗುವ ಲಕ್ಷಣಗಳಿವೆ. ಈ ಯೋಜನೆಗೆ ಮೂಲ ನೀರು ಪಕ್ಕದಲ್ಲಿ ಇರುವ ತುಂಗಭದ್ರಾ ಎಡದಂಡೆ ನಾಲೆ. ಆದರೆ, ಈಗಾಗಲೇ ನಾಲೆಗೆ ನೀರು ಹರಿಯುವಿಕೆ ಪ್ರಮಾಣ ಕಡಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಬಿಗಡಾಯಿಸುತ್ತದೆ.
ಮುಗಿಯದ ಕಾಮಗಾರಿ: ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು, ಮುಂದಿನ ಬೇಸಿಗೆ ವೇಳೆಗೆ ಜನತೆಗೆ ನೀರು ಕುಡಿಸುತ್ತೇವೆ ಎಂದು ಹೇಳುತ್ತಾರೆ. ಒಂದು ಹಂತದಲ್ಲಿ ಯೋಜನೆ ರಾಜಕೀಯ ದಾಳಕ್ಕೆ ಸಿಲುಕಿದ್ದು ಶಾಸಕರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿದ್ದರು.
ಇದೇ ವೇಳೆ ಕೆಲ ರಾಜಕಾರಣಿಗಳು ಗುತ್ತಿಗೆದಾರರ ಪರ ವಕಾಲತ್ತು ವಹಿಸಿದ್ದರು. ಕೆಲವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲೂ ಮುಂದಾಗಿ ಸ್ಥಳೀಯ ಠಾಣೆಯ ಕಾಂಪೌಂಡ್ವರೆಗೂ ಸುದ್ದಿ ಹೋಗಿ ಮರೆಯಾಗಿತ್ತು.
ತೀರಾ ಇತ್ತೀಚೆಗೆ ಈ ಯೋಜನೆ ತಮ್ಮದೆಂಬ ಭಾವನೆಯಿಂದ ಭೇಟಿ ನೀಡಿದ್ದ ಸಂಸದ ಶಿವರಾಮಗೌಡ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಹಸನವೂ ನಡೆಯಿತು. ಇಷ್ಟೆಲ್ಲ ನಾಟಕ ನಡೆದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಶಾಸಕ ಶಿವರಾಜ್ ತಂಗಡಗಿ ಯೋಜನೆ ತಂದಿದ್ದಾರೆ. ಹಲವು ಬಾರಿ ಭೇಟಿ ನೀಡಿ ಕೂಡಲೇ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದರು. ಕೆಲವು ಬಾರಿ ಗುತ್ತಿಗೆದಾರರಿಗೆ ನಿಮ್ಮನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದ್ದರು. ಆದರೂ, ಯೋಜನೆ ಪೂರ್ಣವಾಗಿಲ್ಲ. ಕಾರಣ ಮಾತ್ರ ತಿಳಿಯುತ್ತಿಲ್ಲ. ಯೋಜನೆ ತಂದ ಶಾಸಕರು ಅನುಷ್ಠಾನ ಮರೆತರೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

