ಗ್ರಾಮಕ್ಕೆ ಆಗಮಿಸದೆ ಖಾತ್ರಿ ಯೋಜನೆ ಬಿಲ್ ಪಾವತಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 18
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಎಸ್.ಎಸ್. ಬಿಚಗತ್ತಿ ಗ್ರಾಮಕ್ಕೆ ಆಗಮಿಸದೆ ಕಚೇರಿಯಲ್ಲಿ ಕುಳಿತು ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಬಿಲ್ಗಳನ್ನು ತೆಗೆಯುತ್ತಿದ್ದು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ತಾಪಂ ಮಾಜಿ ಸದಸ್ಯ ಜಾನು ಲಮಾಣಿ ಆರೋಪಿಸಿದರು.
ಅವರು ಬುಧವಾರ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಈ ಕುರಿತು ಮಾತನಾಡಿದರು. ಎನ್ಆರ್ಇಜಿ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದೆ. ಈವರೆಗೆ ಗ್ರಾಪಂನಲ್ಲಿ ಯಾರಿಗೆ ಕೆಲಸ ಕೊಟ್ಟಿದ್ದೀರಿ ಮತ್ತು ಯಾರ ಹೆಸರಲ್ಲಿ ಬಿಲ್ಗಳನ್ನು ತೆಗೆಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. 5 ವರ್ಷಗಳ ಅವಧಿಯಲ್ಲಿ ಎನ್ಆರ್ಇಜಿ ಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಮೇಲಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಭಿಯಂತರ ಪೂಜಾರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ 5 ಎಕರೆ ಜಮೀನುಗಳಲ್ಲಿ 1.50 ಲಕ್ಷಗಳಲ್ಲಿ ಕಾಮಗಾರಿ ಮಾಡಿಸಲು ಅವಕಾಶವಿದೆ. ಸ್ವತಃ ಅವರೇ ಕೆಲಸ ಮಾಡಿಸಬಹುದು. ಕಾಮಗಾರಿ ಮುಗಿದ ನಂತರ ಎನ್ಎಂಆರ್ ಹಾಕಿ ಬಿಲ್ ತೆಗೆಸಲು ಅವಕಾಶವಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು.
ಛಬ್ಬಿ ಗ್ರಾಮದಿಂದ ವರವಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರು. 2.90 ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಿದ್ದು, ಸಂಪೂರ್ಣ ಕಳಪೆಯಾಗಿದೆ. ಕನಿಷ್ಠಪಕ್ಷ ದ್ವಿಚಕ್ರ ವಾಹನಗಳು ಸಂಚರಿಸಲು ಆಗದ ಸ್ಥಿತಿಯಲ್ಲಿ ಕಾಮಗಾರಿ ಮಾಡಲಾಗಿದೆ. ವಿಶೇಷವಾಗಿ ಯಂತ್ರಗಳ ಮೂಲಕ ಕಾಮಗಾರಿ ಮಾಡಲಾಗಿದ್ದು ಖಂಡನೀಯ ಎಂದು ಮಾನಪ್ಪ ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಗ್ರಾಮಸಭೆ ನಿಗದಿಯಾಗಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಕನಿಷ್ಠಪಕ್ಷ ಗ್ರಾಮದಲ್ಲಿ ಡಂಗುರ ಸಹ ಸಾರುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ಕೆ.ಎಚ್. ಹಾವೇರಿಪೇಟೆ ಮಾತನಾಡಿ, ಎನ್ಆರ್ಇಜಿ ಯೋಜನೆಯಡಿಯ ಕೆಲಸಗಳು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಖಾತ್ರಿ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ನೀಡುವುದು ತಡವಾಗಿದ್ದು, ಶೀಘ್ರವಾಗಿ ಹಣ ಬಿಡುಗಡೆಯಾದ ತಕ್ಷಣವೇ ನೀಡಲಾಗುವುದು ಎಂದರು. ದೇವಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷ ಹನುಮಂತಗೌಡ ಪಾಟೀಲ, ಮಾನಪ್ಪ ಲಮಾಣಿ, ಶಿವಪ್ಪ ಹರತಾಲ, ಪಾಂಡಪ್ಪ ಲಮಾಣಿ, ನಿಂಗಪ್ಪ ಲಮಾಣಿ, ಎನ್.ಕೆ. ಲಮಾಣಿ, ಸಿದ್ದಪ್ಪ ಕಟ್ಟೇಕಾರ, ಮೌನೇಶ ಪೂತರಾಜ, ನಂದಿನಿ ಹಳ್ಳಿ, ಕೃಷಿ ಸಹಾಯಕ ಅಧಿಕಾರಿ ಪಿ.ಎ. ಕುಲಕರ್ಣಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

