ಅಭ್ಯರ್ಥಿಗಿಂತ ನಾಯಕರಿಗೇ ಚಿಂತೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 9
ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಸಹಜವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಫಲಿತಾಂಶದ ಬಗ್ಗೆ ಆತಂಕ, ದುಗುಡ ಇರುತ್ತದೆ. ಆದರೆ, ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ಆಯಾ ಪಕ್ಷಗಳ ನಾಯಕರಲ್ಲೇ ಹೆಚ್ಚಿನ ಚಿಂತೆ ಆವರಿಸಿದೆ. ಈ ಕಿರು ಕದನ, ಸದ್ಯದಲ್ಲಿಯೇ ಬರುವ ವಿಧಾನಸಭಾ ಚುನಾವಣೆಗೆ ಮಾನದಂಡವಾಗುವ ಸಾಧ್ಯತೆಯೇ ಈ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ನಾಯಕರಲ್ಲೇಕೆ ಚಿಂತೆ?: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎಲ್ಲ ಪಕ್ಷಗಳ ವರಿಷ್ಠರು, ಸ್ಥಳೀಯವಾಗಿ ಆಯಾ ಭಾಗದಲ್ಲಿನ ನಾಯಕರ ಪ್ರಭಾವವನ್ನು ಕ್ಷೇತ್ರದಲ್ಲಿ ಅಳೆವ ಮಾನದಂಡವನ್ನಾಗಿಯೇ ಪರಿಗಣಿಸಿದ್ದಾರೆ. ಅದಕ್ಕಾಗಿ ಹಾಲಿ ಶಾಸಕರು, ಮಾಜಿ ಶಾಸಕರು ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲು, ರಾತ್ರಿ ಎನ್ನದೇ ಶ್ರಮಿಸಿದ್ದಾರೆ. ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅತ್ಯಂತ ಕಡಿಮೆ ಸಮಯ ನೀಡಿದ್ದರೂ ಒಳಗೊಳಗೇ ಅಸಮಾಧಾನವಿದ್ದರೂ ಅದನ್ನು ಬದಿಗಿಟ್ಟು, ಪ್ರಚಾರ ಕಾರ್ಯ ನಡೆಸಿ, ತಾವು ನೆಚ್ಚಿಕೊಂಡಿರುವ ಪಕ್ಷವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಅಭ್ಯರ್ಥಿಗಳ ಶ್ರಮಕ್ಕಿಂತ ನಾಯಕರ ಶ್ರಮವೇ ಹೆಚ್ಚಾಗಿತ್ತು. ಆದ್ದರಿಂದಲೇ ನಾಯಕರಲ್ಲಿ ಚಿಂತೆಗೆ ಕಾರಣವಾಗಿದೆ.
ನಿರ್ಣಾಯಕ ಪಾತ್ರ: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಕು ಎಂದು ಹರಸಾಹಸಪಟ್ಟಿತು. ಇದಕ್ಕೆ ವಿರೋಧ ಪಕ್ಷಗಳು ನೇರವಾಗಿಯೇ ಬೆಂಬಲಿಸಿದವು. ಆದರೆ, ಚುನಾವಣಾ ಆಯೋಗದ ದಿಟ್ಟ ಕ್ರಮದಿಂದಾಗಿ ಚುನಾವಣೆ ಎದುರಿಸುವಂತಾಯಿತು. ಇದು ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ, ಸ್ಥಳೀಯ ಸಂಸ್ಥೆಗಳ ಫಲಿತಾಂಶ ಆಯಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದಕ್ಕಾಗಿ ನಾಯಕರು ಅಭ್ಯರ್ಥಿಗಳಿಗಿಂತ ಹೆಚ್ಚಿನ ತಲೆಕೆಡಿಸಿಕೊಂಡಿದ್ದಾರೆ.
ಪ್ರಮುಖರಿಂದಲೇ ಪ್ರಚಾರ: ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರಕ್ಕೆ ಆಯಾ ಭಾಗದ ಶಾಸಕರು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಸಿಎಂ, ಮಾಜಿ ಸಿಎಂ ಸೇರಿದಂತೆ ಬಹುತೇಕರು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದು ಚುನಾವಣಾ ಕಣ ರಂಗಾಗಿತ್ತು. ತಮ್ಮ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಲೇಬೆಕೆಂದು ಪಣತೊಟ್ಟು ಪ್ರಚಾರ ಕೈಗೊಂಡ ಪ್ರಮುಖ ಪಕ್ಷಗಳ ಪ್ರಭಾವಿ ನಾಯಕರೇ ಪ್ರಚಾರ ಮಾಡುವ ಮೂಲಕ ನಮಗೆ ಈ ಚುನಾವಣೆ ಎಷ್ಟೊಂದು ಮುಖ್ಯ ಎನ್ನುವುದನ್ನು ಪರೋಕ್ಷವಾಗಿ ಸಾರಿ ಹೇಳಿದ್ದಾರೆ.
ಪ್ರತಿಷ್ಠೆ: ಎಲ್ಲ ಪಕ್ಷಗಳಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಗಜೇಂದ್ರಗಡದಲ್ಲಿ ಅತ್ಯಂತ ಬಿರುಸಿನ ಪ್ರಚಾರ ನಡೆಸಿದರು. ರೋಣ ಮಾಜಿ ಶಾಸಕ ಜಿ.ಎಸ್. ಪಾಟೀಲ್ ನರೇಗಲ್ಲ ಮತ್ತು ರೋಣ ಪಟ್ಟಣದಲ್ಲಿ ಹೆಚ್ಚಿನ ಪ್ರಚಾರ ಮಾಡಿದ್ದಾರೆ. ಶಿರಹಟ್ಟಿ ತಾಲೂಕಿನಲ್ಲಿ ಶಾಸಕ ರಾಮಣ್ಣ ಲಮಾಣಿ ಪ್ರಚಾರಕ್ಕೆ ಒತ್ತು ನೀಡಿದ್ದರೂ ಮಾಜಿ ಶಾಸಕ, ಬಿಎಸ್ಆರ್ ಜಿಲ್ಲಾಧ್ಯಕ್ಷ ಗಂಗಣ್ಣ ಮಾಹಾಂತಶೆಟ್ಟರ್ಗೆ ಹೋಲಿಕೆ ಮಾಡಿದಲ್ಲಿ ಕಡಿಮೆ ಎನಿಸುತ್ತದೆ. ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಈ ಚುನಾವಣೆಯಲ್ಲಿ ಸಕ್ರೀಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವ ಆರೋಪ ಬಿಜೆಪಿಯಿಂದಲೇ ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

