ಗದಗ

ಮಾಂಗಲ್ಯ ಕಟ್ಟಿದ ಕೆಲವೇ ಗಂಟೆಗಳಲ್ಲಿ ಮದುಮಗ ಮಸಣಕ್ಕೆ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 20
ಮಾಂಗಲ್ಯ ಕಟ್ಟಿದ ಕೈ ಕೊರಳಿಂದ ತೆಗೆಯುವ ಮುನ್ನವೇ ಮಾಂಗಲ್ಯ ಕಟ್ಟಿದಾತ ಮಸಣ ಸೇರಿದ ಹೃದಯ ವಿದ್ರಾವಕ ಘಟನೆ ಸಮೀಪದ ರಾಮಗಿರಿಯಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ನಾಗರಾಜ ಪೂಜಾರ(28) ಅದೇ ಗ್ರಾಮದ ಪುಷ್ಪಾ(ಸುಧಾ) ಎಂಬುವವಳ ಜತೆ ಸೋಮವಾರ ಬೆಳಗ್ಗೆ ಮದುವೆಯ ಅಕ್ಷತೆ 12.15ಕ್ಕೆ ಜರುಗಿ, ಮದುವೆಗೆ ಬಂದ ಬಂಧು-ಬಾಂಧವರು, ಸ್ನೇಹಿತರು ವಧು-ವರರನ್ನು ಹರಸಿ ಊಟ ಮಾಡಿ ಮನೆಗೆ ತೆರಳುತ್ತಿದ್ದರು. ಮದುವೆಯ ಕಾರ್ಯಗಳೆಲ್ಲ ಸುಸೂತ್ರವಾಗಿ ಜರುಗಿ ಸಂಪ್ರದಾಯದಂತೆ ಕೊನೆಯಲ್ಲಿ ಮದುಮಕ್ಕಳಿಬ್ಬರೂ ಸೇರಿ ಊಟ ಮಾಡುವ ಸಂದರ್ಭದಲ್ಲಿ ದುರ್ದೈವಿ ನಾಗರಾಜನಿಗೆ ಸಣ್ಣಗೆ ಎದೆನೋವು ಕಾಣಿಸಿಕೊಂಡಿದೆ. ಊಟ ಮಾಡುವುದನ್ನು ಬಿಟ್ಟು ತಕ್ಷಣವೇ ನಾಗರಾಜನನ್ನು ಲಕ್ಷ್ಮೇಶ್ವರದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ತೀವ್ರ ಹೃದಯಾಘಾತದಿಂದ ನಾಗರಾಜ ಕೊನೆಯುಸಿರು ಎಳೆದಿದ್ದಾನೆ. ಕೊನೆಗೆ ಆಸ್ಪತ್ರೆಗೆ ತಂದಾಗ ವೈದ್ಯರು ಸಾವನ್ನು ಖಚಿತಪಡಿಸಿದ್ದಾರೆ. ಮದುಮಗಳ ನೋವು ಕೇಳುವವರ್ಯಾರುಯ ?
ಹಸೆಮಣೆ ಏರಿ ಹೊಸಬಾಳಿನ ಹೊಂಗನಸನ್ನು ಕಾಣುತ್ತಿದ್ದ ಪುಷ್ಪಾ(ಸುಧಾ)ಳಿಗೆ ಸೋಮವಾರ ಕೆಲವೇ ಕ್ಷಣಗಳಲ್ಲಿ ತನ್ನ ಮುತೈದೆತನವನ್ನು ಕಳೆದುಕೊಂಡು ಯಾತನೆ ಅನುಭವಿಸುತ್ತಿರುವುದನ್ನು ಕಂಡು ಗ್ರಾಮದ ಜನತೆ ಇಂತಹ ನೋವನ್ನು ಯಾವ ಪಾಪಿಗೂ, ಯಾವ ವೈರಿಗೂ ನೀಡಬೇಡ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮದುವೆಯ ಮನೆ ನಾಗರಾಜನ ಸಾವಿನ ನಂತರ ಮಸಣದಂತಾಯಿತು. ಬಂಧು-ಬಾಂಧವರು ಒಬ್ಬರನ್ನೊಬ್ಬರು ವಿಧಿಯನ್ನು ಹಳಿಯುತ್ತಾ ಕಣ್ಣೀರ ಕೋಡಿ ಹರಿಸುತ್ತಾ ಕಂಬನಿ ಗರೆಯುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.