ಗುಣಮಟ್ಟದ ಹೋಟೆಲ್ ಸ್ಥಾಪನೆಗೆ ಸಂಕಲ್ಪ: ಮುಳಗುಂದ
ಗದಗ: ಸಾಮಾನ್ಯ ಜನರ ಕೈಗೆಟುಕುವ ಮಾದರಿಯಲ್ಲಿ ಉತ್ಕೃಷ್ಟ, ಗುಣಮಟ್ಟದ ಹೋಟೆಲ್ ಸ್ಥಾಪಿಸುವ ಮೂಲಕ ಬೆಟಗೇರಿ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಚಿತ್ರಣ ಬದಲಾವಣೆಯ ಸಂಕಲ್ಪ ಮಾಡಲಾಗಿದೆ ಎಂದು ಶಿವರತ್ನ ಪ್ಯಾಲೇಸ್ನ ಸಂಸ್ಥಾಪಕ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಹೇಳಿದರು. ಅವರು ಶುಕ್ರವಾರ ಬೆಟಗೇರಿ ಹೊರವಲಯದ ನರಸಾಪುರ ಬಳಿಯ ಶಿವರತ್ನ ಕ್ಯಾಂಪಸ್ ಆವರಣದಲ್ಲಿ ನೂತನ ಶಿವರತ್ನ ಪ್ಯಾಲೇಸ್ ಕಟ್ಟಡದ ಭೂಮಿಪೂಜಾ ಸಮಾರಂಭದಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಕಾರದಲ್ಲಿ ಸುಮಾರು ರು. 3 ಕೋಟಿ ವೆಚ್ಚದಲ್ಲಿ ಬೃಹತ್ ಹೋಟೆಲ್ ಉದ್ಯಮ ಸ್ಥಾಪನೆಗೆ ಚಾಲನೆ ನೀಡಲಾಗಿದ್ದು, ಗದಗ ಜಿಲ್ಲೆಯಲ್ಲಿಯೇ ರೆಸಾರ್ಟ್ ಮತ್ತು ಕ್ಲಬ್ ಹೊಂದಿರುವ ಹೋಟೆಲ್ ಪ್ರಾರಂಭಿಸಲಾಗುತ್ತಿರುವುದು ಪ್ರಥಮ ಪ್ರಯೋಗವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗುತ್ತಿರುವ ಈ ಹೋಟೇಲ್ ಉದ್ಯಮ ಈ ಭಾಗದ ಪ್ರಖ್ಯಾತ ಜವಳಿ ಉದ್ಯಮದ ಉನ್ನತಿ ಹಾಗೂ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಸಹಕಾರಿಯಾಗಲಿದೆ. 6 ತಿಂಗಳುಗಳಲ್ಲಿಯೇ ಹೋಟೆಲ್ ಪ್ರಾರಂಭಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಜನರಲ್ ಮ್ಯಾನೇಜರ್ ಎಲ್.ಬಿ. ನಿಲೂಗಲ್ ಮಾತನಾಡಿ, ರಾಜ್ಯ ಹಣಕಾಸು ಸಂಸ್ಥೆಯು ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸಿಂಗ್ ಹೋಂ, ಸಣ್ಣ ಕೈಗಾರಿಕೆಗಳು, ಹೋಟೆಲ್ ಉದ್ಯಮಗಳನ್ನು ಪ್ರಮುಖ ಗುರಿಯಾಗಿರಿಸಿಕೊಂಡು ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ದೊರಕಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ ಹಾಗೂ ರಾಜ್ಯ ಹಣಕಾಸು ಸಂಸ್ಥೆಯ ಗದಗ ಶಾಖೆಯ ವ್ಯವಸ್ಥಾಪಕ ಎ.ಎಲ್. ಗೊರೇಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆಯ ಮಾಜಿ ಅಧ್ಯಕ್ಷೆ ನಾಗರತ್ನಾ ಮುಳಗುಂದ, ಆರ್. ಸತ್ಯನಾರಾಯಣ, ವಿಜಯ ಕಬಾಡಿ, ಬಿ.ವಿ. ರೋಣದ, ಅಮರೇಶ ಚಾಗಿ, ಅನಿಲ ಗಡ್ಡಿ, ನೀಲಮ್ಮ ಬೋಳನವರ, ರಮೇಶ ಹತ್ತಿಕಾಳ, ನಗರಸಭೆಯ ಸದಸ್ಯರಾದ ಜ್ಯೋತಿ ಇರಾಳ, ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಕರಿ, ನಾಗಲಿಂಗ ಐಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲೀಕ ಶಂಕರ ಮುಳಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಳಗುಂದ ನಿರೂಪಿಸಿದರು. ಅವಳಿ ನಗರದ ವೈದ್ಯರು, ಅಭಿಯಂತರು ಸೇರಿದಂತೆ ಹಲವಾರು ಯುವ ಉದ್ಯಮಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

